ಮುಖ್ಯ ಸುದ್ದಿ
ಮುಖ್ಯ ರಸ್ತೆಯಲ್ಲೇ ಮೊಣಕಾಲುದ್ದ ಗುಂಡಿ | ಸಿಸಿ ರಸ್ತೆ ಸಮಸ್ಯೆ ಇಲ್ಲ ಅಂದುಕೊಂಡ್ರೆ ಮುಗ್ಗರಿಸಿ ಬೀಳೋದು ಗ್ಯಾರೆಂಟಿ
CHITRADURGA NEWS | 29 JANUARY 2024
ಚಿತ್ರದುರ್ಗ: ನಗರದಲ್ಲಿ ವಿಶಾಲವಾದ, ಸಿಮೆಂಟ್ ರಸ್ತೆಗಳೇನೋ ನಿರ್ಮಾಣವಾಗಿವೆ. ಇದರಿಂದ ಚಿತ್ರದುರ್ಗ ಸುಂದರವಾಗಿಯೂ ಕಾಣುತ್ತಿದೆ. ಆದರೆ, ಅನ್ನದಲ್ಲಿ ಕಲ್ಲು ಸಿಕ್ಕಿದಂತೆ ಅಲ್ಲಲ್ಲಿ ಗುಂಡಿಗಳಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿ ಚಂದ್ರವಳ್ಳಿ ಬಳಿ ಮುಖ್ಯ ರಸ್ತೆಯಲ್ಲೇ ಮೊಣಕಾಲುದ್ದದ ಗುಂಡಿ ಇದೆ. ಬೈಕ್ ಸವಾರರು ರಸ್ತೆ ನೇರವಾಗಿದೆ, ಚೆನ್ನಾಗಿದೆ ಎಂದು ಗಮನಿಸಿದೆ ಹೋದರೆ ಬಿದ್ದು ಕೈ ಕಾಲು ಮುರಿದುಕೊಳ್ಳುವುದು ಗ್ಯಾರೆಂಟಿ.
ಕಾರು ಚಾಲಕರು ಕೂಡಾ ಹೊಸ ರಸ್ತೆ ಎಂಬ ಹಮ್ಮಿನಲ್ಲಿ ಹೋದರೆ ಈ ರಸ್ತೆಯಲ್ಲಿರುವ ಗುಂಡಿ ನಿಮ್ಮ ಕಾರಿನ ಸೊಕ್ಕು ಮುರಿಯುವುದರಲ್ಲಿ ಯಾವ ಅನುಮಾನವೂ ಇಲ್ಲ.
ಇದನ್ನೂ ಓದಿ: 33 ಸಾವಿರ ಕೆಜಿ ಚಿಕನ್ ಬಿರಿಯಾನಿ
ಇದು ಹೊಳಲ್ಕೆರೆ ರಸ್ತೆಗೆ ಮಾತ್ರ ಸೀಮಿತವಾಗಿಲ್ಲ, ನಗರಾದ್ಯಂತ ಹೊಸದಾಗಿ ನಿರ್ಮಾಣವಾಗಿರುವ ಸಿಸಿ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಗಳು ಸಾಮಾನ್ಯವಾಗಿವೆ.
ಡ್ರೈನೇಜ್, ಯುಜಿಡಿ, ನೀರಿನ ಪೈಪ್‍ಲೇನ್, ಕೇಬಲ್ ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ರಸ್ತೆಯಲ್ಲಿ ಗುಂಡಿಗಳು ಹಾಗೇ ಉಳಿದುಕೊಂಡಿವೆ.
ಸದ್ಯಕ್ಕೆ ಮುಖ್ಯ ರಸ್ತೆಗಳಲ್ಲಿರುವ ಇಷ್ಟು ದೊಡ್ಡ ಗುಂಡಿಗಳನ್ನು ಸಂಬಂಧಪಟ್ಟ ಇಲಾಖೆಯವರು ಮುಚ್ಚದೆ ಇದ್ದರೆ ಪ್ರಾಣಾಪಾಯ ನಿಶ್ಚಿತ.
ಇದೇ ರಸ್ತೆಯಲ್ಲಿ ಹೊಳಲ್ಕೆರೆ ಕಡೆಯಿಂದ ಚಿತ್ರದುರ್ಗಕ್ಕೆ ಬರುವಾಗ ಎಸ್‍ಜೆಎಂ ಕಾಲೇಜು ಮುಂಭಾಗದಲ್ಲಿ ಯುಜಿಡಿ ಒಂದರಿಂದ ನಿರಂತವಾಗಿ ಕೊಳಚೆ ನೀರು ಹೊರಗೆ ಬರುತ್ತಲೇ ಇರುತ್ತದೆ. ನಿತ್ಯವೂ ಇಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ವಾಹನಗಳು ಸಂಚರಿಸುತ್ತವೆ.
ಇದನ್ನೂ ಓದಿ: ಪ್ರಮಾದಕ್ಕೆ ವಿಷಾಧ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
ಅಧಿಕಾರಿಗಳಿಗೂ ಈ ವಿಚಾರ ಗೊತ್ತಿದೆ. ಆದರೆ, ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಹೊಳಲ್ಕೆರೆ ರಸ್ತೆಯಲ್ಲಿರುವ ಗುಂಡಿಯ ಅಪಾಯದ ಬಗ್ಗೆ ನಾಗರೀಕರೊಬ್ಬರು ಪೋಟೋ ತೆಗೆದು ವಾಯ್ಸ್ ಮೆಸೇಜ್ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಸಂಬಂಧಪಟ್ಟವರಿಗೆ ಇದನ್ನು ತಲುಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ತಕ್ಷಣ ನಗರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಬೇಕಿದೆ.