Connect with us

    ದಂಪತಿ ಬಹಿಷ್ಕಾರ ಪ್ರಕರಣ | ಶಾಂತಿಯುತ ಅಂತ್ಯ | ಎನ್.ದೇವರಹಳ್ಳಿಗೆ ವಿಶೇಷ ಚೇತನ ದಂಪತಿ ಪ್ರವೇಶ

    ಎನ್.ದೇವರಹಳ್ಳಿಗೆ ವಿಶೇಷ ಚೇತನ ದಂಪತಿ ಪ್ರವೇಶ

    ಕ್ರೈಂ ಸುದ್ದಿ

    ದಂಪತಿ ಬಹಿಷ್ಕಾರ ಪ್ರಕರಣ | ಶಾಂತಿಯುತ ಅಂತ್ಯ | ಎನ್.ದೇವರಹಳ್ಳಿಗೆ ವಿಶೇಷ ಚೇತನ ದಂಪತಿ ಪ್ರವೇಶ

    ಚಿತ್ರದುರ್ಗ ನ್ಯೂಸ್.ಕಾಂ: ಮಾತು ಬಾರದ, ಕಿವಿ ಕೇಳದ ಸಾವಿತ್ರಿ ಹಾಗೂ ಮಣಿಕಂಠ ಎಂಬ ವಿಶೇಷ ಚೇತನ ದಂಪತಿಗಳನ್ನು ಹಸುಗೂಸಿನ ಸಮೇತ ಗ್ರಾಮದಿಂದ ಬಹಿಷ್ಕಾರ ಹಾಕಿದ್ದ ಪ್ರಕರಣ ಶಾಂತಿಯುತವಾಗಿ ಅಂತ್ಯಗೊಂಡಿದ್ದು, ಶನಿವಾರ ದಂಪತಿಯನ್ನು ಎನ್.ದೇವರಹಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ಬರಮಾಡಿಕೊಂಡಿದ್ದಾರೆ.

    ಈ ಬಗ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾಹಿತಿ ನೀಡಿದ್ದು, ಬಹಿಷ್ಕಾರ ಹಾಕಲಾಗಿದೆ ಎನ್ನುವ ಮಾಹಿತಿ ತಿಳಿದ ತಕ್ಷಣ ಗ್ರಾಮಕ್ಕೆ ಅಧಿಕಾರಿಗಳನ್ನು ಕಳುಹಿಸಿ ಎಲ್ಲ ಮಾಹಿತಿ ಪಡೆದುಕೊಂಡು ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು.

    ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ನಮ್ಮ ಸಮಾಜದಲ್ಲಿ ಮನೆಮಾಡಿರುವ ಸಾಮಾಜಿಕ ಪಿಡುಗಾಗಿದ್ದು, ಮುಂದುವರೆದಂತಹ ಈ ತಂತ್ರಜ್ಞಾನದ ಯುಗದಲ್ಲಿಯೂ ಇಂತಹ ಅನಿಷ್ಟ ಕಟ್ಟುಪಾಡಿನ ಆಚರಣೆಗಳು ನಾಗರಿಕರನ್ನು ತಲೆತಗ್ಗಿಸುವಂತೆ ಮಾಡುತ್ತದೆ.

    ಇದನ್ನೂ ಓದಿ: ಹಸುಗೂಸಿನ ಜತೆ ದಂಪತಿ ಬಹಿಷ್ಕಾರ; ಎನ್.ದೇವರಹಳ್ಳಿಯಲ್ಲಿ ನಡೆದಿದೆ ಸಮಾಜ ತಲೆ ತಗ್ಗಿಸುವ ಘಟನೆ

    ವಿಶೇಷ ಚೇತನ ದಂಪತಿಗಳಿಗೆ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾದ ಬಳಿಕ, ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಶುಕ್ರವಾರ ಪೊಲೀಸ್, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಗ್ರಾಮ ಪಂಚಾಯತ್ ಸದಸ್ಯರು, ಸಮಾಜದ ಮುಖಂಡರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದ್ದರು. ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ಮರುಕಳಿಸಬಾರದು. ಇಂತಹ ಪ್ರಕರಣವನ್ನು ಬೆಂಬಲಿಸಿದವರು ಕೂಡ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದರು.

    Social boycott

    ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುಬ್ರ ನಾಯಕ್, ತಹಸಿಲ್ದಾರ್ ರೆಹಾನ್ ಪಾಶಾ, ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿ ಸಾರ್ವಜನಿಕರು ಹಾಗೂ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ, ಬಳಿಕ ಇಂತಹ ಪ್ರಕರಣಗಳು ಮರುಕಳಿಸದಂತೆ ಗ್ರಾಮಸ್ಥರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

    ಯಾವುದೇ ಸಮಾಜ ಅಥವಾ ವ್ಯಕ್ತಿಗಳಿಗೆ ದಂಡ ಹಾಕುವ ಅಧಿಕಾರ ಯಾರಿಗೂ ಇಲ್ಲ, ಇಂತಹ ಅಧಿಕಾರ ಕೇವಲ ನ್ಯಾಯಾಲಯಕ್ಕೆ ಮಾತ್ರ ಇದೆ. ಬಹಿಷ್ಕಾರ ಹಾಕುವಂತಹದು ಕಾನೂನಿಗೆ ವಿರುದ್ಧವಾಗಿದ್ದು, ಇದಕ್ಕೆ ಅವಕಾಶ ನೀಡುವವರು, ಬೆಂಬಲಿಸುವವರು ಎಲ್ಲರೂ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ.

    ಗ್ರಾಮದಲ್ಲಿ ಎಲ್ಲ ಜಾತಿ, ಜನಾಂಗದವರು ಇದ್ದಾರೆ, ಎಲ್ಲರೂ ಸೌಹಾರ್ದಯುತವಾಗಿ ಬಾಳುವುದು ನಮ್ಮ ಆದ್ಯತೆಯಾಗಬೇಕು. ಮೂಢನಂಬಿಕೆಗಳನ್ನು ತೊಡೆದುಹಾಕಿ, ಅನಿಷ್ಟ ಕಟ್ಟುಪಾಡುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

    ಎನ್.ದೇವರಹಳ್ಳಿಗೆ ವಿಶೇಷ ಚೇತನ ದಂಪತಿ ಪ್ರವೇಶ

    ಎನ್.ದೇವರಹಳ್ಳಿಗೆ ವಿಶೇಷ ಚೇತನ ದಂಪತಿ ಪ್ರವೇಶ

    ವಿಶೇಷ ಚೇತನ ದಂಪತಿಗಳನ್ನು ಅಧಿಕಾರಿಗಳು ಶನಿವಾರದಂದು ಗ್ರಾಮಕ್ಕೆ ಕರೆತಂದ ಬಳಿಕ, ಗ್ರಾಮಸ್ಥರು ಕೂಡ ದಂಪತಿಗಳನ್ನು ಬರಮಾಡಿಕೊಂಡರು, ಒಟ್ಟಾರೆಯಾಗಿ ಈ ಪ್ರಕರಣವನ್ನು ದಂಪತಿಗಳು ಗ್ರಾಮದಲ್ಲಿನ ತಮ್ಮ ಮನೆ ಸೇರುವ ಮೂಲಕ ಜಿಲ್ಲಾಡಳಿತದ ವತಿಯಿಂದ ಶಾಂತಿಯುತವಾಗಿ ಇತ್ಯರ್ಥಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎನ್. ದೇವರಹಳ್ಳಿ ಗ್ರಾಮದಲ್ಲಿಯೂ ಕೂಡ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top