ಮುಖ್ಯ ಸುದ್ದಿ
ಹಾಸ್ಟೆಲ್ ನಿರ್ವಹಣೆಗೆ ಲೋಕಾಯುಕ್ತರ ಮೆಚ್ಚುಗೆ | ಲೈಬ್ರರಿ ತೆರೆಯಲು ಸಲಹೆ
CHITRADURGA NEWS | 25 JANUARY 2025
ಚಿತ್ರದುರ್ಗ: ಸರ್ಕಾರ ವಿದ್ಯಾರ್ಥಿ ನಿಲಯಗಳನ್ನು ತೆರೆದು, ಎಲ್ಲ ಸೌಲಭ್ಯಗಳನ್ನು ನೀಡಿದೆ. ಚೆನ್ನಾಗಿ ಓದಿ ಕೆಲಸ ಸಂಪಾದಿಸುವುದರ ಜೊತೆಗೆ ನಾಡಿಗೂ ಒಳಿತು ಮಾಡಿ. ಪ್ರಾಮಾಣಿಕ ಜೀವನ ನಡೆಸಿ, ಭ್ರಷ್ಟಾಚಾರವನ್ನು ಸಹಿಸದಿರಿ, ಭ್ರಷ್ಟಾಚಾರದಲ್ಲಿ ತೊಡಗದಿರಿ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Also Read: RTO ಕಚೇರಿಯಲ್ಲಿ ಕಡತ ನಿರ್ವಹಣೆಯ ವೈಪಲ್ಯ | ಸುಮೋಟೊ ಕೇಸ್
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ನಡೆಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯಗಳು ಹಾಗೂ ಮಕ್ಕಳ ರಕ್ಷಣಾ ಘಟಕದಿಂದ ನಿರ್ವಹಿಸುತ್ತಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ವಿದ್ಯಾರ್ಥಿ ದೆಸೆಯಿಂದಲೇ ಲಂಚ, ಭ್ರಷ್ಟಾಚಾರದ ವಿರುದ್ದ, ಹೋರಾಟ ಮಾಡುವ ಮನೋಭಾವ ಬೆಳಸಿಕೊಳ್ಳಿ. ಭ್ರಷ್ಟಾಚಾರ ಎಲ್ಲೇ ಕಂಡುಬಂದರೂ ಖಂಡಿಸಿ, ಭ್ರಷ್ಟಾಚಾರಕ್ಕೆ ಆಸ್ಪದ ನೀಡದಿರಿ. ಮುಂದೆ ಸರ್ಕಾರಿ ನೌಕರರಾದರೆ, ನಿಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆಯನ್ನು ತಪ್ಪದೇ ಅಳವಡಿಸಿಕೊಳ್ಳಿ.
ಇಂದು ಭ್ರಷ್ಟಾಚಾರ ಎಲ್ಲೆಡೆ ಕಂಡುಬರುತ್ತಿದೆ. ಇದರಿಂದಾಗಿಯೇ ನಮ್ಮ ದೇಶ ಇನ್ನೂ ಅಭಿವೃದ್ಧಿಯಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇಂದಿನ ಯುವಜನತೆಯ ಕೈಯಲ್ಲೇ ದೇಶದ ಮುಂದಿನ ಭವಿಷ್ಯವಿದೆ. ಮುಂದುವರೆದ ರಾಷ್ಟ್ರಗಳ ಸಾಲಿಗೆ ನಮ್ಮ ದೇಶವು ಸೇರ್ಪಡೆಯಾಗಬೇಕು. ಇದಕ್ಕೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.
ವಿದ್ಯಾರ್ಥಿನಿಲಯ ನಿರ್ವಹಣೆಗೆ ಮೆಚ್ಚುಗೆ:
ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ನಗರದ ವಿದ್ಯಾರ್ಥಿನಿಲಯಗಳ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಸ್ಟೆಲ್‍ಗಳ ನಿರ್ವಹಣೆಯಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದವು. ಆದರೆ ಇಲ್ಲಿನ ಹಾಸ್ಟೆಲ್‍ಗಳಲ್ಲಿ ಇದಕ್ಕೆ ಆಸ್ಪದ ನೀಡಿಲ್ಲ ಎಂದರು.
Also Read: ಸರಗಳ್ಳನನ್ನು ಬಂಧಿಸಿದ ಚಳ್ಳಕೆರೆ ಪೊಲೀಸರು | 7 ಸರ, 2 ಬೈಕ್ ವಶಕ್ಕೆ
ಜಿಲ್ಲೆಯ ಹಾಸ್ಟೆಲ್‍ಗಳ ನಿರ್ವಹಣೆಗೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಕೇಂದ್ರವಾದ ಚಿತ್ರದುರ್ಗ ವಿದ್ಯಾರ್ಥಿನಿಲಯಗಳಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ವಾರಕ್ಕೊಮ್ಮೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ವಿದ್ಯಾರ್ಥಿಗಳೊಂದಿಗೆ ಆಹಾರ ಸೇವಿಸಿ ಗುಣಮಟ್ಟ ಪರೀಕ್ಷಿಸುತ್ತಾರೆ. ಮೂಲಭೂತ ಸೌಕರ್ಯಗಳ ಬಗ್ಗೆಯೂ ವರದಿ ನೀಡುತ್ತಾರೆ.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು ಹಾಗೂ ಆಸ್ಪತ್ರೆಗಳ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಡಿಎಂಎಫ್, ಕೆಎಂಇಆರ್‍ಸಿ, ಸಿಎಸ್‍ಆರ್ ಅನುದಾನದಲ್ಲಿ ಹೆಚ್ಚಿನ ಹಣವನ್ನು ಈ ಕ್ಷೇತ್ರಗಳ ಅಭಿವೃದ್ಧಿ ಮೀಸಲಿರಿಸಿರುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಅವರು, ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿಗೆ ವಿವರಿಸಿದರು.
ಕಂಪ್ಯೂಟರ್ ಕೇಂದ್ರ ಹಾಗೂ ಲೈಬ್ರರಿ ತೆರೆಯಲು ಸೂಚನೆ:
ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿನ ಪಿ.ಯು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಂಪ್ಯೂಟರ್ ಕಲಿಕಾ ಕೇಂದ್ರ ಹಾಗೂ ಲೈಬ್ರರಿ ತೆರೆಯಲು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸೂಚನೆ ನೀಡಿದರು.
Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಶನಿವಾರದ ಹತ್ತಿ ರೇಟ್ ಎಷ್ಟಿದೆ?
ಸರ್ಕಾರಿ ನೇಮಕಾತಿಗಳಲ್ಲಿ ಕಂಪ್ಯೂಟರ್ ಸಾಕ್ಷರತೆಯನ್ನು ಕಡ್ಡಾಯಗೊಳಿಸಲಾಗಿದೆ. ಉನ್ನತ ಶಿಕ್ಷಣಕ್ಕೂ ಕಂಪ್ಯೂಟರ್ ಜ್ಞಾನ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಕಲಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅನುಕೂಲವಾಗುವಂತೆ, ಸಿಎಸ್‍ಆರ್ ನಿಧಿಯಡಿ ಕಂಪ್ಯೂಟರ್ ಕೇಂದ್ರ ಹಾಗೂ ಲೈಬ್ರರಿ ತೆರೆಯಲು ಹೇಳಿದರು.
ವಿದ್ಯಾರ್ಥಿಗಳ ಓದಿನ ಅನುಕೂಲಕ್ಕಾಗಿ ಟೇಬಲ್ ಹಾಗೂ ಚೇರ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರದ ಅಚ್ಚುಕಟ್ಟಿನ ನಿರ್ವಹಣೆಗೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸಂತಸ ವ್ಯಕ್ತಪಡಿಸಿದರು.
ಬಾಲಕಿಯರ ಸರ್ಕಾರಿ ಬಾಲಮಂದಿರ ಬಳಿ ಆಗಮಿಸಿದ ಪೋಷಕರು ಬಾಲಮಂದಿರ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮನೆಗಿಂತಲೂ ಹೆಚ್ಚಿನ ಸೌಲಭ್ಯ ನಮ್ಮ ಮಕ್ಕಳಿಗೆ ಇಲ್ಲಿ ದೊರೆಯುತ್ತಿದೆ ಎಂಬ ಅಭಿಪ್ರಾಯವನ್ನು ನ್ಯಾಯಮೂರ್ತಿಗಳ ಮುಂದೆ ತಿಳಿಸಿದರು. ಬಾಲಮಂದಿರದ ಮಕ್ಕಳಿಗೆ ಜಿಪಂ ಸಿಇಒ ಸೋಮಶೇಖರ್ ಅವರು ಸ್ವಂತ ಹಣದಲ್ಲಿ ವಿವಿಧ ಬಗೆಯ ಆಟಿಕೆಗಳನ್ನು ಪೂರೈಸಿದ್ದನ್ನು ತಿಳಿದು, ನ್ಯಾಯಮೂರ್ತಿಗಳು ಸಂತಸ ವ್ಯಕ್ತಪಡಿಸಿದರು.
Also Read: ರೈತರಿಂದ KEB ಸ್ಟೇಷನ್ ಮುತ್ತಿಗೆ | ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್, ಲೋಕಾಯುಕ್ತ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಿ. ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ಎಂ.ವಿಜಯ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಸುಬ್ರಾ ನಾಯಕ್, ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.