ಮುಖ್ಯ ಸುದ್ದಿ
ಸಂಸ್ಕಾರ ಭಾರತಿಯಿಂದ ರಾಣಿ ಚೆನ್ನಮ್ಮ, ಒನಕೆ ಓಬವ್ವ ಜಯಂತಿ
CHITRADURGA NEWS | 15 DECEMBER 2024
ಚಿತ್ರದುರ್ಗ: ಭಾರತೀಯ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಯುವ ಶಕ್ತಿಯ ಕೈಯಲ್ಲಿ ಇದೆ ಎಂದು ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ ಮಾತೃಶಕ್ತಿ ಸಹ ಪ್ರಮುಖರಾದ ಹೆಚ್.ಎನ್.ವರಲಕ್ಷ್ಮೀ ತಿಳಿಸಿದರು.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಮತ್ತೆ ಆರಂಭವಾಯ್ತು ಒಳಹರಿವು | ಇಂದಿನ ನೀರಿನ ಮಟ್ಟ ಎಷ್ಟು ?
ನಗರದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ ಹಾಗೂ ಹಿಮಂತ ಮಹಿಳಾ ವಿಕಾಸ ಸಂಸ್ಥೆ ಚಿತ್ರದುರ್ಗ ವತಿಯಿಂದ ಆಯೋಜಿಸಿದ್ದ ದೇವಿ ಅಹಲ್ಯಾಬಾಯಿ ಹೋಳ್ಕರ್ ತ್ರಿಶತ ಜನ್ಮಶತಾಬ್ದಿ ಅಂಗವಾಗಿ ಕಿತ್ತೂರ ರಾಣಿ ಚನ್ನಮ್ಮ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭರತ ಭೂಮಿ ಪುಣ್ಯದ ಭೂಮಿ. ಇಲ್ಲಿ ಸಾಧು ಸಂತರು ದಾರ್ಶನಿಕರು ವೀರರು ತಮ್ಮ ಅದ್ವಿತೀಯ ಶಕ್ತಿಯಿಂದ ಮನೋಬಲದಿಂದ ಪರೋಪಕಾರದಿಂದ ಈ ನೆಲವನ್ನು ಪಾವನಗೊಳಿಸಿದ್ದಾರೆ. ಇಂತಹ ಮಹನೀಯರ ವಿಚಾರಧಾರೆಗಳನ್ನು ಯುವ ಜನಾಂಗಕ್ಕೆ ಪರಿಚಯಿಸಿ ಅವರಿಗೆ ರಾಷ್ಟ್ರಭಕ್ತಿ ಮತ್ತು ಸಂಸ್ಕಾರವಂತ ಪ್ರಜೆಗಳನ್ನಾಗಿ ರೂಪಿಸಿ, ಯುವತಿಯರಿಗೆ ಮನೋಸ್ಥೈರ್ಯ ನೀಡುವ ಕೆಲಸವನ್ನು ಸಂಸ್ಕಾರ ಭಾರತಿ ಮಾಡುತ್ತಿದೆ ಎಂದರು.
ಕಲೆ ಸಾಹಿತ್ಯ ಸಂಸ್ಕೃತಿ ಉಳಿವಿಗಾಗಿ ಸಂಸ್ಕಾರ ಭಾರತಿಯಂತಹ ರಾಷ್ಟ್ರಮಟ್ಟದ ಸಂಘಟನೆ ಹಿರಿಯರು ನಮಗಾಗಿ ಕಟ್ಟಿಕೊಟ್ಟಿದ್ದಾರೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಮತ್ತು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಕಲೆ ವಿಲಾಸಕ್ಕಾಗಿ ಅಲ್ಲ ವಕ್ತಿಯ ವಿಕಾಸಕ್ಕಾಗಿ ಎನ್ನುವುದೇ ಧ್ಯೇಯ.
ಕ್ಲಿಕ್ ಮಾಡಿ ಓದಿ: ಚಳ್ಳಕೆರೆಯಲ್ಲಿ ಏಕಲವ್ಯ ವಸತಿ ಶಾಲೆಗೆ ಪ್ರಸ್ತಾವನೆ | ಕೇಂದ್ರ ಸಚಿವರನ್ನು ಭೇಟಿಯಾದ ಕಾರಜೋಳ
ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಸಂಸ್ಕಾರ ಪರಿಶ್ರಮ ಬೇಕು ನೀವುಗಳು ನಿಮ್ಮ ತಂದೆ ತಾಯಿ ಕುಟುಂಬದ ಬಗ್ಗೆ ಅಭಿಮಾನ ಮತ್ತು ಗೌರವ ಇಟ್ಟುಕೊಂಡು ಉತ್ತಮ ಶಿಕ್ಷಣ ಪಡೆದು ಕುಟುಂಬದ ಗೌರವ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ನಿವೃತ್ತ ಉಪನ್ಯಾಸಕಿ ಸಿ.ಬಿ.ಶೈಲಜಾ ಮಾತನಾಡಿ, ಸನ್ನಿವೇಶದ ಬಲದಿಂದ ಕೆಲವರು ದೊಡ್ಡವರಾಗುತ್ತಾರೆ. ಕುಳಿತ ಪೀಠದಿಂದ ಕೆಲವರು ದೊಡ್ಡವರಾಗುತ್ತಾರೆ. ಹಣ ಐಶ್ವರ್ಯದಿಂದಲೂ ದೊಡ್ಡವರಾದವರು ಇದ್ದಾರೆ. ಆದರೆ, ಕಿತ್ತೂರ ರಾಣಿ ಚನ್ನಮ್ಮ ಒನಕೆ ಓಬವ್ವ ಅವರಂತಹ ಮಹಿಳೆಯರು ಸ್ವಾತಂತ್ರ‍್ಯಕ್ಕಾಗಿ ಸ್ವಾಭಿಮಾನಕ್ಕಾಗಿ ಹೋರಾಡಿ ದೊಡ್ಡವರಾಗಿ ನಮಗೆಲ್ಲ ಸ್ಫೂರ್ತಿಯಾಗಿದ್ದಾರೆ.
ಇಂತಹ ವೀರ ನಾರಿಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನೆಡೆಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತ್ಯ ವಿಧಾ ಪ್ರಮುಖ್ ಚಂದ್ರಿಕಾ ಸುರೇಶ್ ಮಾತನಾಡಿ, ಅಹಲ್ಯಾಬಾಯಿ ಹೋಳ್ಕರ್ ಅವರು ಹಲವಾರು ಸಂಕಷ್ಟಗಳನ್ನು ಎದುರಿಸಿ, ದೇಶದ ಗುಡಿ ಗೋಪುರಗಳ ನಿರ್ಮಾಣ ಹಾಗೂ ಮಹಿಳೆಯರ ಸ್ವಾವಲಂಬನೆಗಾಗಿ ಮತ್ತು ಕಲೆ ಸಾಹಿತ್ಯ ಸಂಸ್ಕೃತಿಯ ಪುನರುಜ್ಜೀವನಕ್ಕೆ ತಮ್ಮ ಜೀವನವನ್ನು ಮುಡಿಪಾಗಿರಿಸಿದ ಮಹನೀಯರು ಎಂದರು.
ಕ್ಲಿಕ್ ಮಾಡಿ ಓದಿ: ನಾಳೆ ಶ್ರೀ ನೀಲಕಂಠೇಶ್ವರ ಸ್ವಾಮಿ ಕಾರ್ತಿಕ ಮಹೋತ್ಸವ
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಪ್ರಶ್ನೋತ್ತರ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿ.ಪಂ. ಮಾಜಿ ಅಧ್ಯಕ್ಷೆ ಹಾಗೂ ಹಿಮಂತ ಮಹಿಳಾ ವಿಕಾಸ ಸಂಸ್ಥೆ ಅಧ್ಯಕ್ಷೆ ಶಾಂತಮ್ಮ, ನಿಲಯ ಪಾಲಕಿಯರಾದ ಡಿ.ಒ.ಯಶೋದಮ್ಮ, ಎಸ್.ಆರ್.ಅನಿತ, ರೇಣುಕಮ್ಮ, ಪುಷ್ಪ ಉಪಸ್ಥಿತರಿದ್ದರು.