ಕ್ರೈಂ ಸುದ್ದಿ
ವ್ಯಾಪಾರ ಹೆಚ್ಚಾಗವಂತೆ ಪೂಜೆ ಮಾಡುವುದಾಗಿ ಹೇಳಿ ಚಿನ್ನ ಕದ್ದು ಎಸ್ಕೇಪ್
CHITRADURGA NEWS | 08 DECEMBER 2024
ಚಿತ್ರದುರ್ಗ: ವೃದ್ಧೆಯೊಬ್ಬರು ನಡೆಸುತ್ತಿದ್ದ ಬಳೆ ಅಂಗಡಿ ವ್ಯಾಪಾರವಿಲ್ಲದೆ ಬಣಗುಟ್ಟುವುದನ್ನು ಗಮನಿಸಿದ ಖತರ್ನಾಕ್ ಕಳ್ಳನೊಬ್ಬ ವೃದ್ಧೆಗೆ ಯಾಮಾರಿಸಿ 35 ಗ್ರಾಂ ತೂಕದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ.
ಜಿಲ್ಲೆಯ ನಾಯಕನಹಟ್ಟಿ ಪಟ್ಟಣದಲ್ಲಿ ಶನಿವಾರ ಈ ಘಟನೆ ನಡೆದಿದ್ದು, 73 ವರ್ಷದ ಪುಟ್ಟಕ್ಕ ಎಂಬ ವೃದ್ಧೆಯಿಂದ 30 ಗ್ರಾಂ ತೂಕದ ಬಂಗಾರದ ಸರ ಹಾಗೂ 5 ಗ್ರಾಂ ತೂಕದ ಉಂಗುರ ಕಳ್ಳತನ ಮಾಡಿದ್ದಾನೆ.
ಇದನ್ನೂ ಓದಿ: ದಿನ ಭವಿಷ್ಯ | 08 ಡಿಸೆಂಬರ್ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?
ಬಳೆ, ಟೇಪು, ಹೇರ್ಪಿನ್ ಸೇರಿದಂತೆ ಸಣ್ಣಪುಟ್ಟ ವಸ್ತುಗಳನ್ನು ಇಟ್ಟುಕೊಂಡು ಜೀವನ ಕಟ್ಟಿಕೊಂಡಿದ್ದ ಪುಟ್ಟಕ್ಕನ ಅಂಗಡಿಗೆ ಗ್ರಾಹಕರು ವಿರಳವಾಗಿರುವುದನ್ನು ಗಮನಿಸಿ ಈ ಕೃತ್ಯ ಎಸಗಲಾಗಿದೆ.
ಶನಿವಾರ ಪುಟ್ಟಕ್ಕನ ಅಂಗಡಿಗೆ ಬಂದ ಕಳ್ಳ, ಗಾಜಿನ ಬಳೆ ವ್ಯಾಪಾರ ಮಾಡಿದ್ದಾನೆ. ಆನಂತರ ನಿಮ್ಮ ಅಂಗಡಿಯಲ್ಲಿ ವ್ಯಾಪಾರ ಕಡಿಮೆಯಾಗಿದೆ. ನಿಮಗೆ ದೇವರ ಕೃಪೆ ಬೇಕಾಗಿದೆ. ವ್ಯಾಪಾರ ಹೆಚ್ಚಾಗುವಂತೆ ಪೂಜೆ ಮಾಡುತ್ತೇನೆ ಎಂದು ನಂಬಿಸಿದ್ದಾನೆ.
ಇದನ್ನೂ ಓದಿ: ಅಡಿಕೆ ಸಾಗಿಸುತ್ತಿದ್ದ 8 ಲಾರಿಗಳು ವಶಕ್ಕೆ | ವಿಜುಲೆನ್ಸ್ ಟೀಮ್ ಅಧಿಕಾರಿಗಳಿಂದ ದಾಳಿ
ತಕ್ಷಣ ನಿಮ್ಮಲ್ಲಿರುವ ಉಂಗುರ ಹಾಗೂ ಸರ ಬಿಚ್ಚಿ ಪೇಪರ್ನಲ್ಲಿ ಸುತ್ತಿಕೊಡಿ, ಪೂಜೆ ಮಾಡುತ್ತೇನೆ ಎಂದು ಪಡೆದುಕೊಂಡು ಕೆಲ ಮಂತ್ರ ಹೇಳಿ, ಮತ್ತೆ ಪೇಪರನ್ನು ವಾಪಾಸು ಕೊಟ್ಟು ನಾಪತ್ತೆಯಾಗಿದ್ದಾನೆ.
ಅವನು ಹೋದ ನಂತರ ಪೇಪರ್ ಬಿಚ್ಚಿ ನೋಡಿದ ಪುಟ್ಟಕ್ಕನಿಗೆ ಅದರಲ್ಲಿ ಬರೀ ಕಲ್ಲಿನ ಹರಳುಗಳಿರುವುದು ಕಂಡುಬಂದಿದೆ. ತಕ್ಷಣ ಕೂಗಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ವಿಷಯ ತಿಳಿದು ಹುಡುಕಾಡಿದರೂ ಕಳ್ಳ ಸಿಕ್ಕಿಲ್ಲ.
ಇದನ್ನೂ ಓದಿ: ಪ್ರೋತ್ಸಾಹ ಧನ ವಿತರಣೆಗೆ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
ಈ ಬಗ್ಗೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಯಕನಹಟ್ಟಿ ಠಾಣೆ ಪಿಎಸ್ಐ ದೇವರಾಜ್, ಇಂತಹ ವಂಚಕರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ಪಾಲೀಶ್ ಮಾಡುವುದು, ಪೂಜೆ ಮಾಡುವುದಾಗಿ ಹೇಳಿ ಕಳ್ಳತನ ಮಾಡುತ್ತಾರೆ ಎಂದು ಎಚ್ಚರಿಸಿದ್ದಾರೆ.