ಮುಖ್ಯ ಸುದ್ದಿ
Land acquisition: ವಾರದೊಳಗೆ ಭೂಸ್ವಾಧೀನ ಪೂರ್ಣಗೊಳಿಸಿ | ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೂಚನೆ
CHITRADURGA NEWS | 24 AUGUST 2024
ಚಿತ್ರದುರ್ಗ: 2027ರ ಮಾರ್ಚ್ ಒಳಗೆ ತುಮಕೂರು– ರಾಯದುರ್ಗ, ತುಮಕೂರು– ದಾವಣಗೆರೆ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಆದ್ದರಿಂದ ಮುಂದಿನ ಒಂದು ವಾರದಲ್ಲಿ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ನಿಗದಿತ ಸಮಯದಲ್ಲಿ ಎಲ್ಲ ಕೆಲಸ ಪೂರ್ಣಗೊಳಿಸಬೇಕು. ಮುಂದಿನ ವಾರದಲ್ಲಿ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಬಾಲ್ಯ ವಿವಾಹ ಪ್ರಕರಣ | ಪೊಲೀಸ್ ವಶಕ್ಕೆ ವರ
ಚಿತ್ರದುರ್ಗ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ‘ಚಿತ್ರದುರ್ಗ– ಭರಮಸಾಗರ ಯೋಜನೆಗೆ ಶೇ 90ರಷ್ಟು ಭೂಮಿ ಹಸ್ತಾಂತರಿಸಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಹಿರಿಯೂರು– ಚಿತ್ರದುರ್ಗ ಯೋಜನೆಗೆ ಶೇ 78ರಷ್ಟು ಭೂಮಿ ಹಸ್ತಾಂತರಿಸಿದೆ. ತಾವರೆಕೆರೆ– ಹಿರಿಯೂರು ಕಾಮಗಾರಿಗೆ 32 ಎಕರೆ ಭೂ ಹಸ್ತಾಂತರ ಬಾಕಿ ಇದೆ. ಮುಂದಿನ ತಿಂಗಳಲ್ಲಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ವಿವರಿಸಿದರು.
ಕ್ಲಿಕ್ ಮಾಡಿ ಓದಿ: ಸಿದ್ದರಾಮಯ್ಯ ಹಠಾವೋ ದಲಿತ್ ಬಚವೋ | 28ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ
‘ತುಮಕೂರು– ರಾಯದುರ್ಗ ರೈಲ್ವೆ ಕಾಮಗಾರಿಗೆ ಶೇ 84ರಷ್ಟು ಭೂಮಿಯ ಹಸ್ತಾಂತರ ಪೂರ್ಣಗೊಂಡಿದೆ. ಕೊರಟಗೆರೆ, ಮಧುಗಿರಿ, ಮಡಕಶಿರಾ ಭಾಗದಲ್ಲಿ ಸ್ವಲ್ಪ ಸಮಸ್ಯೆಯಾಗುತ್ತಿದೆ. ತುಮಕೂರು–ದಾವಣಗೆರೆ ಕಾಮಗಾರಿ ಈಗಾಗಲೇ ಆರಂಭವಾಗಿದೆ. ತಿಮ್ಮರಾಜನಹಳ್ಳಿ– ತಾವರೆಕೆರೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ರೈಲ್ವೆಗೆ 610 ಎಕರೆ ಹಸ್ತಾಂತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಹಿತಿ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎನ್.ವೆಂಕಟೇಶ್, ಡಾ.ಮಂಜುಳಾ ಇದ್ದರು.