ಮುಖ್ಯ ಸುದ್ದಿ
ವಿದ್ಯಾರ್ಥಿ ನಿಲಯ ಪ್ರವೇಶಾತಿ ವಿಳಂಬ | ಎಬಿವಿಪಿ ಜಿಲ್ಲಾ ಘಟಕ ಪ್ರತಿಭಟನೆ

CHITRADURGA NEWS | 03 JULY 2024
ಚಿತ್ರದುರ್ಗ: ವಿದ್ಯಾರ್ಥಿ ನಿಲಯಗಳ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಸಕಾಲಕ್ಕೆ ವಿದ್ಯಾರ್ಥಿ ವೇತನ ಪಾವತಿಸದ ಸರ್ಕಾರದ ನಡೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ವಿದ್ಯಾರ್ಥಿ ನಿಲಯ ಪ್ರವೇಶ ಪ್ರಕ್ರಿಯೆ, ರಾಜ್ಯದಲ್ಲಿ ಸಮಾಜ ಕಲ್ಯಾಣ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಇಲಾಖೆಗಳ ವಿದ್ಯಾರ್ಥಿ ನಿಲಯಗಳ ಸಂಖ್ಯೆ ಹೆಚ್ಚಳ ಹಾಗೂ ಬಾಕಿ ಉಳಿದಿರುವ ಹಿಂದಿನ ವರ್ಷದ ವಿದ್ಯಾರ್ಥಿ ವೇತನವನ್ನು ತಕ್ಷಣವೇ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಕ್ಲಿಕ್ ಮಾಡಿ ಓದಿ: ಎಕ್ಸಿಬಿಷನ್ ಆವರಣದಲ್ಲಿ ಯುವಕ ಸಾವು | ಡ್ಯಾನ್ಸ್ ಮಾಡಲು ಹೋಗಿ ಅವಘಡ
ಕಾಲೇಜು ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾಗಿ ಮೂರು ತಿಂಗಳಾದರು ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಾತಿ ಸಿಗುತ್ತಿಲ್ಲ. ಸಾವಿರಾರು ವಿದ್ಯಾರ್ಥಿಗಳು ಮೂರು ತಿಂಗಳು ಎಲ್ಲಿ ಉಳಿದು ಕೊಂಡು ಶಿಕ್ಷಣ ಪಡೆಯಬೇಕು ಎಂಬುವ ಸಾಮಾನ್ಯ ಜ್ಞಾನ ಸರ್ಕಾರಗಳಿಗೆ ಇಲ್ಲದಂತಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಶೇ 40 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯ ಕಲ್ಪಿಸಿಕೊಡುವ ವ್ಯವಸ್ಥೆಯಿದೆ. ಆದರೆ ಇನ್ನುಳಿದವರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಸರ್ಕಾರ ಕೂಡಲೇ ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಳ ಮಾಡಬೇಕು. ಈ ನಿಟ್ಟಿನಲ್ಲಿ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮೂಲದ ವೈದ್ಯ ಡಾ.ಜಿ.ವಿ.ಬಸವಾಜ್ ಅವರಿಗೆ ಅತ್ಯುನ್ನತ ಪ್ರಶಸ್ತಿ
ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ನಂಬಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಕಳೆದ ವರ್ಷದ ವಿದ್ಯಾರ್ಥಿ ವೇತನ ಜಮೆಯಾಗದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಲಾಗಿದೆ. ವಿದ್ಯಾಸಿರಿಯನ್ನು ಸಹ ಸರಿಯಾಗಿ ಜಮೆ ಮಾಡುತ್ತಿಲ್ಲ. ಈ ಮೂಲಕ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಕಾರ್ಯದರ್ಶಿ ಗೋಪಿ, ಸಾಮಾಜಿಕ ಜಾಲತಾಣದ ಚಿತ್ರಸ್ವಾಮಿ, ಸುದೀಪ್, ಹಾಸ್ಟೆಲ್ ಪ್ರಮುಖ್ ಸಿದ್ದೇಶ್, ಕಾರ್ಯಕರ್ತರಾದ ಮಧು, ಸಂಜು, ತಿಪ್ಪೇಶ, ದರ್ಶನ್, ಮನೋಜ್, ಜೀವನ್ ಇದ್ದರು.
