ಮುಖ್ಯ ಸುದ್ದಿ
ಜಾತಿ ಕಾರಣಕ್ಕೆ ಆರೆಸ್ಸೆಸ್ಸ್ ಮ್ಯೂಸಿಯಂ ಪ್ರವೇಶ ನಿರಾಕರಣೆ: ಗೂಳಿಹಟ್ಟಿ ಶೇಖರ್ | ಹೆಸರು ನೊಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ: ಆರೆಸ್ಸೆಸ್ಸ್
ಚಿತ್ರದುರ್ಗ ನ್ಯೂಸ್.ಕಾಂ: ಮಹಾರಾಷ್ಟ್ರದ ನಾಗಪುರದಲ್ಲಿರುವ ಆರೆಸ್ಸೆಸ್ಸ್ ಕೇಂದ್ರ ಕಚೇರಿ ಬಳಿಯಿರುವ ಡಾ.ಹೆಡಗೇವಾರ್ ಮ್ಯೂಸಿಯಂ ಪ್ರವೇಶಕ್ಕೆ ಜಾತಿಯ ಕಾರಣಕ್ಕೆ ನಿರಾಕರಣೆ ಮಾಡಲಾಗಿತ್ತು ಎಂದು ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಉದ್ದೇಶಿಸಿ ಗೂಳಿಹಟ್ಟಿ ಶೇಖರ್ ಆಡಿಯೋ ಬಿಡುಗಡೆ ಮಾಡಿದ್ದು, ಪರಿಶಿಷ್ಟ ಜಾತಿಯ ವ್ಯಕ್ತಿ ಎನ್ನುವ ಕಾರಣಕ್ಕೆ ನನಗೆ ಡಾ.ಹೆಡಗೇವಾರ್ ಮ್ಯೂಸಿಯಂ ಪ್ರವೇಶ ನಿರಾಕರಿಸಲಾಯಿತು. ಇದಕ್ಕೆ ಸ್ಪಷ್ಟನೆ ಕೊಡಿ ಸಂತೋಷ್ ಜೀ ಎಂದು ಒತ್ತಾಯಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಗಿಂತ ಮೂರ್ನಾಲ್ಕು ತಿಂಗಳ ಮುಂಚೆ ಆರೆಸ್ಸೆಸ್ ಕಚೇರಿ ಭೇಟಿಗಾಗಿ ನಾಗಪುರಕ್ಕೆ ತೆರಳಿದ್ದೆ. ಅಲ್ಲಿನ ಡಾ.ಹೆಡಗೆವಾರ್ ಮ್ಯೂಸಿಯಂ ವೀಕ್ಷಿಸಲು ವೈದ್ಯ ಹಾಗೂ ಮಂಜು ಎಂಬುವವರ ಜೊತೆಗೆ ಹೋಗಿದ್ದೆ. ಪ್ರವೇಶ ದ್ವಾರದಲ್ಲಿ ಪುಸ್ತಕದಲ್ಲಿ ಹೆಸರುಗಳನ್ನು ನೊಂದಾಯಿಸಿ ಒಳಗೆ ಬಿಡುತ್ತಿದ್ದರು. ನಾನು ನನ್ನ ಹೆಸರನ್ನು ಬರೆದೆ. ಆನಂತರ ಅಲ್ಲಿದ್ದ ವ್ಯಕ್ತಿ ನೀವು ರಿಸರ್ವ್ ಸಮುದಾಯದವರಾ ಎಂದು ಪ್ರಶ್ನಿಸಿದರು. ಹೌದು ಸ್ವಾಮಿ ನಾನು, ಪರಿಶಿಷ್ಟ ಜಾತಿಗೆ ಸೇರಿದವನು ಎಂದು ಹೇಳಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಆರೆಸ್ಸೆಸ್ಸ್ ಪಥಸಂಚಲನ | ಅಸ್ಪೃಶ್ಯತೆ ತೊಡೆದು ಹಾಕಲು ಸ್ವಯಂಸೇವಕರು ಮುಂದಾಗಲು ಕರೆ
ಆಗ ಕ್ಷಮಿಸಿ ಸರ್, ನಿಮಗೆ ಪ್ರವೇಶ ಇಲ್ಲ ಎಂದರು. ನಾನು ಬೇಸರದಿಂದ ಆಯ್ತು ಇಲ್ಲಿಯೇ ಕುಳಿತುಕೊಳ್ಳುತ್ತೇನೆ ಎಂದು ಹೇಳಿ ಕುಳಿತುಕೊಂಡೆ. ನನ್ನ ಜತೆಗೆ ಬಂದಿದ್ದ ವೈದ್ಯ ಮತ್ತು ಮಂಜು ಒಳಗೆ ಹೋದರು ಎಂದು ಆಡಿಯೋದಲ್ಲಿ ಗೂಳಿಹಟ್ಟಿ ಶೇಖರ್ ಹೇಳಿಕೊಂಡಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ನನಗೆ ಹಿಂದುತ್ವ, ಆರೆಸ್ಸೆಸ್ಸ್ ಬಗ್ಗೆ ತುಂಬಾ ಅಭಿಮಾನವಿದೆ. ಆದರೆ, ನನಗೆ ನಾಗಪುರದಲ್ಲಿ ನಡೆದ ಈ ಕಹಿ ಘಟನೆಯಿಂದ ಬೇಸರವಾಗಿದೆ ಸಂತೋಷ್ ಜೀ. ನಮ್ಮ ಲೋಕಸಭಾ ಕ್ಷೇತ್ರದಿಂದ ಎ.ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಿದ್ದೇವೆ. ಮುಖಂಡರಾದ ಗೋವಿಂದ ಕಾರಜೋಳ ಅವರನ್ನು ಒಳಗೆ ಬಿಟ್ಟಿದ್ದಾರಾ ಗೊತ್ತಿಲ್ಲ ಎಂದಿರುವ ಗೂಳಿಹಟ್ಟಿ ಶೇಖರ್, ತಮ್ಮನ್ನು ಒಳಗೆ ಬಿಡದ ಬಗ್ಗೆ ಸ್ಪಷ್ಟನೆ ಕೊಡುವಂತೆ ಸಂತೋಷ್ ಜೀ ಅವರನ್ನು ಕೇಳಿದ್ದಾರೆ.
ಇದೊಂದು ನಿರಾಧಾರ, ಹುರುಳಿಲ್ಲದ ಆರೋಪ: ಆರೆಸ್ಸೆಸ್ಸ್
ಗೂಳಿಹಟ್ಟಿ ಶೇಖರ್ ಆಡಿಯೋ ವೈರಲ್ ಆಗುತ್ತಿದ್ದಂತೆ ಆರೆಸ್ಸೆಸ್ಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆಡಿಯೋ ಹೇಳಿಕೆಯಲ್ಲಿ ತಮಗೆ ಜಾತಿ ಕಾರಣಕ್ಕೆ ನಾಗಪುರದ ಡಾ.ಹೆಡಗೆವಾರ್ ಸ್ಮಾರಕ ಕಟ್ಟಡಕ್ಕೆ ಪ್ರವೇಶ ನಿರಾಕರಿಸಲಾಯಿತು ಎಂದು ಆರೋಪಿಸಿದ್ದಾರೆ. ಆದರೆ, ನಾಗಪುರದಲ್ಲಿ ಆರೆಸ್ಸೆಸ್ಸ್ ಕಚೇರಿ ನೋಡಲು ಬಂದವರ ಹೆಸರನ್ನು ನೊಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು ನಿರಾಧಾರ, ಹುರುಳಿಲ್ಲದ ಆರೋಪ ಎಂದು ಆರೆಸ್ಸೆಸ್ಸ್ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ವಿಮಾನ ನಿಲ್ದಾಣ(AIRPORT) ನಿರ್ಮಾಣಕ್ಕೆ ಚಿಂತನೆ
ಆರೆಸ್ಸೆಸ್ಸ್ನ ಯಾವುದೇ ಕಚೇರಿಯಲ್ಲಾಗಲಿ ಅಥವಾ ಈ ರೀತಿಯ ಸ್ಮಾರಕ ಕಟ್ಟಡಗಳಲ್ಲಾಗಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಎಲ್ಲ ಜಾತಿ, ವರ್ಗದ ಸಾವಿರಾರು ಜನ ನಿತ್ಯ ಬಂದು ಹೋಗುತ್ತಲೇ ಇದ್ದಾರೆ. ಯಾರಿಗೂ ಪ್ರವೇಶ ನಿರಾಕರಣೆಯ ಪ್ರಶನೆಯೇ ಬಂದಿಲ್ಲ ಎಂದು ವಿವರಿಸಿದ್ದಾರೆ.
ಇಷ್ಟಾಗಿ ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಮೊದಲೇ ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್ ಆನಂತರ ಅನೇಕ ಸಂಘದ ಪ್ರಮುಖರನ್ನು ಭೇಟಿಯಾದರೂ, ಎಲ್ಲಿಯೂ ತಮಗಾದ ಈ ಅವಮಾನದ ಬಗ್ಗೆ ಹೇಳಿರಲಿಲ್ಲ. ಈಗ, ಹತ್ತು ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದಕ್ಕೆ ಆರೆಸ್ಸೆಸ್ಸ್ ಆಶ್ಚರ್ಯ ವ್ಯಕ್ತಪಡಿಸಿದೆ.
ಕೊನೆಯಲ್ಲಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘ ಎಲ್ಲರನ್ನೂ ಸದಾ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.