ಕ್ರೈಂ ಸುದ್ದಿ
ಡ್ರಗ್ಸ್ ವ್ಯಸನಿಗಳೇ ಎಚ್ಚರ | ಅನುಮಾನ ಬಂದ್ರೆ ಮೆಡಿಕಲ್ ಟೆಸ್ಟ್, ಕೇಸ್ ಗ್ಯಾರೆಂಟಿ | ಎಸ್ಪಿ ಧಮೇಂದ್ರ ಕುಮಾರ್ ಮೀನಾ
ಚಿತ್ರದುರ್ಗ ನ್ಯೂಸ್.ಕಾಂ: ನಿರ್ಜನ ಪ್ರದೇಶಗಳು, ಹಳೆಯ ಕಟ್ಟಡಗಳು, ತೊಟ, ಜಮೀನುಗಳಲ್ಲಿ ಗಾಂಜಾ ಬೆಳೆಯುವುದು, ಸಪ್ಲೈ ಮಾಡುವುದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಶಿಸ್ತಿನ ಕ್ರಮಕ್ಕೆ ಮುಂದಾಗಿದೆ.
ಎಲ್ಲಿಯಾದರೂ ಅನುಚಿತವಾಗಿ ವರ್ತಿಸುವುದು ಕಂಡುಬಂದರೆ, ನಿರ್ಜನ ಪ್ರದೇಶಗಳಲ್ಲಿ ಅನಾವಶ್ಯಕವಾಗಿ ಸುತ್ತಾಡುತ್ತಿದ್ದರೆ ಪೊಲೀಸರು ನಿಮ್ಮನ್ನು ಸೀದಾ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸುತ್ತಾರೆ.
ಒಂದು ವೇಳೆ ನೀವು ಗಾಂಜಾ ಸೇವನೆ ಮಾಡಿದ್ದರೆ ನಿಮ್ಮ ಮೇಲೆ ಕೇಸ್ ಗ್ಯಾರೆಂಟಿ. ಹೌದು ಇಂಥದ್ದೊಂದು ಎಚ್ಚರಿಕೆಯನ್ನು ಖುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರ ಕುಮಾರ್ ಮೀನಾ ನೀಡಿದ್ದಾರೆ.
ಇದಕ್ಕಾ ತಾಜಾ ಉದಾಹರಣೆ ಎಂಬಂತೆ ನ.8ರಂದು ಮಧ್ಯಾಹ್ನ 3.30ರ ಸಮಯದಲ್ಲಿ ಚಿತ್ರದುರ್ಗ ನಗರದ ಅಮೃತ ಆರ್ಯುವೇದಿಕ್ ಕಾಲೇಜು ಬಳಿ ಯಂಗಮ್ಮನಕಟ್ಟೆ ರುದ್ರಭೂಮಿಯ ಹತ್ತಿರ ಮಾದಕ ಪದಾರ್ಥ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರನ್ನು ಬಡಾವಣೆ ಠಾಣೆ ಪೊಲೀಸರು ಬಂದಿಸಿದ್ದಾರೆ.
ಐಮಂಗಲ ಹೋಬಳಿ ಸಾಲುಹುಣಸೆ ಗೊಲ್ಲರಹಟ್ಟಿಯ 22 ವರ್ಷದ ಸಿದ್ಧಾರ್ಥ ಹಾಗೂ ಪ್ರಸನ್ನ ಬಂಧಿತರು. ಇವರ ಜೊತೆಗೆ ಗಾಂಜಾ ಗಿಡ ಬೆಳೆದಿದ್ದ ಪಾತಪ್ಪ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಅಂತರ್ ರಾಜ್ಯ ಶ್ರೀಗಂಧ ಕಳ್ಳರ ಗ್ಯಾಂಗ್ ಅರೆಸ್ಟ್
ಚಿತ್ರದುರ್ಗ ಬಡಾವಣೆ ಠಾಣೆ ಪಿಎಸ್‍ಐ ಇಬ್ಬರ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ಮೆಡಿಕಲ್ ಟೆಸ್ಟ್ ಮಾಡಿಸಿದಾಗ ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟಿದೆ.
ಇಬ್ಬರ ಮೇಲೆ ಕೇಸ್ ಹಾಕಿ ಸುಮ್ಮನಾಗದ ಪೊಲೀಸರು, ಇವರಿಗೆ ಸಿಕ್ಕಿದ ಗಾಂಜಾದ ಮೂಲ ಪತ್ತೆ ಮಾಡಲು ಮುಂದಾಗಿದ್ದಾರೆ.
ತನಿಖೆ ವೇಳೆ ಇದೇ ಸಾಲುಹುಣಸೆ ಗೊಲ್ಲರಹಟ್ಟಿಯ ಪಾತಪ್ಪ ಎಂಬುವವರ ಜೊತೆಗೆ ಸೇರಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸುವುದು, ಬೆಳೆಸಿರುವ ಗಾಂಜಾ ಗಿಡಗಳ ಸೊಪ್ಪನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ತಾವೇ ಸೇವನೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಮೂರು ಜನರ ಮೇಲೆ ಎನ್‍ಡಿಪಿಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.
ಸದರಿ ಪ್ರಕರಣದಲ್ಲಿನ ಆರೋಪಿತರ ಪತ್ತೆ ಸಲುವಾಗಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‍ಪಿ ಎಚ್.ಆರ್.ಅನಿಲ್‍ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ನಯೀಂ ಅಹಮದ್, ಬಡಾವಣೆ ಠಾಣೆ ಪಿಎಸ್‍ಐ ರಘು, ಸಿಬ್ಬಂದಿಗಳಾದ ಮಂಜುನಾಥ, ವಿರೇಶ್ ಕಾರ್ಯಾಚರಣೆ ನಡೆಸಿದ್ದರು. ಎಲ್ಲ ಸಿಬ್ಬಂದಿಯ ಕೆಲಸವನ್ನು ಎಸ್ಪಿ ಶ್ಲಾಘಿಸಿ ನಗದು ಬಹುಮಾನ ನೀಡಿದ್ದಾರೆ.
ಸಾಲುಹುಣಸೆಗೊಲ್ಲರಹಟ್ಟಿ ಗ್ರಾಮದಲ್ಲಿ ಪಾತಪ್ಪನ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ 3 ಕೆಜಿ 170 ಗ್ರಾಂ ತೂಕದ ಗಾಂಜಾ ಸೊಪ್ಪಿನ ಗಿಡಗಳನ್ನು ಅಮಾನತು ಮಾಡಿಕೊಳ್ಳಲಾಗಿದೆ.