ಮುಖ್ಯ ಸುದ್ದಿ
ಮುರುಘಾ ಮಠದ ಭಕ್ತರ ಚಿತ್ತ ಹೈಕೋರ್ಟ್‍ನತ್ತ | ನಾಳೆ ಮುರುಘಾ ಶರಣರ ಜಾಮೀನು ಆದೇಶ ಸಾಧ್ಯತೆ
ಚಿತ್ರದುರ್ಗ ನ್ಯೂಸ್.ಕಾಂ: ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಪೀಠಾಧಿಪತಿ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರ ಜಾಮೀನು ಆದೇಶ ನಾಳೆ ಹೊರ ಬೀಳುವ ಸಾಧ್ಯತೆ ಇರುವುದರಿಂದ ಎಲ್ಲರ ಚಿತ್ತ ಹೈಕೋರ್ಟ್‍ನತ್ತ ನೆಟ್ಟಿದೆ.
ಕಳೆದ 14 ತಿಂಗಳಿನಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿರುವ ಮುರುಘಾ ಶರಣರಿಗೆ ಜಾಮೀನು ಸಿಕ್ಕಿ ಹೊರಗೆ ಬರುತ್ತಾರಾ, ಬರುವುದಾದರೆ ನ್ಯಾಯಾಲಯ ಯಾವೆಲ್ಲಾ ಷರತ್ತುಗಳನ್ನು ಹಾಕಲಿದೆ ಎಂಬೆಲ್ಲಾ ಚರ್ಚೆಗಳು ಶುರುವಾಗಿವೆ.
ಅಕ್ಟೋಬರ್ 30 ರವರೆಗೆ ಶರಣರ ಪರ ಹಾಗೂ ಒಡನಾಡಿ ಸಂಸ್ಥೆಯ ಪರ ಇರುವ ವಕೀಲರ ವಾದಗಳನ್ನು ಆಲಿಸಿದ್ದ ನ್ಯಾಯಪೀಠ, ಜಾಮೀನು ಅರ್ಜಿಯ ಆದೇಶ ಪ್ರಕಟಿಸುವ ಸಂಭಾವ್ಯ ದಿನಾಂಕವನ್ನು ನವೆಂಬರ್ 8 ಬುಧವಾರಕ್ಕೆ ಕಾಯ್ದಿರಿಸಿತ್ತು.
ನಾಡಿನ ಮುರುಘಾ ಮಠದ ಭಕ್ತರು ಸೇರಿದಂತೆ ಎಲ್ಲರ ಚಿತ್ತ ಹೈಕೋರ್ಟ್ ತೀರ್ಪಿನತ್ತ ಮುಖ ಮಾಡಿದೆ. ಜಾಮೀನು ಸಿಕ್ಕಿದರೆ ಶರಣರನ್ನು ಹೇಗೆ ಕರೆತರಬಹುದು, ಅವರು ಮಠಕ್ಕೆ ಬರುತ್ತಾರಾ ಎಂಬಿತ್ಯಾದಿ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯ
ಮುರುಘಾ ಮಠದ ಹಾಸ್ಟೆಲ್ ವಿದ್ಯಾರ್ಥಿನಿಯರಿಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ 2022 ಆಗಸ್ಟ್ 26 ರಂದು ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಶ್ರೀಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಹಾಗೂ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಬಾಲ ನ್ಯಾಯ ಕಾಯ್ದೆ ಅನ್ವಯ ದೂರುಗಳು ದಾಖಲಾಗಿದ್ದವು.
ಎಲ್ಲ ದೂರುಗಳ ಸರಮಾಲೆಯಿಂದ ಶರಣರು ಜಾಮೀನು ಪಡೆದುಕೊಳ್ಳುವುದು ಕಗ್ಗಂಟಾಗಿತ್ತು. ಈಗ ಎಲ್ಲವೂ ಅಂತಿಮ ಹಂತಕ್ಕೆ ಬಂದಿದ್ದು, ಜಾಮೀನು ಅರ್ಜಿಯ ಆದೇಶದ ಹಂತದಲ್ಲಿದೆ. ಮತ್ತೊಂದೆಡೆ ಜಿಲ್ಲಾ ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣ ಕೂಡಾ ವಿಚಾರಣೆ ಹಂತದಲ್ಲಿದೆ.