ಮುಖ್ಯ ಸುದ್ದಿ
ಕೋಟೆನಾಡಿಗೆ ಕಾಲಿಟ್ಟ ಮಳೆರಾಯ | ಒಂದೇ ರಾತ್ರಿಗೆ ಇಳೆಯಲ್ಲಾ ತಂಪು
ಚಿತ್ರದುರ್ಗ ನ್ಯೂಸ್. ಕಾಂ: ಈ ವರ್ಷ ಸರಿಯಾದ ಮಳೆಯನ್ನೇ ಕಾಣದೆ ಇಡೀ ಭೂಮಿ ಕಾದು ಕಾವಲಿಯಾಗಿತ್ತು. ಜನ, ಜಾನುವಾರುಗಳು ಮೇವು, ನೀರಿಗೆ ಪರದಾಡುವ ವಾತಾವರಣ ಸೃಷ್ಟಿಯಾಗುತ್ತಿತ್ತು. ಈ ನಡುವೆ ಸಣ್ಣ ಭರವಸೆಯಂತೆ ಮಳೆಯ ಸಿಂಚನವಾಗಿದೆ.
ಕಳೆದೊಂದು ವಾರದಿಂದ ಹವಾಮಾನ ಇಲಾಖೆ ಮಳೆಯ ಬರುವಿಕೆಯ ಬಗ್ಗೆ ಮಾಹಿತಿ ನೀಡುತ್ತಿತ್ತು. ದಕ್ಷಿಣ ಒಳನಾಡಿನ ವ್ಯಾಪ್ತಿಯಲ್ಲಿರುವ ಚಿತ್ರದುರ್ಗ ಜಿಲ್ಲೆಗೂ ಮಳೆಯ ಸಿಂಚನವಾಗಿದೆ.
ಕಳೆದ ಆರೇಳು ತಿಂಗಳಿಂದ ಮಳೆಯ ಅಡ್ರೆಸ್ ಇಲ್ಲದ ಕಾರಣ ಇಡೀ ವಾತಾವರಣ ಬಾಡಿ ಬಿಕೋ ಎನ್ನುತ್ತಿತ್ತು. ಆದರೆ, ಇಂದು ಬೆಳಗ್ಗೆ ಎದ್ದ ತಕ್ಷಣ ಎಲ್ಲರೂ ಮಳೆಯ ಮುಖವನ್ನೇ ನೋಡಿದ್ದಾರೆ.
ಇಡೀ ವಾತಾವರಣ ಮಳೆಗಾಲದ ತಂಪಾದ, ಮೋಡ ಕವಿದಂತೆ ಭಾಸವಾಗುತ್ತಿರುವುದರಿಂದ ಸಣ್ಣ ಭರವಸೆ ಕಾಣಿಸುತ್ತಿದೆ.
ಮುಂಗಾರು ಹಾಗೂ ಹಿಂಗಾರಿನ ಬಹುತೇಕ ಮಳೆಗಳು ಕೈ ಕೊಟ್ಟಿರುವುದರಿಂದ ರೈತರು ಕಂಗೆಟ್ಟಿದ್ದಾರೆ. ಮಳೆಯಿಲ್ಲದೆ ಈಗಾಗಲೇ ಖುಷ್ಕಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ.
ಈಗಸವಾಲಿರುವುದು ತೋಟಗಾರಿಕೆ ಬೆಳೆಗಾರ ರೈತರದ್ದು. ಮುಂದಿನ ಸುಮಾರು ಏಳು ತಿಂಗಳ ಕಾಲ ತೋಟಗಳ ಪಾಲನೆ ಮಾಡಬೇಕು. ಈಗಾಗಲೇ ಕೊಳವೆ ಬಾವಿಗಳಲ್ಲಿ ನೀರು ಕಡಮೆಯಾಗಿದೆ. ಹೀಗಾಗಿ ಇಂದು ಒಂದೇ ಗಂಟೆ ಮಳೆ ಬಂದರೂ ಮುಂದಿನ ಹತ್ತು ದಿನ ನೆಮ್ಮದಿಯಿಂದ ಇರಬಹುದು ಎನ್ನುವ ಲೆಕ್ಕಾಚಾರ ರೈತರದ್ದು.
ಇನ್ನೂ ಒಂದೆರಡು ದಿನ ಮಳೆಯ ಮುನ್ಸೂಚನೆ ಇರುವುದರಿಂದ ಮತ್ತೆ ಯಾವಾಗ ಬೇಕಾದರೂ ಮಳೆಯಾಗಬಹುದು ಎನ್ನುವ ನಿರೀಕ್ಷೆ ಇದೆ. ಒಟ್ಟಾರೆ ಈ ಬೇಸಿಗೆಯ ಹೊರೆಯನ್ನು ಮಳೆರಾಯ ತುಸು ಕಡಿಮೆ ಮಾಡಲಿ ಎನ್ನುವ ಪ್ರಾರ್ಥನೆ ರೈತರದ್ದು.
ಕಾಡಿನಲ್ಲಿ ನೀರಿಲ್ಲದೆ ಊರು, ಕೇರಿಗಳಿಗೆ ನುಗ್ಗುತ್ತಿದ್ದ ಪ್ರಾಣಿಗಳಿಗೂ ನೀರು ಬೇಕು. ದನ, ಕರು, ಕುರಿ, ಮೆಕೆಗಳುಗು ಹಸಿರು ಬೇಕು. ಈ ಕಾರಣಕ್ಕೆ ಇನ್ನಷ್ಟು ಮಳೆಯಾಗಬೇಕಿದೆ.