ಮುಖ್ಯ ಸುದ್ದಿ
ಮುಂದಿನ ಚುನಾವಣೆಯಲ್ಲೂ ಚಿತ್ರದುರ್ಗದಿಂದಲೇ ಸ್ಪರ್ಧೆ | ಕೋಲಾರಕ್ಕೆ ಹೋಗುವುದಿಲ್ಲ | ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಚಿತ್ರದುರ್ಗ ನ್ಯೂಸ್.ಕಾಂ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಬಿಟ್ಟು ಬೇರೆಲ್ಲೂ ಸ್ಪರ್ಧೆ ಮಾಡುವುದಿಲ್ಲ ಎಂದು ಸಂಸದ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭೆಗೆ ಪಕ್ಷವೇ ಹೇಳಿದರೂ ಕೋಲಾರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
2019ರ ಲೋಕಸಭೆ ಚುನಾವಣೆಗೆ ಚಿತ್ರದುರ್ಗಕ್ಕೆ ಬಂದಾಗ ಅನೇಕರಿಗೆ ನನ್ನ ಮುಖವನ್ನೇ ನೋಡಲು ಆಗಿರಲಿಲ್ಲ. ಆದರೂ ಈ ಕ್ಷೇತ್ರದ ಜನತೆ ಮತ ಕೊಟ್ಟು ಗೆಲ್ಲಿಸಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುವುದಷ್ಟೇ ಮುಖ್ಯ ಎಂದರು.
ಇನ್ನೂ ಸ್ಥಳೀಯರಿಗೆ ಟಿಕೇಟ್ ನೀಡಬೇಕು ಎನ್ನುವ ಕೂಗಿಗೆ ನನ್ನ ವಿರೋಧವಿಲ್ಲ. ಈ ಅಭಿಪ್ರಾಯವನ್ನು ಗೌರವಿಸುತ್ತೇನೆ. ಇದು ಮತದಾರರ ಪ್ರಜ್ಞಾವಂತಿಕೆಯನ್ನು ತೋರಿಸುತ್ತದೆ. ಈ ಚಳುವಳಿಯನ್ನು ಗೌರವಿಸುತ್ತೇನೆ. ಸ್ಥಳೀಯರಿಗೆ ಪಕ್ಷ ಅವಕಾಶ ನೀಡಿದರೆ ನಾನು ಬೆಂಬಲ ನೀಡುತ್ತೇನೆ ಎಂದು ನಾರಾಯಣಸ್ವಾಮಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಸೌಭಾಗ್ಯ-ಬಸವರಾಜನ್ ವಿರುದ್ಧದ ಪಿತೂರಿ ಪ್ರಕರಣ ರದ್ದು
ಇಂದು ಚುನಾವಣೆ, ಅಧಿಕಾರ ಎನ್ನುವುದು ಹಣ ಮಾಡುವ ವ್ಯವಸ್ಥೆಯಾಗುತ್ತಿದೆ. ಗೆದ್ದವರಿಗೆ ರಾಜನ ಮನಸ್ಥಿತಿ ಬರುತ್ತಿರುವುದು ವಿಪರ್ಯಾಸ. ಇವತ್ತಿಗೂ ಮತದಾರರು ಸೌಲಭ್ಯಗಳನ್ನು ಅಂಗಲಾಚುವ ಪರಿಸ್ಥಿತಿಯಿದೆ. ರಾಜಕಾರಣಿಗಳು ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡುತ್ತಿದ್ದಾರೆ. ಇದನ್ನೆಲ್ಲಾ ನೋಡಿ ರಾಜಕಾರಣದ ಬಗ್ಗೆ ಬೇಸರ ಮೂಡಿದೆ.
ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವವರು ಚುನಾವಣೆಗೆ ಬರಬೇಕು. ವ್ಯವಹಾರಕ್ಕಾಗಿ ರಾಜಕಾರಣ, ಚುನಾವಣೆ ಹಾಗೂ ಅಧಿಕಾರವನ್ನು ಬಳಸಿಕೊಳ್ಳುವುದು ಒಳ್ಳೆದಲ್ಲ ಎಂದು ನಾರಾಯಣಸ್ವಾಮಿ ಹೇಳಿದರು.