ಮುಖ್ಯ ಸುದ್ದಿ
SSLC ಪರೀಕ್ಷೆಗೆ 943 ವಿದ್ಯಾರ್ಥಿಗಳು ಗೈರು | ಗುಲಾಬಿ ಹೂ ಕೊಟ್ಟು ಸ್ವಾಗತಿಸಿದ ಡಿಸಿ

CHITRADURGA NEWS | 21 MARCH 2025
ಚಿತ್ರದುರ್ಗ: ಇಂದು ಪ್ರಾರಂಭವಾದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1ರ ಕನ್ನಡ ವಿಷಯದ ಪರೀಕ್ಷೆಗೆ ಒಟ್ಟು 22,229 ವಿದ್ಯಾರ್ಥಿಗಳು ಹಾಜರಾಗಿದ್ದು, 943 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಜಿಲ್ಲೆಯಲ್ಲಿ ಕನ್ನಡ ವಿಷಯದ ಪರೀಕ್ಷೆಗೆ 23,172 ವಿದ್ಯಾರ್ಥಿಗಳು ನೋಂದಾಯಿಸಿದ್ದರು.
ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಡಿಸಿ, ಸಿಇಓ ಪತ್ರ | ಏನಿದೆ ಪತ್ರದಲ್ಲಿ ಈ LINK CLICK ಮಾಡಿ
ಈ ಪೈಕಿ ಚಳ್ಳಕೆರೆ ತಾಲ್ಲೂಕಿನಲ್ಲಿ 4,911 ವಿದ್ಯಾರ್ಥಿಗಳು, ಚಿತ್ರದುರ್ಗ-6,276, ಹಿರಿಯೂರು-3,389, ಹೊಳಲ್ಕೆರೆ-2,596, ಹೊಸದುರ್ಗ-2,865 ಹಾಗೂ ಮೊಳಕಾಲ್ಮುರು-2,192 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 22,229 ವಿದ್ಯಾರ್ಥಿಗಳು ಹಾಜರಾಗಿ, 943 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಜಿಲ್ಲೆಯ 82 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ತಿಳಿಸಿದ್ದಾರೆ.
ಗುಲಾಬಿ ಹೂ ಕೊಟ್ಟು ಸ್ವಾಗತಿಸಿದ ಡಿಸಿ ವೆಂಕಟೇಶ್:
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಶುಕ್ರವಾರ ಬೆಳಗ್ಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಗುಲಾಬಿ ಹೂ ಕೊಟ್ಟು ಸ್ವಾಗತಿಸಿದರು.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ) ವಿಭಾಗದಲ್ಲಿ ಸ್ಥಾಪಿಸಿರುವ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಿ, ಶುಭ ಹಾರೈಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಘಟ್ಟವಾಗಿದೆ. ಏಪ್ರಿಲ್ 04 ರವರೆಗೆ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯನ್ನು ಹಬ್ಬದಂತೆ ಆಚರಣೆ ಮಾಡಬೇಕು ಎಂದರು.
ಇದನ್ನೂ ಓದಿ: ಕಣಿವೆ ಮಾರಮ್ಮ ಜಾತ್ರೆ | ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ | ಭರತ್ ಪೈಲ್ವಾನ್
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಯಾವುದೇ ಭಯಭೀತಿ ಇಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕಳೆದ ಆರು ತಿಂಗಳಿಂದಲೂ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳು ಉತ್ಸಾಹ ಮತ್ತು ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಹೀಗಾಗಿ ಇಂದು ಪರೀಕ್ಷಾ ಕೇಂದ್ರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ, ಸಂತೋಷದಿಂದ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಶುಭ ಹಾರೈಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಅಪ್ಪರ್ ಭದ್ರಾ ಯೋಜನೆ | ಅನುದಾನ ಬಿಡುಗಡೆಗೆ ಸಂಸತ್‌ನಲ್ಲಿ ಗೋವಿಂದ ಕಾರಜೋಳ ಒತ್ತಾಯ
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.
