ಮುಖ್ಯ ಸುದ್ದಿ
Traffic signal: ಟ್ರಾಫಿಕ್ ಸಿಗ್ನಲ್ ಸಮಸ್ಯೆಗೆ ಶೀಘ್ರ ಮುಕ್ತಿ | ಎಸ್ಪಿ ರಂಜಿತ್ ಕುಮಾರ್ ಬಂಡಾರು
CHITRADURGA NEWS | 23 AUGUST 2024
ಚಿತ್ರದುರ್ಗ: ಗಾಂಜಾ, ಸೈಬರ್ ಕ್ರೈಮ್, ಜೂಜು, ಅನಧಿಕೃತ ಕ್ಲಬ್‌ಗೆ ಕಡಿವಾಣ ಹಾಕುವ ಜತೆಗೆ ಸಂಚಾರ ಸಮಸ್ಯೆ ನಿವಾರಣೆಗೆ ಶೀಘ್ರ ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
‘ನಗರದಲ್ಲಿ ವಾಹನ ಸಂಚಾರ, ಪಾರ್ಕಿಂಗ್ ಹಾಗೂ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಸಮಸ್ಯೆ ಕಂಡು ಬಂದಿದೆ. ಗಾಂಧಿ ವೃತ್ತದಲ್ಲಿ ಸಮಯದ ವ್ಯತ್ಯಾಸ ಹಾಗೂ ವಿಳಂಬದಿಂದಾಗಿ ವಾಹನ ಸವಾರರು ಸಮಸ್ಯೆಗೆ ಸಿಲುಕಿರುವುದನ್ನು ಗಮನಿಸಲಾಗಿದೆ. ಶೀಘ್ರ ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ಸಮಯ ನಿಗದಿಗೊಳಿಸಲಾಗುತ್ತದೆ’ ಎಂದು ಶುಕ್ರವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಕ್ಲಿಕ್ ಮಾಡಿ ಓದಿ: 25ಕ್ಕೆ ವೀರಶೈವ ಮಹಾಸಭಾ ಚುನಾವಣೆ | 27 ಸ್ಥಾನಕ್ಕೆ 57 ಮಂದಿ ಸ್ಪರ್ಧೆ
‘ಜಿಲ್ಲೆಯಲ್ಲಿ ಸೈಬರ್ ಅಪರಾಧ ಹೆಚ್ಚಾಗುತ್ತಿವೆ. ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಜತೆಗೆ ಸೈಬರ್ ವಂಚನೆಗೆ ಕಡಿವಾಣ ಹಾಕಲಾಗುತ್ತದೆ. ಗಾಂಜಾ ಪ್ರಕರಣದಲ್ಲಿ ವಿದ್ಯಾರ್ಥಿಗಳು ಸಿಲುಕಿದರೆ ಅವರ ವಿದ್ಯಾಭ್ಯಾಸ, ಭವಿಷ್ಯಕ್ಕೆ ತೊಂದರೆಯಾಗಲಿದೆ. ಮಹಿಳೆ ಮತ್ತು ಮಕ್ಕಳ ಬಗ್ಗೆ ನಿಗಾವಹಿಸುವ ಜತೆಗೆ ಅಕ್ರಮ ಚಟುವಟಿಕೆಗೆ ಮಟ್ಟ ಹಾಕಲಿದ್ದೇವೆ’ ಎಂದು ತಿಳಿಸಿದರು.
ಮೂಲತಃ ತೆಲಂಗಾಣದ ವಾರಂಗಲ್‌ನ ರಂಜಿತ್ ಕುಮಾರ್ ಬಂಡಾರು ಬಿ.ಟೆಕ್ ಪದವೀಧರರು. ಇನ್ಫೋಸಿಸ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಬಳಿಕ ಸೇವೆ ಸಲ್ಲಿಸಿದ್ದರು. 2017ರಲ್ಲಿ ಐಪಿಎಸ್ ಆಗಿ ಬಂಟ್ವಾಳದಲ್ಲಿ ಪ್ರೊಬೆಷನರಿ ಪೂರ್ಣಗೊಳಿಸಿ ಬಳಿಕ ಬೆಂಗಳೂರು, ಬಳ್ಳಾರಿನಿಂದ ಚಿತ್ರದುರ್ಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿದ್ದಾರೆ.