ಮುಖ್ಯ ಸುದ್ದಿ
ಭರಮಸಾಗರ ದೊಡ್ಡಕೆರೆಗೆ ಹರಿದ ನೀರು | ಸಂಭ್ರಮಿಸಿದ ರೈತರು
CHITRADURGA NEWS | 29 JUNE 2024
ಚಿತ್ರದುರ್ಗ: ಬರ, ಬತ್ತಿದ ಅಂರ್ತಜಲ, ಒಣಗುತ್ತಿದ್ದ ತೋಟ, ಬಿರುಕು ಬಿಟ್ಟಿದ್ದ ಕೆರೆ ಏರಿ..ಹೀಗೆ ಸಾಲು ಸಾಲು ಸಮಸ್ಯೆಯಿಂದ ಕಂಗಲಾಗಿದ್ದ ಭರಮಸಾಗರ ಭಾಗದ ರೈತರಲ್ಲಿ ಪುನಃ ಸಂತಸ ಮೂಡಿದೆ. ಇದಕ್ಕೆ ಕಾರಣ ತುಂಗಭದ್ರಾ ನದಿಯಿಂದ ಏತನೀರಾವರಿ ಯೋಜನೆ ಮೂಲಕ ಭರಮಸಾಗರ ದೊಡ್ಡಕೆರೆಗೆ ನೀರು ಹರಿದು ಬರುತ್ತಿರುವುದು.
ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಯ 42 ಕೆರೆಗಳಿಗೆ ಗುರುವಾರದಿಂದ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ಕೆರೆ ಏರಿ ದುರಸ್ತಿಗಾಗಿ ದೊಡ್ಡಕೆರೆಯಲ್ಲಿ ಸಂಗ್ರಹವಾಗಿದ್ದ ನೀರನ್ನು ಯೋಜನೆ ವ್ಯಾಪ್ತಿಯ ಇತರೆ ಕೆರೆಗಳಿಗೆ ಹರಿಸಲಾಗಿತ್ತು. ಇದರಿಂದ ನೀರು ಖಾಲಿಯಾಗಿ ಸಮಸ್ಯೆ ಎದುರಾಗಿತ್ತು.
ಅಡಿಕೆ, ತೆಂಗು, ಬಾಳೆ, ದಾಳಿಂಬೆ ಮೊದಲಾದ ತೋಟಗಾರಿಕೆ ಬೆಳೆಗಳಿಗೆ ನೀರಿಲ್ಲದೆ ತೀವ್ರ ತೊಂದರೆಯಾಗಿ ಕೃಷಿ ಹೊಂಡ ನಿರ್ಮಿಸಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಿ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸಪಟ್ಟಿದ್ದರು. ಈಗ ಕೆರೆ ತುಂಬಿಸುವ ಕಾರ್ಯ ಪುನಃ ಆರಂಭವಾಗಿರುವುದು ರೈತರು ಸಂಭ್ರಮಿಸುತ್ತಿದ್ದಾರೆ.
ಪ್ರತಿ ವರ್ಷ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸುವ ಮುನ್ನ ಪೈಪ್‌ಲೈನ್ ಮಾರ್ಗ, ವಾಲ್ವ್‌ಗಳ ಸ್ಥಿತಿಗತಿ, ತಾಂತ್ರಿಕ ದೋಷಗಳನ್ನು ಪರೀಕ್ಷಿಸಲಾಗುತ್ತದೆ. ರಾಜನಹಳ್ಳಿಯಿಂದ ಭರಮಸಾಗರ ದೊಡ್ಡಕೆರೆ ಬಳಿ ಜಾಕ್‌ವೆಲ್‌ಗೆ 56 ಕಿ.ಮೀ. ಉದ್ದದ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ನನಸಾಯ್ತು ಶತಮಾನದ ಕನಸು | ಐತಿಹಾಸಿಕ ಧರ್ಮಪುರ ಕೆರೆಗೆ ಹರಿದ ಗಂಗೆ
ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿ ನದಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಕಾರಣ ಕೆಲವು ದಿನಗಳಿಂದ ಏತನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಪರೀಕ್ಷಾರ್ಥವಾಗಿ ನೀರು ಹರಿಸಿ ದೋಷಗಳನ್ನು ಸರಿಪಡಿಸುವ ಕೆಲಸ ಮಾಡಲಾಗಿದೆ. ಈಗ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಗುರುವಾರದಿಂದ ಅಧಿಕೃತವಾಗಿ ಕೆರೆಗಳನ್ನು ತುಂಬಿಸುವ ಕಾರ್ಯ ಆರಂಭವಾಗಿದೆ.
ಕ್ಲಿಕ್ ಮಾಡಿ ಓದಿ: ರಸ್ತೆ ವಿಸ್ತರಣೆ ಕಾಮಗಾರಿ | ಎರಡು ದಿನ ವಿದ್ಯುತ್ ವ್ಯತ್ಯಯ
ನಿಯಮದಂತೆ ಜುಲೈನಿಂದ ಸೆಪ್ಟೆಂಬರ್‌ವರೆಗೆ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ತುಂಗಭದ್ರಾ ನದಿಯಿಂದ ರಾಜನಹಳ್ಳಿ ಜಾಕ್‌ವೆಲ್-1ಕ್ಕೆ ನೀರು ಸರಬರಾಜು ಮಾಡುವ ಕಾಲುವೆ ಮಾರ್ಗದಲ್ಲಿ ಹೂಳು ತೆಗೆಯುವ ಹಾಗೂ ಜಾಕ್‌ವೆಲ್ ಯಂತ್ರಗಳನ್ನು ಪರೀಕ್ಷಿಸುವ ಕಾರ್ಯ ನಡೆಸುವ ಮೂಲಕ ಮುಂಗಾರಿನಲ್ಲಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಪೂರ್ವ ತಯಾರಿ ನಡೆಸಿದ್ದರು.