ಮುಖ್ಯ ಸುದ್ದಿ
ಛೇ.. ಮೂಕ ಪ್ರಾಣಿಗಳ ಮೇಲೆ ಇದೆಂಥಾ ದ್ವೇಷ | ಎತ್ತು ಕದ್ದು ಹತ್ಯೆ ಮಾಡಿದ ಕಿಡಿಗೇಡಿಗಳು
ಚಿತ್ರದುರ್ಗ ನ್ಯೂಸ್.ಕಾಂ: ವಾರಪೂರ್ತಿ ಉಳುಮೆ ಮಾಡುವ ರೈತ ಸೋಮವಾರ ಬಿಡುವು ಮಾಡಿಕೊಳ್ಳುತ್ತಾನೆ. ಈ ದಿನ ತನ್ನ ಜೀವನಕ್ಕೆ ಆಸರೆಯಾಗಿರುವ ಎತ್ತುಗಳ ಮೈ ತೊಳೆದು, ಮೇವು ಹಾಕಿ ವಿಶ್ರಾಂತಿ ನೀಡುವ ಮೂಲಕ ಅವುಗಳಿಗೂ ಒಂದು ದಿನ ರಜೆ ಕೊಟ್ಟು ಮಾನವೀಯತೆ ಮೆರೆಯುತ್ತಾನೆ.
ಆದರೆ, ಎತ್ತುಗಳಿಗೆ ಬಿಡುವ ನೀಡುವ ಅದೇ ಸೋಮವಾರ ಬೆಳ್ಳಂ ಬೆಳಗ್ಗೆ ಎತ್ತಿನ ಹತ್ಯೆ ಮಾಡಿರುವ ಕೆಟ್ಟ ಸುದ್ದಿ ಹೊರಬಿದ್ದಿದೆ.
ಅದೆಂಥಾ ದ್ವೇಷವೋ ಏನೋ ಎತ್ತೊಂದನ್ನು ಕದ್ದು ತಂದು ಎತ್ತಿನ ಕತ್ತು ಕುಯ್ದು ಹತ್ಯೆ ಮಾಡಿರುವ ಭೀಕರ ಘಟನೆ ಕೊರಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೊರಡಿಹಳ್ಳಿಯ ರೈತ ಅಶೋಕ್ ಎಂಬುವವರಿಗೆ ಸೇರಿದ ಎತ್ತನ್ನು ಕಿಡಿಗೇಡಿಗಳು ಕೊಟ್ಟಿಗೆಯಿಂದ ಕದ್ದು ತಂದು ಮಲ್ಲೂರಹಳ್ಳಿ ಭರಮಸಾಗರಹಟ್ಟಿ ಬಳಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ.
ಈ ಸಂಬಂಧ ಮಲ್ಲೂರಹಳ್ಳಿಯ ಲೋಕೇಶ, ತಿಪ್ಪೇಸ್ವಾಮಿ ಹಾಗೂ ನಾಗೇಶ ಎಂಬುವವರ ವಿರುದ್ಧ ಆರೋಪ ಕೇಳಿ ಬಂದಿದೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ಏರ್‍ಪೋರ್ಟ್(AIRPORT)
ಕೊರಡಿಹಳ್ಳಿಯ ರೈತ ಟಿ.ಎಲ್.ಅಶೋಕ್ ಕುಟುಂಬದವರ ಜೊತೆಗೆ ತಮ್ಮ ತೋಟದ ಮನೆಯಲ್ಲಿ ವಾಸವಿದ್ದು, ಮೂರು ತಿಂಗಳ ಹಿಂದಷ್ಟೆ 75 ಸಾವಿರ ಕೊಟ್ಟು ಕೂಡ್ಲಿಗಿಯಿಂದ ಎತ್ತು ಖರೀಧಿಸಿ ತಂದಿದ್ದರು.
ನ.30 ರಂದು ರಾತ್ರಿ ಕೊಟ್ಟಿಗೆಗೆ ಎರಡೂ ಎತ್ತುಗಳನ್ನು ಕಟ್ಟಿ ಮಲಗಿದ್ದು, ಬೆಳಗ್ಗೆ ಎದ್ದು ನೋಡಿದಾಗ ಒಂದು ಎತ್ತು ಕಾಣೆಯಾಗಿದೆ. ತಪ್ಪಿಸಿಕೊಂಡು ಎಲ್ಲಿಯೋ ಹೋಗಿರಬಹುದು ಎಂದು ಇಡೀ ದಿನ ಹೊಲ, ಹಳ್ಳ, ತೋಟ, ಅಕ್ಕಪಕ್ಕದ ಊರುಗಳಲ್ಲಿ ಹುಡುಕಾಡಿದ್ದಾರೆ. ಎಲ್ಲಿಯೂ ಪತ್ತೆಯಾಗದೆ ರಾತ್ರಿ ಮನೆಗೆ ಮರಳಿದ್ದಾರೆ.
ಮರು ದಿನ ಭರಮಸಾಗರಹಟ್ಟಿ ಮಲ್ಲೂರಹಟ್ಟಿ ಬಳಿ ಮೂರು ಜನ ಎತ್ತೊಂದನ್ನು ಕೊಯ್ಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಹೋದಾಗ ಮೂರು ಜನ ಬೈಕ್ ಬಿಟ್ಟು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.
ಆಗಲೇ ಎತ್ತಿನ ಕತ್ತು ಕೊಯ್ದು ಹತ್ಯೆ ಮಾಡಿದ್ದು, ಹೊಟ್ಟೆಯ ಮೇಲಿನ ಚರ್ಮವನ್ನೂ ಸುಲಿಯಲಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ನಾಯಕನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.