ಮುಖ್ಯ ಸುದ್ದಿ
ಅಸ್ಪೃಶ್ಯತೆ ಆಚರಣೆ ನಾಗರೀಕ ಸಮಾಜ ತಲೆತಗ್ಗಿಸುವ ವಿಚಾರ | ಡಿ.ಓ.ಮುರಾರ್ಜಿ
ಚಿತ್ರದುರ್ಗ ನ್ಯೂಸ್.ಕಾಂ: ಅಸ್ಪೃಶ್ಯತೆ ಆಚರಿಸುವುದು ನಾಗರೀಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಇದರಿಂದ ಪ್ರತಿಯೊಬ್ಬರೂ ದೂರವಿದ್ದು, ಸಮ ಸಮಾಜ ನಿರ್ಮಾಣಕ್ಕೆ ಮನಸ್ಸು ಮಾಡಬೇಕು ಎಂದು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಸಮಿತಿ ಸದಸ್ಯ ಡಿ.ಓ.ಮುರಾರ್ಜಿ ಹೇಳಿದರು.
ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಸ್ಪೃಶ್ಯತೆ ನಿವಾರಣಾ ಕಾನೂನು ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರು ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬದುಕುವ ಹಕ್ಕು ನೀಡಿದ್ದಾರೆ. ಯಾವುದೇ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ವ್ಯಕ್ತಿಯ ಹಕ್ಕು, ಬದುಕಿನ ಘನತೆಗೆ ಚ್ಯುತಿ ತರುವ ರೀತಿಯಲ್ಲಿ ನಿಂದನೆ ದೈಹಿಕ ಹಲ್ಲೆ ಸಾಮಾಜಿಕ ಬಹಿಷ್ಕಾರ ಬಲವಂತದ ಮೌಢ್ಯಗಳ ಆಚರಣೆಗಳನ್ನು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದರು.
ಇದನ್ನೂ ಓದಿ: ರೈತರೇ ಗಮನಿಸಿ ಇಡೀ ದಿನ ವಿದ್ಯುತ್ ಇರುವುದಿಲ್ಲ.
ಗ್ರಾಮೀಣ ಭಾಗದಲ್ಲಿ ಹೋಟೆಲ್, ದೇವಸ್ಥಾನ, ಶಾಲೆ, ಪಂಚಾಯತಿ, ಸೆಲೂನ್ ಶಾಪ್ ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ನಿರಾಕರಿಸದೆ ಎಲ್ಲಾ ವರ್ಗಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕುಮಾರಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿ ವರ್ಗಗಳ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಮಕ್ಕಳ ಶಿಕ್ಷಣಕ್ಕೆ ವಸತಿ ಶಾಲೆಗಳಿವೆ ಅಂತರ್ಜಾತಿ ವಿವಾಹಕ್ಕೆ ಮೂರು ಲಕ್ಷಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ದೇವದಾಸಿ ಮಕ್ಕಳನ್ನು ಇತರೆ ಜಾತಿಯವರು ಮದುವೆಯಾದರೆ ಐದು ಲಕ್ಷಗಳ ಪ್ರೋತ್ಸಾಹ ಧನ ನೀಡುವ ಮೂಲಕ ಜಾತಿಯತೆಯನ್ನು ತೊಡೆದು ಹಾಕುವ ಕಾರ್ಯ ಮಾಡಲಾಗುತ್ತಿದ್ದು, ಜನತೆ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಚಿತ್ರಹಳ್ಳಿ ಪೊಲೀಸ್ ಠಾಣೆ ಎ.ಎಸ್.ಐ ಗಣೇಶ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲಮ್ಮ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಮಾ ಸಿದ್ದೇಶ್, ಪಿಡಿಓ ರೇವಪ್ಪ ಉಪಸ್ಥಿತರಿದ್ದರು.