ತಾಲೂಕು
ಶಿವನಕೆರೆಯಲ್ಲಿರುವ ಶಿವನ ನಿರ್ವಹಣೆ ಧರ್ಮಸ್ಥಳ ಸಂಸ್ಥೆಗೆ | ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ
ಚಿತ್ರದುರ್ಗ ನ್ಯೂಸ್.ಕಾಂ: ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆಯಲ್ಲಿರುವ ಶಿವನ ಕೆರೆಯಲ್ಲಿರುವ ಶಿವ ಪ್ರತಿಮೆಯ ನಿರ್ವಹಣೆಯ ಹೊಣೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಗೆ ವಹಿಸುವುದಾಗಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಪಟ್ಟಣದ ಪ್ರಸನ್ನ ಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಕೆಸರುಗದ್ದೆ ಎಂದೇ ಹೆಸರಾಗಿದ್ದ ಕೆರೆಯನ್ನು ಈಗ ಶಿವನ ಕೆರೆ ಮಾಡಿದ್ದೇನೆ. ಪಟ್ಟಣದ ಕೊಳಚೆ ಸೇರುತ್ತಿದ್ದ ಜಾಗ ಈಗ ಪವಿತ್ರವಾಗಿದೆ. ಎಲ್ಲವನ್ನೂ ಶುಚಿಗೊಳಿಸಿ ಸುಂದರವಾದ ಶಿವನ ಪ್ರತಿಮೆ ನಿರ್ಮಾಣ ಮಾಡಿರುವುದರಿಂದ ಈಗ ಉತ್ತಮ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಈ ಸ್ಥಳದ ನಿರ್ವಹಣೆಯನ್ನು ಧರ್ಮಸ್ಥಳ ಸಂಸ್ಥೆಯವರಿಗೆ ವಹಿಸುವುದಾಗಿ ಶಾಸಕರು ಹೇಳಿದರು.
ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಲು ಕಳೆದ ನಲವತ್ತು ವರ್ಷಗಳಿಂದಲೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರು ಅತ್ಯುತ್ತಮ ಕೆಲಸ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಗುಣಗಾನ ಮಾಡಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ತಾಲೂಕು-ನಾಡ ಕಚೇರಿಗಳಿಗೆ ಕಂದಾಯ ಸಚಿವರ ದಿಢೀರ್ ಭೇಟಿ | ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ತರಾಟೆ
60 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸ್ವ-ಸಹಾಯ ಸಂಘದಲ್ಲಿ ಸದಸ್ಯರುಗಳಾಗಿದ್ದು, ಎಲ್ಲರ ಬದುಕಿಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಹಾಗೂ ಶ್ರೀಮತಿ ಹೇಮಾವತಿ ಹೆಗಡೆ ಇವರುಗಳು ಶ್ರಮಿಸುತ್ತಿದ್ದಾರೆ. ಲಕ್ಷಾಂತರ ನಿರುದ್ಯೋಗಿ ಯುವಕರಿಗೂ ರುಡ್ಸೆಟ್ ಮೂಲಕ ತರಬೇತಿ ಕೊಡಲಾಗುತ್ತಿದೆ. ಸಮಾಜಕ್ಕೆ ಉಪಯುಕ್ತವಾದ ಕಾರ್ಯದಲ್ಲಿ ತೊಡಗಿರುವ ಡಾ.ಡಿ.ವೀರೇಂದ್ರ ಹೆಗಡೆರವರ ಸಮಾಜಮುಖಿ ಕೆಲಸವನ್ನು ಗುರುತಿಸಿ ದೇಶದ ಪ್ರಧಾನಿ ನರೇಂದ್ರಮೋದಿ ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಹೊಳಲ್ಕೆರೆ ತಾಲ್ಲೂಕಿನಲ್ಲಿ 35 ಸಾವಿರ ಮಹಿಳೆಯರು ಸ್ವ-ಸಹಾಯ ಸಂಘದಲ್ಲಿ ಸದಸ್ಯರಾಗಿದ್ದಾರೆ. ಮಹಿಳೆಯರು ಒಂದೆಡೆ ಕುಳಿತು ಚರ್ಚಿಸಲು ಪಟ್ಟಣದಲ್ಲಿ ಯೋಗ್ಯವಾದ ಸ್ಥಳ ನೀಡಿದ್ದೇನೆ. ಅದಕ್ಕೆ ಡಾ.ಡಿ.ವೀರೇಂದ್ರ ಹೆಗಡೆರವರು 4 ಕೋಟಿ ರೂ.ಗಳನ್ನು ಕೊಟ್ಟಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಸಿವಿಲ್ ನ್ಯಾಯಾಧೀಶರಾದ ಎಂ.ಪಿ.ಉಮೇಶ್ ಜಾಥಕ್ಕೆ ಚಾಲನೆ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಸ್.ಮಾರುತೇಶ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸುಮಿತ್ರಕ್ಕ, ತಹಶೀಲ್ದಾರ್ ಬೀಬಿ ಫಾತಿಮ, ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಜನಜಾಗೃತಿ ವೇದಿಕೆ ಸದಸ್ಯರಾದ ಎ.ಸಿ.ಗಂಗಾಧರಪ್ಪ, ಮೋಹನ್ ನಾಗರಾಜ್, ಜಿ.ಟಿ.ಪ್ರೇಮಕಲ, ದೇವರಾಜ್, ಸೌಮ್ಯ ರವಿಶಂಕರ್, ದೇವಣ್ಣ, ರಮೇಶ್ ಗೌಡ್ರು, ಸವಿತ, ಪುಟ್ಟಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಆರ್.ಅಶೋಕ್, ಮಾಜಿ ಉಪಾಧ್ಯಕ್ಷ ಕೆ.ಸಿ.ರಮೇಶ್, ಹೊಳಲ್ಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಶಿವಮೂರ್ತಿ, ಎಂ.ಬಿ.ನಾಗರಾಜ್ ಕಾಕನೂರು ಇದ್ದರು.