ಮುಖ್ಯ ಸುದ್ದಿ
ಬಾಗೂರು ದೇವಸ್ಥಾನ ತೊಳೆದ ವಿಚಾರ | ಗೊಂದಲ ಬಹಿರಂಗವಾಗಲಿ | ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
CHITRADURGA NEWS | 04 FEBRUARY 2024
ಚಿತ್ರದುರ್ಗ: ‘ನಾನು ಹೋಗಿದ್ದಕ್ಕೆ ದೇವಾಲಯ ತೊಳೆದರು’ ಎಂಬ ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ ವಿಷಾದ ನುಡಿ ಇದೀಗ ಬಹು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಶಿವಮೊಗ್ಗದಲ್ಲಿ ಮಾತನಾಡಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ‘ಚಿತ್ರದುರ್ಗ ಜಿಲ್ಲೆಯ ಬಾಗೂರಿನ ಚನ್ನಕೇಶವ ದೇವಾಲಯಲ್ಲಿ ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅವರಿಗೆ ಅಪಮಾನ ಆಗಿದ್ದರೆ, ಅದು ಸಮಸ್ತ ಹಿಂದೂ ಸಮಾಜಕ್ಕೆ ಆದ ಅಪಮಾನ. ಈ ಅಪಮಾನ ಆಗಿರುವುದು ಸತ್ಯವಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮುಂದೆಂದೂ ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೋಗಲ್ಲ | ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ
‘ನಾನು ಹೋದ ಬಳಿಕ ದೇವಸ್ಥಾನ ಸ್ವಚ್ಛ ಮಾಡಿದ್ದಾರೆ ಎಂದು ಈಶ್ವರಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ಆದರೆ, ಸ್ವಾಮೀಜಿಯವರನ್ನು ಸತ್ಕರಿಸಿ ಗೌರವ ಸಲ್ಲಿಸಿದ್ದೇವೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ. ಹಾಗಾದರೆ ಎಲ್ಲಿ ಗೊಂದಲ ಆಗಿದೆ ಎಂಬುದು ಬಹಿರಂಗವಾಗಬೇಕು. ಆ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಜಾತಿ ವ್ಯವಸ್ಥೆಯ ಕಾರಣಕ್ಕೆ ಚನ್ನಕೇಶವ ದೇವಾಲಯಕ್ಕೆ ಹೋಗುವುದಿಲ್ಲ ಎಂದು ಈಶ್ವರಾನಂದಪುರಿ ಸ್ವಾಮೀಜಿ ಘೋಷಿಸಿದ್ದಾರೆ. ಉಡುಪಿಯಲ್ಲಿ ಸಾಕ್ಷಾತ್ ಶ್ರೀಕೃಷ್ಣನೇ ಭಕ್ತ ಕನಕದಾಸರ ಭಕ್ತಿಗೆ ಮೆಚ್ಚಿ ಅವರತ್ತಲೇ ತಿರುಗಿ ದರ್ಶನ ನೀಡಿದ್ದ ಘಟನೆ ಎಲ್ಲರಿಗೂ ಗೊತ್ತಿದೆ’ ಎಂದರು.
ಇದನ್ನೂ ಓದಿ: ಫಾರ್ಮಸಿ ಕಲಿತವರಿಗೆ ಸುವರ್ಣಾವಕಾಶ | ಕೂಡಲೇ ಅರ್ಜಿ ಸಲ್ಲಿಸಿ
ಹೊಸದುರ್ಗ ಸಮೀಪದ ಸಾಣೇಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಡೆದ ‘ಮಠಗಳ ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಕೊಡುಗೆ’ ಗೋಷ್ಠಿಯಲ್ಲಿ ಅವರು ಮಾತನಾಡಿದ್ದ ಸ್ವಾಮೀಜಿ, ‘ಹಲವು ವರ್ಷಗಳ ಹಿಂದೆ ತಾಲ್ಲೂಕಿನ ಬಾಗೂರಿನಲ್ಲಿರುವ ಚನ್ನಕೇಶವ ದೇವಾಲಯ ಪ್ರವೇಶಿಸಿದ್ದಕ್ಕೆ ದೇವಸ್ಥಾನವನ್ನೇ ತೊಳೆದಿದ್ದರು. ಮಠಾಧೀಶರಿಗೂ ಅಸಮಾನತೆಯ ಸೋಂಕು ತಗಲುತ್ತಿರುವುದು ಬೇಸರದ ಸಂಗತಿ’ ಎಂದು ವಿಷಾದಿಸಿದರು.