ಮುಖ್ಯ ಸುದ್ದಿ
ರೇಣುಕಾಸ್ವಾಮಿ ಕುಟುಂಬದ ಜತೆ ಸರ್ಕಾರವಿದೆ | ಗೃಹ ಸಚಿವ ಡಾ.ಜಿ.ಪರಮೇಶ್ವರ್

CHITRADURGA NEWS | 18 JUNE 2024
ಚಿತ್ರದುರ್ಗ: ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಲೋಪ ಆಗದಂತೆ ತನಿಖೆ ನಡೆಸಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ನಗರದ ವಿಆರ್‌ಎಸ್ ಬಡಾವಣೆಯ ರೇಣುಕಾಸ್ವಾಮಿ ನಿವಾಸಕ್ಕೆ ಮಂಗಳವಾರ ಭೇಟಿ ಮಾಡಿ ತಂದೆ,ತಾಯಿ ಹಾಗೂ ಅವರ ಪತ್ನಿಗೆ ನಿಮ್ಮ ಕುಟುಂಬದ ಜತೆ ಸರ್ಕಾರವಿದೆ ಧೈರ್ಯವಾಗಿರಬೇಕು ಎಂದು ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ರೇಣುಕಸ್ವಾಮಿ ಕೊಲೆ ಪ್ರಕರಣ ಎಲ್ಲರಿಗೂ ನೋವು ತಂದಿದೆ. ಸರ್ಕಾರ ಮುಲಾಜಿಲ್ಲದೆ, ಯಾವುದೇ ಒತ್ತಡಕ್ಕೆ ಒಳಗಾಗದೆ ತನಿಖೆ ನಡೆಸುತ್ತಿದೆ. ಈಗಾಗಲೇ 17 ಜನರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ’ ಎಂದರು.
‘ರೇಣುಕಾಸ್ವಾಮಿ ವಿವಾಹವಾಗಿ ಒಂದು ವರ್ಷ ಆಗಿದೆ ಎಂಬ ವಿಚಾರ ತಿಳಿಯಿತು. ಕುಟುಂಬಕ್ಕೆ ನ್ಯಾಯ, ಜೀವನ ನಿರ್ವಹಣೆಗೆ ಸೊಸೆಗೆ ಸರ್ಕಾರಿ ಉದ್ಯೋಗ ಕಲ್ಪಿಸಿ ಎಂದು ಮನವಿ ಮಾಡಿದ್ದಾರೆ. ಇವರ ಮನವಿಯನ್ನು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಶೀಘ್ರ ಕ್ರಮವಹಿಸಲಾಗುತ್ತದೆ’ ಎಂದು ತಿಳಿಸಿದರು.
Video: ರೇಣುಕಸ್ವಾಮಿ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿರುವ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
‘ಘಟನೆ ನಡೆಯಬಾರದಿತ್ತು. ಆದರೆ ನಡೆದಿದೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಕಾನೂನಿನಂತೆ ತಪಿಸ್ಥರಿಗೆ ಶಿಕ್ಷೆಯಾಗಲಿದೆ’ ಎಂದರು.
‘ಪ್ರಕರಣದ ಸಿಬಿಐ ತನಿಖೆ ಅಗತ್ಯ ಇಲ್ಲ. ಯಾವ ಸಚಿವರೂ ಇದರಲ್ಲಿ ಒತ್ತಡ ತಂದಿಲ್ಲ. ಒತ್ತಡಕ್ಕೆ ಮಣಿಯುವ ಪ್ರಶ್ನೆಯಿಲ್ಲ’ ಎಂದರು.
ಕ್ಲಿಕ್ ಮಾಡಿ ಓದಿ: ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿ | ರಂಭಾಪುರಿ ಶ್ರೀ ಒತ್ತಾಯ
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್‌ಪೀರ್, ಮುಖಂಡರಾದ ಮುರುಳೀಧರ ಹಾಲಪ್ಪ, ಯೋಗೀಶ್ ಬಾಬು, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಓ.ಶಂಕರ್ ಇದ್ದರು.
