ಮುಖ್ಯ ಸುದ್ದಿ
ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಪತಿರಾಯ | ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

CHITRADURGA NEWS | 11 MARCH 2025
ಚಿತ್ರದುರ್ಗ: ಪತ್ನಿಯ ಮೇಲೆ ವೃಥಾ ಅನುಮಾನಪಟ್ಟು, ಅನುಮಾನ ವಿಕೋಪಕ್ಕೆ ತಿರುಗಿ ಜಗಳವಾಗಿ, ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಪತಿರಾಯನಿಗೆ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.
ಮೊಳಕಾಲ್ಮೂರು ತಾಲೂಕು ಚಿಕ್ಕೇರಹಳ್ಳಿ ಗ್ರಾಮದ ಹನುಮಂತಪ್ಪ ಎಂಬ ಆರೋಪಿ, ಪತ್ನಿ ಸಾವಿತ್ರಮ್ಮನನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದಲ್ಲಿ ಇನ್ನೂ ಒಂದು ವರ್ಷ ಶಿಕ್ಷೆ ಅನುಭವಿಸಬೇಕಿದೆ.
ಇದನ್ನೂ ಓದಿ: ಮಾರ್ಚ್ ತಿಂಗಳ ಪಡಿತರ 15 ಕೆ.ಜಿ | ಅಂತ್ಯೋದಯ ಕಾರ್ಡ್‍ಗೆ 35 ಕೆಜಿ
ಹನುಮಂತಪ್ಪ ತನ್ನ ಪತ್ನಿ ಸಾವಿತ್ರಮ್ಮನ ಶೀಲ ಶಂಕಿಸಿ ಪ್ರತಿ ದಿನ ಮನೆಯಲ್ಲಿ ಜಗಳ ಮಾಡುತ್ತಿದ್ದ. 2023 ಜುಲೈ 19 ರಂದು ಪತ್ನಿ ಹಸು ಮೇಯಿಸಲು ಮನೆಯಿಂದ ಹೊರಟಾಗ ಹಿಂದಿನಿಂದ ಕಟ್ಟಿಗೆ ತರುವ ಉದ್ದೇಶದಿಂದ ಹನುಮಂತಪ್ಪ ಮಚ್ಚು ಹಿಡಿದು ಹೋಗಿ ಜಮೀನೊಂದರಲ್ಲಿ ಜಗಳ ಮಾಡಿ ಪತ್ನಿಯ ಕುತ್ತಿಗೆಗೆ ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಮೃತಪಟ್ಟಿದ್ದಳು.
ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ, ಪ್ರಕರಣದ ತನಿಖೆ ನಡೆಸಿ, ಆರೋಪಿ ವಿರುದ್ಧ ಸಿಪಿಐ ವಸಂತ ವಿಠಲ ಆಸೋದೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ಪಿಎಂಶ್ರೀ ಯೋಜನೆಯಡಿ ಜಿಲ್ಲೆಗೆ 9.50 ಕೋಟಿ ರೂ. ಅನುದಾನ | ಲೋಕಸಭೆಯ ಮಾಹಿತಿ
ವಿಚಾರಣೆ ನಡೆಸಿದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಮಾ.10 ರಂದು ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸಿಪಿಐ ವಸಂತ ವಿಠಲ ಆಸೋದೆ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಆರೋಪಿಗೆ ಶಿಕ್ಷೆ ಆಗುವಲ್ಲಿ ತನಿಖಾಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ.
ಇದನ್ನೂ ಓದಿ: ಹಕ್ಕಿ ಜ್ವರ ಭೀತಿ | ಮುನ್ನೆಚ್ಚರಿಕೆ ಕ್ರಮಕ್ಕೆ ADC ಸೂಚನೆ
ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ರಾಂಪುರ ಠಾಣೆ ಪಿಎಸ್‍ಐ, ಸಿಬ್ಬಂದಿಗಳಾದ ಆರ್.ರಮೇಶ್, ಎಂ.ಜಿ.ಸುಧೀರ್, ರಾಘವೇಂದ್ರ ಇವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.
