ಮುಖ್ಯ ಸುದ್ದಿ
Taralabalu mata: ಸಿರಿಗೆರೆ ತರಳಬಾಳು ಮಠಕ್ಕೆ ಬೈಲಾ ಇಲ್ಲ | ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

CHITRADURGA NEWS | 06 AUGUST 2024
ಚಿತ್ರದುರ್ಗ: ದಾವಣಗೆರೆಯ ರೆಸಾರ್ಟ್‌ನಲ್ಲಿ ಭಾನುವಾರ ಮಠದ ವಿರುದ್ಧ ಸಭೆ ನಡೆಸಿರುವವರ ಬಗ್ಗೆ ನನಗೆ ವಿಶ್ವಾಸವಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಖಾಸಗಿಯಾಗಿ ಮಾತನಾಡುವ ಬದಲು ಶಿಷ್ಯರ ಎದುರಿನಲ್ಲಿಯೇ ಚರ್ಚಿಸೋಣ ಎಂದು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸಿರಿಗೆರೆಯ ಮಠದ ಆವರಣದಲ್ಲಿ ಸೋಮವಾರ ನಡೆದ ಭಕ್ತರ ಸಭೆಯಲ್ಲಿ ಮಾತನಾಡಿ, ‘ಮಠಕ್ಕೆ ಕೆಲವು ರೀತಿ ರಿವಾಜುಗಳು ಇವೆ. ಧಾರ್ಮಿಕ ಸಂಸ್ಥೆಯೊಂದರ ವಿಚಾರಗಳನ್ನು ರಾಜಕಾರಣಿಗಳಂತೆ ರೆಸಾರ್ಟ್‌ನಲ್ಲಿ ಚರ್ಚಿಸುವುದು ತರವಲ್ಲ. ಅದು ಶಿಷ್ಟಾಚಾರವಲ್ಲದ ನಡವಳಿಕೆ. ಮಠದ ಬೈಲಾ ಬಗ್ಗೆ ಕೆಲವರು ತಪ್ಪು ತಿಳಿವಳಿಕೆ ಹೊಂದಿದ್ದಾರೆ. ವಾಸ್ತವದಲ್ಲಿ ಮಠಕ್ಕೆ ಬೈಲಾ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ:ದಾವಣಗೆರೆ ಸಭೆಯಲ್ಲಿದ್ದ ಸ್ವಾರ್ಥಿಗಳನ್ನು ಮಠದಿಂದ ಬಹಿಷ್ಕರಿಸಿ | ಸಿರಿಗೆರೆ ಮಠದ ಭಕ್ತರ ಒಕ್ಕೊರಲ ಒತ್ತಾಯ
‘ಮಠದ ಚಟುವಟಿಕೆ ಬಗ್ಗೆ ಭಕ್ತರಿಗೆ ಅಸಮಾಧಾನವಿದ್ದರೆ ಸಾಧು ಸದ್ಧರ್ಮ ವೀರಶೈವ ಸಂಘಕ್ಕೆ ದೂರು ನೀಡಬೇಕು. ಅದನ್ನು ಬಿಟ್ಟು ರೆಸಾರ್ಟ್‌ನಲ್ಲಿ ಮಠದ ವಿಚಾರದ ಏಕೆ ಚರ್ಚಿಸಬೇಕು. ಕೆಲವರು ತಮ್ಮ ಅಹವಾಲು ಹೇಳಿಕೊಳ್ಳಲು ಬೆಂಗಳೂರು ಕೇಂದ್ರದಲ್ಲಿ ನನ್ನನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಆದರೆ ನಾಲ್ಕು ಗೋಡೆಗಳ ಮಧ್ಯೆ ಖಾಸಗಿಯಾಗಿ ಮಾತನಾಡುವ ಬದಲು ಶಿಷ್ಯರ ಎದುರಿನಲ್ಲಿಯೇ ಚರ್ಚಿಸಬೇಕು. ಅವರು ಬೆಂಗಳೂರಿನಲ್ಲಿ ನಮ್ಮನ್ನು ಭೇಟಿಯಾಗುವುದು ಬೇಡ, ಸಿರಿಗೆರೆಯಲ್ಲಿಯೇ ಆಗಲಿ’ ಎಂದು ಹೇಳಿದರು.
‘ಮಠದಲ್ಲಿ ಯಾವುದೇ ಹಣ ಮತ್ತು ಆಸ್ತಿಯ ದುರುಪಯೋಗ ನಡೆದಿಲ್ಲ. ಪೀಠಾಧಿಪತಿ, ಚರಪಟ್ಟಾಧ್ಯಕ್ಷರು ಮತ್ತು ಶಾಖಾಮಠದ ಹೆಸರಿನಲ್ಲಿರುವ ಎಲ್ಲಾ ಆಸ್ತಿಯೂ ಮಠದ್ದೇ ಆಗಿರುತ್ತದೆ. ಪೀಠಾಧಿಪತಿಯಾಗಿ ನಾವು ಆಸ್ತಿ ಮತ್ತು ಹಣವನ್ನು ಸಂರಕ್ಷಣೆ ಮಾಡುತ್ತಿದ್ದೇವೆ’ ಎಂದರು.
