ಮುಖ್ಯ ಸುದ್ದಿ
SSLC Annual Exam | ಸಮಾಜ ವಿಜ್ಞಾನ ಪರೀಕ್ಷೆ | ಯಾವ ಕೇಂದ್ರದಲ್ಲಿ ಎಷ್ಟು ಗೈರು
CHITRADURGA NEWS | 27 MARCH 2024
ಚಿತ್ರದುರ್ಗ: ಜಿಲ್ಲೆಯಾದ್ಯಂತ ಬುಧವಾರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸುಗಮವಾಗಿ ನಡೆಯಿತು. ಪರೀಕ್ಷೆಯ ಎರಡನೇ ದಿನ ನಡೆದ ಸಮಾಜ ವಿಜ್ಞಾನ ಪರೀಕ್ಷೆಗೆ 22,294 ವಿದ್ಯಾರ್ಥಿಗಳಲ್ಲಿ 22,026 ಹಾಜರಾಗಿದ್ದರು. 268 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ 78 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಚಳ್ಳಕೆರೆ 60, ಚಿತ್ರದುರ್ಗ 85, ಹಿರಿಯೂರು 32, ಹೊಳಲ್ಕೆರೆ 33, ಹೊಸದುರ್ಗ 41 ಹಾಗೂ ಮೊಳಕಾಲ್ಮುರಿನಲ್ಲಿ 17 ವಿದ್ಯಾರ್ಥಿಗಳು ಗೈರಾಗಿದ್ದಾರೆ
ಜಿಲ್ಲೆಯ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಾದ ಚಳ್ಳಕೆರೆಯ ಆದರ್ಶ ವಿದ್ಯಾಲಯ, ಭೀಮಸಮುದ್ರದ ಭೀಮೇಶ್ವರ ಪದವಿ ಪೂರ್ವ ಕಾಲೇಜು, ಯಳಗೋಡು ಸರ್ಕಾರಿ ಪದವಿ ಪೂರ್ವ ಕಾಲೇಜು, ಯರಬಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಹಾನಗಲ್ ನುಂಕೆಮಲೆ ಸಿದ್ದೇಶ್ವರ ಪ್ರೌಢಶಾಲೆಗಳಿಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ನಕಲು ತಡೆಗೆ ಕ್ರಮವಹಿಸಲಾಗಿತ್ತು. ಯಾವುದೇ ಡಿಬಾರ್ ಪ್ರಕರಣ ನಡೆದಿಲ್ಲ.
ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ವಿದ್ಯಾರ್ಥಿಗಳ ತಪಾಸಣೆ ನಡೆಸಿದರು. ಮೊಬೈಲ್ ಫೋನ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಂದಿದ್ದರೆ ಇಲ್ಲಿಯೇ ನೀಡಿ ಕೇಂದ್ರಕ್ಕೆ ತೆರಳಿ ಎಂಬ ಸೂಚನೆಯನ್ನು ಕೇಂದ್ರದ ಆವರಣದಲ್ಲಿ ನೀಡುತ್ತಿದ್ದರು. ಪ್ರಥಮ ಚಿಕಿತ್ಸಾ ಪರಿಕರದೊಂದಿಗೆ ಆರೋಗ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.
ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕಲು ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಜೆರಾಕ್ಸ್, ಕಂಪ್ಯೂಟರ್ ಸೆಂಟರ್ಗಳನ್ನು ಬಂದ್ ಮಾಡಲಾಗಿತ್ತು. ಸಿಬ್ಬಂದಿಯನ್ನು ಹೊರತುಪಡಿಸಿ ಅನ್ಯರು ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸದಂತೆ ನಿಷೇಧಿಸಲಾಗಿತ್ತು.
ಕ್ಲಿಕ್ ಮಾಡಿ ಓದಿ: ಕುಡಿಯುವ ನೀರು ಪ್ರಕರಣ| ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮಾನತು
ಕೇಂದ್ರಗಳ ಪ್ರವೇಶದ್ವಾರ ಹಾಗೂ 1007 ಪರೀಕ್ಷಾ ಕೊಠಡಿಗಳಲ್ಲೂ ಸಿ.ಸಿ. ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿದ ಸಿ.ಸಿ.ಟಿವಿ ಕ್ಯಾಮೆರಾದಲ್ಲಿನ ನೇರ ದೃಶ್ಯಾವಳಿಯನ್ನು ಡಯಟ್ ಕೇಂದ್ರದಲ್ಲಿ ವಿಶೇಷ ತಂಡ ವೀಕ್ಷಿಸುತ್ತಿದೆ. ಮಾರ್ಚ್ 30 ರಂದು ವಿಜ್ಞಾನ ಪರೀಕ್ಷೆ ನಡೆಯಲಿದೆ.