Connect with us

    Siridhanya : ಸಿರಿಧಾನ್ಯ ‘ಸಾವೆ’ಗೆ ದರ ನಿಗದಿಗೊಳಿಸಿ | ಜಿಲ್ಲಾಡಳಿತಕ್ಕೆ ಅನ್ನದಾತರ ಡೆಡ್‌ ಲೈನ್‌

    Siridhanya

    ಹೊಸದುರ್ಗ

    Siridhanya : ಸಿರಿಧಾನ್ಯ ‘ಸಾವೆ’ಗೆ ದರ ನಿಗದಿಗೊಳಿಸಿ | ಜಿಲ್ಲಾಡಳಿತಕ್ಕೆ ಅನ್ನದಾತರ ಡೆಡ್‌ ಲೈನ್‌

    CHITRADURGA NEWS |05 SEPTEMBER 2024
    ಚಿತ್ರದುರ್ಗ: ಸಿರಿಧಾನ್ಯ ಸಾವೆ ಬೆಲೆ ದಿಢೀರ್ ಕುಸಿತದಿಂದ ಕಂಗಲಾಗಿರುವ ರೈತರು ಸೆ.9ರೊಳಗೆ ಬೆಲೆ ನಿಗದಿ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

    ಹೊಸದುರ್ಗ ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಸಭೆ ನಡೆಸಿದ ರೈತರು, ಹೊಸದುರ್ಗ ತಾಲ್ಲೂಕಿನಾದ್ಯಂತ ಸಾವೆ ಇಳುವರಿ ಉತ್ತಮವಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಹೆಚ್ಚಿನ ಪ್ರಮಾಣದ ಆವಕವಾಗುತ್ತಿದೆ. ಆದರೆ ದರ ದಿಢೀರ್ ಕುಸಿದಿದೆ.

    ಕಳೆದ ಒಂದು ತಿಂಗಳ ಅವಧಿಯಲ್ಲಿ ಮಾರುಕಟ್ಟೆ ಧಾರಣೆಯಲ್ಲಿ ಏರಿಳಿತ ಕಂಡುಬಂದಿದೆ. ಕ್ವಿಂಟಲ್ ಸಾವೆಗೆ ಆರಂಭದಲ್ಲಿ ₹3700 ದರ ಇತ್ತು. ಅದು ₹3300ಕ್ಕೆ ಇಳಿದು, ಅಲ್ಲಿಂದ ₹3100ಕ್ಕೆ ಕುಸಿಯಿತು. ಸದ್ಯ ₹2,621 ದರವಿದೆ. ಕ್ರಮೇಣವಾಗಿ ಬೆಲೆಯಲ್ಲಿ ಕುಸಿತವಾಗುತ್ತಿದೆ. ಸರ್ಕಾರ ಕೂಡಲೇ ಸಾವೆಗೆ ಕ್ವಿಂಟಲ್‌ಗೆ ₹3,500ರಿಂದ ₹4,000 ದರ ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

    ಕ್ಲಿಕ್ ಮಾಡಿ ಓದಿ: ತಹಶೀಲ್ದಾರ್ ಜೀಪ್‌ಗೆ ಬೆಂಕಿ ಹಚ್ಚಿದ ಪೃಥ್ವಿರಾಜ್‌ | ಅನಾಹುತ ತಪ್ಪಿಸಿದ ಸಿಬ್ಬಂದಿ

    ಸಾವೆ ಮಾರುಕಟ್ಟೆಗೆ ಬರುವ ಮುನ್ನ ಕ್ವಿಂಟಲ್‌ಗೆ ₹3,500ರಿಂದ ₹4,000 ದರ ಇತ್ತು. ಆದರೆ ಸೋಮವಾರದ ಮಾರುಕಟ್ಟೆಯ ಧಾರಣೆ ಕ್ವಿಂಟಲ್‌ಗೆ ₹2800ಕ್ಕೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಹೀಗಾದರೆ ರೈತರ ಬದುಕು ಹೇಗೆ? ಸಾವೆಗೆ ಸೆ. 9ರೊಳಗೆ ಬೆಲೆ ನಿಗದಿ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ರೈತ ಸಂಘದ ಅಧ್ಯಕ್ಷ ಡಿ. ಬೋರೇಶ್ ಆಕ್ರೋಶ ವ್ಯಕ್ತಪಡಿಸಿದರು.

    ಸ್ವಲ್ಪ ತೇವಾಂಶವಿರುವ ಹಾಗೂ ಸಂಪೂರ್ಣ ಒಣಗಿರುವ ಸಾವೆಗೆ ಭಿನ್ನ ದರವಿದೆ. ವರ್ತಕರು ಸಾವೆ ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ನಿಗದಿ ಮಾಡಬೇಕು. ಆದರೆ ದಲ್ಲಾಳಿಗಳು ಮನಬಂದಂತೆ ದರ ನಿಗದಿ ಮಾಡಿ, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.

    ಕ್ಲಿಕ್ ಮಾಡಿ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಪುನಃ ವಿಘ್ನ | ಕಾಲುವೆ ನಿರ್ಮಾಣಕ್ಕೆ ಎದುರಾಯಿತು ತೊಡಕು

    ಕಟಾವಿನ ಸಮಯದಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಸಾವೆ ನೆಲಕ್ಕುರುಳಿದೆ. ಕಟಾವಿನ ನಂತರ ಅದನ್ನು ಒಣಗಿಸಲು ಸಾಕಷ್ಟು ಬಿಸಿಲಿನ ವಾತಾವರಣ ಇಲ್ಲ. ಬೆಲೆ ನಿಗದಿಯಾಗುವವರೆಗೂ ಮನೆಯಲ್ಲಿ ಇಟ್ಟುಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಎಕರೆ ಸಾವೆ ಕಟಾವಿಗೆ ₹2,500ರಿಂದ ₹3,000 ವ್ಯಯಿಸಬೇಕಾಗಿದೆ. ರೈತರಿಗೆ ಖರ್ಚು ಮಾಡಿದಷ್ಟು ಹಣ ಬಂದರೆ ಸಾಕು ಎನ್ನುವ ಸ್ಥಿತಿ ಇದೆ ಎಂದು ವಿವರಿಸಿದರು.

    ತಾಲ್ಲೂಕಿನಾದ್ಯಂತ ಈ ಬಾರಿ 26,829 ಹೆಕ್ಟೇರ್‌ನಲ್ಲಿ ಸಾವೆ ಬಿತ್ತನೆಯಾಗಿದೆ. ಹದ ಮಳೆ, ಪೂರಕ ವಾತಾವರಣದ ಪರಿಣಾಮವಾಗಿ ಎಕರೆಗೆ ಸರಾಸರಿ 5 ರಿಂದ 6 ಕ್ವಿಂಟಲ್ ಇಳುವರಿ ಬಂದಿದೆ. ಈ ಬಾರಿ ಶೇ 30ರಷ್ಟು ಬಿತ್ತನೆ ಹೆಚ್ಚಾಗಿದೆ. ಹೀಗಾಗಿ ಎಪಿಎಂಸಿಗೆ ಬರುತ್ತಿರುವ ಸಾವೆ ಪ್ರಮಾಣ ಅಧಿಕವಾಗಿದೆ. ಕಳೆದ ಒಂದು ತಿಂಗಳಿನಿಂದ 27,479 ಕ್ವಿಂಟಲ್ ಸಾವೆ ಆವಕವಾಗಿದೆ. ಇನ್ನೂ 3.75 ಲಕ್ಷ ಕ್ವಿಂಟಲ್ ಸಾವೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

    ಮಾರುಕಟ್ಟೆಗೆ ತೇವಾಂಶಯುಕ್ತ ಸಾವೆ ಬರುತ್ತಿದೆ. ಆದರೆ ಚೆನ್ನಾಗಿ ಒಣಗಿಸಿದ ಮೇಲೆಯೇ ಅದನ್ನು ಮಾರುಕಟ್ಟೆಗೆ ತರಬೇಕು. ಸಾವೆ ಹೆಚ್ಚಾಗಿ ಮಹಾರಾಷ್ಟ್ರ ಹಾಗೂ ತಮಿಳುನಾಡಿಗೆ ರವಾನೆಯಾಗುತ್ತದೆ. ಮಹಾರಾಷ್ಟ್ರ ದಲ್ಲಿ ಗಣೇಶ ಚತುರ್ಥಿ ಇರುವುದರಿಂದ ಖರೀದಿ ವಿಳಂಬವಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೊರ ರಾಜ್ಯದಿಂದಲೂ ಖರೀದಿದಾರನನ್ನು ಕರೆಯಿಸಲಾಗುವುದು. ದಲ್ಲಾಳಿಗಳ ಸಭೆ ನಡೆಸಿ, ಸೂಕ್ತ ಬೆಲೆಯಲ್ಲಿ ಖರೀದಿ ನಡೆಸಲು ಸೂಚಿಸಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ಟಿ. ಗೌತಮ್ ರೈತರಿಗೆ ಸಲಹೆ ನೀಡಿದರು.

    ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 05 | ಹಠಾತ್ ಪ್ರಯಾಣ, ಹೊಸ ವಸ್ತ್ರ, ಆಭರಣ ಖರೀದಿ

    ಸಾವೆಗೆ ಉತ್ತಮ ಬೆಲೆ ನೀಡುವಂತೆ ಹಾಗೂ ಬೆಂಬಲ ಬೆಲೆ ನಿಗದಿ ಮಾಡುವಂತೆ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್ ಈಶ ಹೇಳಿದರು.

    ರೈತ ಸಂಘದ ಗೌರವಾಧ್ಯಕ್ಷ ಕೆ.ಸಿ. ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಶಶಿಧರ್ ಇದ್ದರು.

    Continue Reading
    You may also like...
    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top