ಮುಖ್ಯ ಸುದ್ದಿ
ಮುರುಘಾ ಶರಣರ ವಿರುದ್ಧ ವ್ಯವಸ್ಥಿತ ಪಿತೂರಿ | ಹೈಕೋರ್ಟ್‍ನಲ್ಲಿ ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್ ವಾದ ಮಂಡನೆ

ಚಿತ್ರದುರ್ಗ ನ್ಯೂಸ್.ಕಾಂ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಡಾ.ಶಿವಮೂರ್ತಿ ಮುರುಘಾ ಶರಣರ ಜಾಮೀನಿ ಅರ್ಜಿ ಗುರುವಾರ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬಂದಿದ್ದು, ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್ ಶರಣರ ಪರ ಸುಧೀರ್ಘ ವಾದ ಮಂಡಿಸಿದರು.
ಮುರುಘಾ ಶರಣರ ಜಾಮೀನು ಅರ್ಜಿ ಹೈಕೋರ್ಟ್ ನ್ಯಾಯಾಧೀಶರಾದ ಶ್ರೀನಿವಾಸ್ ಹರೀಶ್‍ಕುಮಾರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಸುಧೀರ್ಘ ವಾದ ಆಲಿಸಿದ ನ್ಯಾಯಮೂರ್ತಿ ವಿಚಾರಣೆಯನ್ನು ಅ.30 ಸೋಮವಾರಕ್ಕೆ ಮುಂದೂಡಿದರು.
ಶರಣರ ಪರ ಸುಧೀರ್ಘವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್, ಮುರುಘಾ ಮಠ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಮಸಿ ಬಳಿಯುವ ಉದ್ದೇಶದಿಂದಲೇ ಪೋಕ್ಸೋ, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ, ಬಾಲ ನ್ಯಾಯ ಅಪರಾಧಗಳಂತಹ ಗುರುತರ ಸುಳ್ಳು ಪ್ರಕರಣಗಳನ್ನು ಹೆಣೆಯಲಾಗಿದೆ ಎಂದು ಅಭಿಪ್ರಾಯಪಟ್ಟರು.

ಮುರುಘಾ ಮಠ
ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿರುವ ಇಬ್ಬರೂ ಸಂತ್ರಸ್ಥ ಬಾಲಕಿಯರು, ದೂರು ದಾಖಲಾಗುವ ಹಲವು ತಿಂಗಳುಗಳ ಮೊದಲೇ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ವಶದಲ್ಲಿ ಅವರ ಮನೆಯಲ್ಲೇ ಇದ್ದರು. ಇದನ್ನೆಲ್ಲಾ ಗಮನಿಸಿದಾಗ ಶರಣರ ವಿರುದ್ಧ ಸಾಕಷ್ಟು ಪೂರ್ವ ನಿಯೋಜಿತ ಪಿತೂರು ಅಡಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಮುರುಘಾ ಮಠದಲ್ಲಿ ಹೊಸ ಬೆಳವಣಿಗೆ | ಕಂಚಿನ ಪ್ರತಿಮೆಯಿಟ್ಟು ಶೂನ್ಯಪೀಠಾರೋಹಣ
ಮಾಜಿ ಶಾಸಕ, ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರ ಕ್ರಿಮಿನಲ್ ಪಿತೂರಿಯ ಭಾಗವಾಗಿ ಶರಣರು ವಿವಿಧ ಹೀನಾಯ ಪ್ರಕರಣಗಳನ್ನು ಎದುರಿಸುವಂತಾಗಿದೆ ಎಂದು ಸಿ.ವಿ.ನಾಗೇಶ್ ಹೇಳಿದರು.
ಸಂತ್ರಸ್ಥ ಬಾಲಕಿಯರು ಮಠದ ಆವರಣದಲ್ಲಿರುವ ಹಾಸ್ಟೆಲ್‍ನಲ್ಲೇ ಇದ್ದರೂ, ಅಲ್ಲಿ ಮಹಿಳಾ ವಾರ್ಡನ್ ಇದ್ದರು. ಸ್ವಾಮೀಜಿ 10-15 ದಿನಕ್ಕೊಮ್ಮೆ ಮಕ್ಕಳಿಗೆ ಇಂಗ್ಲೀಷ್, ಸಂಸ್ಕøತ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಎಲ್ಲ ಮಕ್ಕಳು ಅವರನ್ನು ಅಪ್ಪಾಜಿ ಎಂದು ಕರೆಯುತ್ತಿದ್ದರು.
ಇಬ್ಬರೂ ಬಾಲಕಿಯರು 2022 ಜುಲೈ 24 ರಂದು ಚಿತ್ರದುರ್ಗದಿಂದ ಕೆಎಸ್‍ಆರ್‍ಟಿಸಿ ಬಸ್ ಮೂಲಕ ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣೆಗೆ ಹಾಜರಾಗಿ ನಮಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡಿದ್ದರು. ಮರುದಿನವೇ ಬಸವರಾಜನ್ ಹಾಗೂ ಅವರ ಪತ್ನಿ ಬೆಂಗಳೂರಿಗೆ ಬಂದು ಮಕ್ಕಳನ್ನು ತಮ್ಮ ಜೊತೆಗೆ ಕರೆದೊಯ್ದರು.
ಇದನ್ನೂ ಓದಿ: ಮುರುಘಾ ಮಠದ ಪ್ರಕರಣ | ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಾಜಿ ಸಚಿವ
ಬಾಲಕಿಯರಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದರು. ಆದರೆ, ಏನು ಅನ್ಯಾಯವಾಗಿದೆ ಎಂದು ಹೇಳಿಲ್ಲ. ಒಂದು ತಿಂಗಳ ನಂತರ ಮೈಸೂರಿನ ಒಡನಾಡಿ ಸಂಸ್ಥೆಯ ಆಶ್ರಯ ಪಡೆದ ಮಕ್ಕಳು ಅಲ್ಲಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ, ವೈದ್ಯಕೀಯ ಪರೀಕ್ಷೆಯಲ್ಲಿ ಮಕ್ಕಳ ಮೇಲೆ ಉದ್ರೇಕಿತ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎನ್ನುವುದು ಸಾಬೀತಾಗಿದೆ ಎಂದು ನ್ಯಾಯವಾದಿ ಸಿ.ವಿ.ನಾಗೇಶ್ ನ್ಯಾಯಾಲಯದ ಮುಂದೆ ತಮ್ಮ ವಾದ ಮಂಡಿಸಿದ್ದಾರೆ. ಅ.30 ರ ವಿಚಾರಣೆಯಂದು ಮುಂದೇನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
