ಮುಖ್ಯ ಸುದ್ದಿ
ಇದ್ದೂ ಇಲ್ಲದಂತಾಗಿರುವ ಸಿಸಿ ಕ್ಯಾಮರಾಗಳನ್ನು ಮೊದಲು ರಿಪೇರಿ ಮಾಡಿಸಿ | ವೀರೇಂದ್ರ ಪಪ್ಪಿ ಸೂಚನೆ
CHITRADURGA NEWS | 26 JUNE 2024
ಚಿತ್ರದುರ್ಗ: ನಗರದಲ್ಲಿರುವ ಸಿಸಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಸಿ.ಸಿ.ಕ್ಯಾಮೆರಾಗಳನ್ನು ಕಳೆದ 4-5 ವರ್ಷದ ಹಿಂದೆ ಹಾಕಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲ. ಈ ಕುರಿತು ಕ್ರಮವಹಿಸಬೇಕು ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಅವರಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಬಾಲ್ಯವಿವಾಹ ಮಾಡಿಸುವ ಪುರೋಹಿತರು, ಶಾಮಿಯಾನ, ಭಾಗಿಯಾದವರ ಮೇಲೂ FIR ಹಾಕಿ
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ 2023-24ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಚಿತ್ರದುರ್ಗ ನಗರದಲ್ಲಿರುವ ಸಿ.ಸಿ.ಕ್ಯಾಮೆರಾಗಳು ಹಳೆಯದಾಗಿದ್ದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಮುಂದಿನ 15 ದಿನಗಳ ಒಳಗಾಗಿ ಹೊಸ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತೇವೆ ಎಂದು ನಗರಸಭೆ ಪೌರಯುಕ್ತೆ ಎಂ.ರೇಣುಕಾ ಸಭೆಯಲ್ಲಿ ತಿಳಿಸಿದರು.
ಹೊಸ ಮದ್ಯದಂಗಡಿಗೆ ಅನುಮತಿ ಬೇಡ :
ಚಿತ್ರದುರ್ಗ ಕ್ಷೇತ್ರದಲ್ಲಿ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಕೂಡಲೆ ಇದರ ಬಗ್ಗೆ ಅಬಕಾರ ಇಲಾಖೆ ಕ್ರಮ ಕೈಗೊಂಡು, ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ಬಂದ್ ಮಾಡಿಸಬೇಕು, ಅಲ್ಲದೆ ಹೊಸದಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಿಯೂ ಖಾಸಗಿ ಅಥವಾ ಎಂಎಸ್‍ಐಎಲ್ ಮದ್ಯದಂಗಡಿಗೆ ಹಾಗೂ ಸಿಎಲ್-7 ಗೂ ಕೂಡ ಅನುಮತಿ ನೀಡುವುದು ಬೇಡ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಅಬಕಾರ ಇಲಾಖೆ ಉಪ ಆಯುಕ್ತರಿಗೆ ಸೂಚನೆ ನೀಡಿದರು.