ಕ್ರೈಂ ಸುದ್ದಿ
ಬಂಗಾರದ ನಾಣ್ಯದ ಕಥೆ 8 ಲಕ್ಷಕ್ಕೆ ನಾಮ | ನಾಲ್ಕೇ ದಿನದಲ್ಲಿ ಪ್ರಕರಣ ಬೇಧಿಸಿದ ರಾಂಪುರ ಪೊಲೀಸರು
ಚಿತ್ರದುರ್ಗ ನ್ಯೂಸ್.ಕಾಂ: 5 ಕೆಜಿ ಬಂಗಾರದ ನಾಣ್ಯದ ಕಥೆ ಹೇಳಿ, 8 ಲಕ್ಷ ರೂ. ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಮೊಳಕಾಲ್ಮೂರು ತಾಲೂಕು ರಾಂಪುರ ಪೊಲೀಸರು ಒಂದೇ ವಾರದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 7.70 ಲಕ್ಷ ರೂ. ನಗದು ಹಾಗೂ ಒಂದು ಮೊಬೈಲ್ ವಶೊಡಿಸಿಕೊಳ್ಳಲಾಗಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು, ಕಾಸಪುರಕೊರಚರಹಟ್ಟಿಯ 25 ವರ್ಷದ ಹನುಮಂತಪ್ಪ ಬಂಧಿತ ಆರೋಪಿ. ಮತ್ತೋರ್ವ ಆರೋಪಿ ವಿಜಯನಗರ ಜಿಲ್ಲೆ ಸಂಡೂರು ತಾಲೂಕು ತಿಮ್ಲಾಪುರ ಕೊರಚರಹಟ್ಟಿಯ ರಾಮಾಂಜನೇಯ ತಪ್ಪಿಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಪ್ರವಾಸಿ ಮಂದಿರದಲ್ಲಿ ಇಸ್ಪೀಟ್ | ನಗರಸಭೆ ಸದಸ್ಯ ಸೇರಿ 14 ಜನರ ಬಂಧನ
ಮೂಲತಃ ಆಂಧ್ರಪ್ರದೇಶದ ಮಿನಿಗಾ ವಿಜಯ್ ಎಂಬುವವರಿಗೆ 2023 ಡಿಸೆಂಬರ್ 2 ರಂದು ಅಪರಿಚಿತ ವ್ಯಕ್ತಿಯೊಬ್ಬ ಪೋನ್ ಮಾಡಿ, ನಮ್ಮ ತಾತನ ಹಳೆಯ ಮನೆ ಕಿತ್ತು, ಹೊಸ ಮನೆ ಕಟ್ಟಲು ಪಾಯ ತೆಗೆಯುತ್ತಿದ್ದಾಗ ಹಳೆಯ ಕಾಲದ ಸುಮಾರು 5 ಕೆ.ಜಿ ಬಂಗಾರ ನಾಣ್ಯಗಳು ಪತ್ತೆಯಾಗಿವೆ. ನಮ್ಮದು ಹುಬ್ಬಳ್ಳಿ. ಇಲ್ಲಿ ಈ ನಾಣ್ಯಗಳನ್ನು ಮಾರಾಟ ಮಾಡುವುದು ಕಷ್ಟ. ಹಾಗಾಗಿ ನಿಮಗೆ ಅರ್ಧ ಬೆಲೆಗೆ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದಾನೆ.
ವಿಜಯ್ ಅಪರಿಚತ ವ್ಯಕ್ತಿಗೆ ನಿಮ್ಮ ಪರಿಚಯ ಇಲ್ಲ ಎಂದು ಹೇಳಿದ್ದರೂ, ಆರೋಪಿ ನಿಮ್ಮ ಪರಿಚಯ ನನಗಿದೆ. ನಿಮ್ಮ ಪೋನ್ ನಂಬರ್ ತೆಗೆದುಕೊಂಡಿದ್ದೇನೆ. ಬೇಕಿದ್ದರೆ ಡಿಸೆಂಬರ್ 5 ರಂದು ಡಿ.ಹಿರೇಹಾಳ್ ಬಳಿ ಬನ್ನಿ ನಿಮಗೆ ಸ್ಯಾಂಪಲ್‍ಗೆ ಎರಡು ಚಿನ್ನದ ನಾಣ್ಯಗಳನ್ನು ಕೊಡುತ್ತೇನೆ ಎಂದು ಕರೆಯಿಸಿಕೊಂಡಿದ್ದಾನೆ.
ಈ ವೇಳೆ ಎರಡು ಬಂಗಾರದ ನಾಣ್ಯಗಳನ್ನು ಕೊಟ್ಟು ಕಳಿಸಿದ್ದು, ವಿಜಯ್ ಆ ನಾಣ್ಯಗಳನ್ನು ಅಕ್ಕಸಾಲಿಗರ ಬಳಿ ಪರೀಕ್ಷೆ ಮಾಡಿಸಿದಾಗ ಅಸಲಿ ನಾಣ್ಯಗಳಾಗಿವೆ.
ಆನಂತರ ಆರೋಪಿ ಪದೇ ಪದೇ ಪೋನ್ ಮಾಡಿ, ಉಳಿದ 5 ಕೆ.ಜಿ. ನಾಣ್ಯಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತೇನೆ. 90 ಲಕ್ಷ ರೂ. ತೆಗೆದುಕೊಂಡು ಬನ್ನಿ ಎಂದು ಒತ್ತಾಯಿಸಿದ್ದಾನೆ.
ಅದರಂತೆ ಡಿಸೆಂಬರ್ 11 ರಂದು ಮಿನಿಗಾ ವಿಜಯ್ ಹಾಗೂ ಅವರ ಸ್ನೇಹಿತರೊಂದಿಗೆ ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಸಾಗರ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಟಿಕೇಟ್ ಕೇಳಿದ್ದೇನೆ | ಎಂ.ಸಿ.ರಘುಚಂದನ್
ಈ ವೇಳೆ ಆರೋಪಿ ಎಷ್ಟು ಹಣ ತಂದಿದ್ದೀರಿ ಎಂದಾಗ, ದೂರುದಾರರು ನಮ್ಮ ಬಳಿ 90 ಲಕ್ಷ ರೂ. ಇಲ್ಲ. 8 ಲಕ್ಷ ತಂದಿದ್ದೇವೆ ಎಂದಿದ್ದಾರೆ. ತಕ್ಷಣ ಆ ಹಣವನ್ನು ಪಡೆದುಕೊಂಡ ಆರೋಪಿಗಳು, ಬಂಗಾರದ ನಾಣ್ಯಗಳು ಪರಿಚಯಸ್ಥರ ಬಳಿಯಿವೆ. ಅವುಗಳನ್ನು ತರಲು ಪೋನ್ ಮಾಡುತ್ತೇವೆ, ನಿಮ್ಮ ಪೋನ್ ಕೊಡಿ ಎಂದು ತೆಗೆದುಕೊಂಡು ಕೆಲ ಹೊತ್ತು ಅಲ್ಲಿಂದ ಹೋಗಿದ್ದಾರೆ. ಆನಂತರ ಮತ್ತೆ ಬಂದು ಪೊಲೀಸರು ಬರುತ್ತಿದ್ದಾರೆ. ನೀವು ಇಲ್ಲಿಂದ ಹೊರಡಿ, ನಾನು ನಿಮ್ಮನ್ನು ಮತ್ತೆ ಭೇಟಿಯಾಗುತ್ತೇನೆಂದು ಹೇಳಿ ಹೋಗಿದ್ದಾರೆ. ಎಷ್ಟು ಹೊತ್ತು ಕಾದರೂ ಆಸಾಮಿಗಳು ವಾಪಾಸು ಬಂದಿಲ್ಲ. ಬಂಗಾರ, ಹಣ ಎರಡೂ ಸಿಕ್ಕಿಲ್ಲ.
ಈ ಬಗ್ಗೆ ಡಿಸೆಂಬರ್ 14 ರಂದು ರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೇಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಈ ಹಿಂದಿನ ಪ್ರಕಣಗಳ ಆಧಾರದಲ್ಲಿ ಆರೋಪಿ ಹನುಮಂತಪ್ಪನನ್ನು ಬಂಧಿಸಿದ್ದು, ಒಂದು ಮೊಬೈಲ್ ಹಾಗೂ 7.70 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಸದರಿ ಕಾರ್ಯಾಚರಣೆಯಲ್ಲಿ ಪಿಎಸ್‍ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ, ಪಿಎಸ್‍ಐ ಪರಶುರಾಮ್ ಎಸ್. ಲಮಾಣಿ ಹಾಗೂ ಸಿಬ್ಬಂಧಿಗಳು ಭಾಗಿಯಾಗಿದ್ದರು.
ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಶ್ಲಾಘಿಸಿದ್ದಾರೆ.
ಸಾರ್ವಜನಿಕರು ಇಂತಹ ಬಂಗಾರದ ಆಮಿಷದ ಪ್ರಕರಣಗಳಿಗೆ ಸಿಲುಕಿ ಮೋಸ ಹೋಗದಂತೆ ಜಾಗೃತರಾಗಿರಬೇಕು ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮನವಿ ಮಾಡಿದ್ದಾರೆ.