ಚಳ್ಳಕೆರೆ
ಮಳೆಗಾಗಿ ಬುಡಕಟ್ಟು ಆರಾಧ್ಯ ದೇವರಲ್ಲಿ ಪ್ರಾರ್ಥನೆ; ವಿಶೇಷ ಪೂಜೆ ಸಲ್ಲಿಸಿದ ಶಾಸಕ ಟಿ.ರಘುಮೂರ್ತಿ
ಚಿತ್ರದುರ್ಗ ನ್ಯೂಸ್.ಕಾಂ
ತಾಲೂಕಿನ ಬೆಳಘಟ್ಟ ಗ್ರಾಮದಲ್ಲಿ ಶುಕ್ರವಾರ ಎತ್ತಿನ ಜಾತ್ರೆಯ ಪ್ರಯುಕ್ತ ಗ್ರಾಮದ ಕೆರೆಯ ಬಳಿ ಬುಡಕಟ್ಟು ಆರಾಧ್ಯ ದೇವರಾದ ಸೂರ್ಯ ಎರಘಟ್ಟನಾಯಕ, ಗಾದ್ರಿಪಾಲನಾಯಕ, ಜೋಗ ಮುತ್ತಯ್ಯ, ಮಲ್ಲೆ ಚೌಡಮ್ಮ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಲಾಯಿತು.
ಶಾಸಕ ಟಿ.ರಘುಮೂರ್ತಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ‘ಮಳೆಯಿಲ್ಲದೆ ಜಿಲ್ಲೆಯ ಅನ್ನದಾತರು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಸುರಿದು ಭೂಮಿ ತಾಯಿ ಮಡಿಲು ತಂಪಾಗಿ, ಉತ್ತಮ ಬೆಳೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ’ ಎಂದರು.
ಇದನ್ನೂ ಓದಿ: ಜಿಲ್ಲೆಯಿಂದ ಹೊರಕ್ಕೆ ಮೇವು ಸಾಗಾಟಕ್ಕೆ ನಿರ್ಬಂಧ
‘ಚಿತ್ರದುರ್ಗ ಬುಡಕಟ್ಟು ಸಂಪ್ರದಾಯದ ತವರೂರು. ಮೊದಲಿನಿಂದಲೂ ಈ ಆಚರಣೆ ನಡೆಸಿಕೊಂಡು ಬಂದಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವು ಗ್ರಾಮದ ಕೆರೆಯ ಬಳಿ ಎಲ್ಲಾ ದೇವರುಗಳಿಗೆ ಗಂಗಾ ಪೂಜೆ ಬಳಿಕ ಆರಾಧ್ಯ ದೈವ ಎತ್ತುಗಳಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಣೆ ಮಾಡುತ್ತೇವೆ’ ಎಂದು ತಿಳಿಸಿದರು.
‘ದೀಪಾವಳಿ ಅಮಾವಾಸ್ಯೆ ಆದ ನಂತರ ದೊಡ್ಡಗೌರಿ ಹುಣ್ಣಿಮೆ ಸಮಯದಲ್ಲಿ ಹಬ್ಬ ಆಚರಿಸಲಾಗುತ್ತದೆ. ಎರಡು ದಿನ ನಡೆಯುವ ಜಾತ್ರೆಯಲ್ಲಿ ಸುತ್ತಮುತ್ತಲಿನ ಗ್ರಾಮದವರು ಬರುತ್ತಾರೆ. ನಾನು ಸಹ ಪ್ರತಿ ವರ್ಷ ಆಗಮಿಸಿ ಪೂಜೆ ಸಲ್ಲಿಸುತ್ತೇನೆ’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ಬೆಳಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಆರ್.ಮಂಜಶ್ರೀ ಪಾಲಯ್ಯ, ಉಪಾಧ್ಯಕ್ಷ ಡಿ.ಎ.ರಾಮಚಂದ್ರರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹನುಮಂತರೆಡ್ಡಿ, ಕಮಲಮ್ಮ ಓಬಯ್ಯ, ಕವಿತಾ, ಕೆ.ಎಚ್.ನಾಗೇಶ್, ಮುಖಂಡರಾದ ತಿಪ್ಪೇಸ್ವಾಮಿ, ಜಗದೀಶ್, ಎ.ಪಿ. ಸುರೇಶ್, ಬಕ್ಕೇಶ್ ರೆಡ್ಡಿ ಇದ್ದರು.