Connect with us

    ಗಂಗಾ ಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ

    dc sabe

    ಮುಖ್ಯ ಸುದ್ದಿ

    ಗಂಗಾ ಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ

    CHITRADURGA NEWS | 03 JULY 2024
    ಚಿತ್ರದುರ್ಗ: ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮವಹಿಸಬೇಕು ಎಂದು ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ ನೀಡಿದರು.

    ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜುಲೈ 8 ಮತ್ತು 9 ರಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರೊಂದಿಗೆ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳ ಗಂಗಾ ಕಲ್ಯಾಣ ಯೋಜನೆಯ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇರುವ ಅರ್ಜಿಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಶೀಘ್ರದಲ್ಲಿ ಕೊಳವೆಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.

    ಕ್ಲಿಕ್‌ ಮಾಡಿ ಓದಿ: ಎಕ್ಸಿಬಿಷನ್ ಆವರಣದಲ್ಲಿ ಯುವಕ ಸಾವು | ಡ್ಯಾನ್ಸ್ ಮಾಡಲು ಹೋಗಿ ಅವಘಡ

    ಜಲಜೀವನ್‌ ಮಿಷನ್ ಯೋಜನೆಯಡಿ ಎಲ್ಲ ಶಾಲೆ, ಅಂಗನವಾಡಿ ಹಾಗೂ ವಸತಿ ನಿಲಯಗಳಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಿದರು.

    ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಮೊದಲ ಆದ್ಯತೆಯಾಗಿದ್ದು, ದುರಸ್ಥಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣವೇ ಸರಿಪಡಿಸಿ, ಕಾರ್ಯಾರಂಭ ಮಾಡುವಂತೆ ಕ್ರಮವಹಿಸಬೇಕು. ಇದರ ಜೊತೆಗೆ ಕುಡಿಯುವ ನೀರಿನ ವಿತರಣೆ ವ್ಯವಸ್ಥೆಯಲ್ಲಿ ಸಮಸ್ಯೆಗಳಿದ್ದರೂ ಬಗೆಹರಿಸಿ, ನೀರು ಪೂರೈಕೆಗೆ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.

    ಪ್ರಸಕ್ತ ವರ್ಷದಲ್ಲಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟು ನೀರಿನ ಮಾದರಿಯ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ ಎಂಬ ವರದಿ ಸಲ್ಲಿಸಬೇಕು. ನಿಯಮಿತವಾಗಿ ನೀರಿನ ಪರೀಕ್ಷೆ ನಡೆಸಿ, ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ಕವಾಡಿಗರಹಟ್ಟಿಯಲ್ಲಿ ಸಂಭವಿಸಿದ ಕಲುಷಿತ ನೀರು ಸೇವನೆಯ ಪ್ರಕರಣದಂತಹ ಘಟನೆಗಳು ಮರುಕಳಿಸುವಂತಾಗಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಆಯುಷ್ಮಾನ್‌ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ನವರಿಗೆ ಸರ್ಕಾರದಿಂದ ವೈದ್ಯಕೀಯ ವೆಚ್ಚ ಭರಿಸುವ ಸೌಲಭ್ಯವಿದ್ದು, ಜಿಲ್ಲೆಯಲ್ಲಿ ಈ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಗೆ ಕ್ರಮವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣು ಪ್ರಸಾದ್‌ ಅವರಿಗೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ 18 ಲಕ್ಷ ಜನಸಂಖ್ಯೆ ಇದ್ದು, ಸಿಎಸ್‌ಸಿ ಹಾಗೂ ನಾಡಕಚೇರಿಗಳಲ್ಲಿಯೂ ಎಬಿಎಆರ್‌ಕೆ ಕಾರ್ಡ್ ನೋಂದಣಿಗೆ ಕ್ರಮವಹಿಸುವಂತೆ ತಾಕೀತು ಮಾಡಿದರು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಎಬಿಎಆರ್‌ಕೆ ಯೋಜನೆಯಡಿ ಜಿಲ್ಲೆಯಲ್ಲಿ 14.97 ಲಕ್ಷ ಗುರಿ ನಿಗಧಿಪಡಿಸಲಾಗಿದೆ. ಇದುವರೆಗೂ 5.94 ಲಕ್ಷ ನೋಂದಣಿಯಾಗಿದ್ದು, ಶೇ.40 ರಷ್ಟು ಪ್ರಗತಿ ಸಾಧಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಗೆ ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

    ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

    ಕ್ಲಿಕ್‌ ಮಾಡಿ ಓದಿ: ವಿದ್ಯಾರ್ಥಿ ನಿಲಯ ಪ್ರವೇಶಾತಿ ವಿಳಂಬ | ಎಬಿವಿಪಿ ಜಿಲ್ಲಾ ಘಟಕ ಪ್ರತಿಭಟನೆ

    ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಮೊಬೈಲ್‌ ಗೀಳಿನಿಂದ ಹೊರತಂದು, ಶಿಕ್ಷಕರು ಉತ್ತಮ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ಬೋಧನೆ ಮಾಡಬೇಕು. ಶಿಕ್ಷಕರಿಗೆ ವಿಷಯಾವಾರು ಪುನಶ್ಚೇತನ ಕಾರ್ಯಾಗಾರಗಳನ್ನು ಏರ್ಪಡಿಸಿ, ಎಸ್‍ಎಸ್‍ಎಲ್‍ಸಿ ಹಾಗೂ ಪಿಯು ಫಲಿತಾಂಶ ಹೆಚ್ಚಳ ಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಶೇ.100ರಷ್ಟು ಅನುಷ್ಠಾನ ಮಾಡಬೇಕು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುವ ಇ-ಕೆವೈಸಿ ಸೇರಿದಂತೆ ಇನ್ನಿತರೆ ಕೆಲವು ತಾಂತ್ರಿಕ ದೋಷಗಳನ್ನು ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

    ರಾಜ್ಯ ಸರ್ಕಾರದ ಶಕ್ತಿ ಯೋಜನೆ, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭವನ್ನು ದೊರಕಿಸಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಜೆ.ಸೋಮಶೇಖರ್‌, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್‌ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top