ಮುಖ್ಯ ಸುದ್ದಿ
ಪೂರ್ಣಿಮಾ-ಶ್ರೀನಿವಾಸ್‍ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಹೂ ಮಳೆಯ ಸ್ವಾಗತ
ಚಿತ್ರದುರ್ಗ ನ್ಯೂಸ್.ಕಾಂ: ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಮಾಜಿ ಶಾಸಕಿ ಪೂರ್ಣಿಮಾ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಹೂಮಳೆ ಸುರಿಸಿ ಸ್ವಾಗತಿಸಿದರು. ಕಾಂಗ್ರೆಸ್ ಕಚೇರಿ ಮುಂದೆ ಹೂವಿನ ರಾಶಿಯೇ ಬಿದ್ದಿತ್ತು.
ಈ ವೇಳೆ ಮಾತನಾಡಿದ ಮಾಜಿ ಶಾಸಕಿ ಪೂರ್ಣಿಮಾ, ನನ್ನ ತಂದೆಯವರನ್ನು ಹಲವು ಹಿರಿಯ ಕಾಂಗ್ರೆಸ್ ನಾಯಕರು ಈಗಲೂ ಸ್ಮರಿಸುತ್ತಾರೆ. ಅದೇ ಹಿನ್ನೆಲೆಯಲ್ಲಿ ಮತ್ತೆ ಕಾಂಗ್ರೆಸ್ ಸೇರಿದ್ದೇವೆ. ಆದರೆ, ಇಲ್ಲಿ ಹೇಗೆ ಸ್ವೀಕರಿಸುತ್ತಾರೋ ಎನ್ನುವ ಅಳುಕಿತ್ತು. ಆದರೆ, ಅತ್ಯಂತ ಆತ್ಮೀಯತೆ ಹಾಗೂ ಪ್ರೀತಿಯನ್ನು ಇಲ್ಲಿನ ಕಾರ್ಯಕರ್ತರು ತೋರಿಸುತ್ತಿದ್ದಾರೆ. ಪಕ್ಷವನ್ನು ಗಟ್ಟಿಗೊಳಿಸುವ ಸಲುವಾಗಿ ನಿರಂತರವಾಗಿ ಓಡಾಟ ನಡೆಸುತ್ತೇವೆ ಎಂದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾ ನೂತನ ನ್ಯಾಯಾಧೀಶರಾಗಿ ಕೆ.ಬಿ.ಗೀತಾ ಜವಾಬ್ದಾರಿ ಸ್ವೀಕಾರ
ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ನಾವು ಇರುವ ಕಡೆ ನಿμÉ್ಠ ಮತ್ತು ಪ್ರಾಮಾಣಿಕವಾಗಿರುತ್ತೇವೆ ಎಂದರು.
ಬಿಜೆಪಿ ಗೆಲ್ಲಲು ಸಾಧ್ಯವಾಗದ ಹಿರಿಯೂರು ಕ್ಷೇತ್ರದಲ್ಲಿ ಪೂರ್ಣಿಮಾ ಶಾಸಕಿಯಾಗಿದ್ದರು. ಈಗ ಕಾಂಗ್ರೆಸ್ ಗೆಲ್ಲಲು ಆಗದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ನಾನು ಅಭ್ಯರ್ಥಿಯಾಗಿದ್ದೇನೆ. ಒಬ್ಬನಿಂದ ಎಲ್ಲವೂ ಸಾಧ್ಯವಾಗುವುದಿಲ್ಲ. ಎಲ್ಲರ ಸಹಕಾರ ಬೇಕು ಎಂದರು.
ಕಾಂಗ್ರೆಸ್ ಪಕ್ಷ ಓಪಿಎಸ್ ಜಾರಿ ಮಾಡುವ ಭರವಸೆ ನೀಡಿದೆ. ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಒಪಿಎಸ್ ಆಧ್ಯತೆಯಾಗಿರುತ್ತದೆ. ಕಳೆದ 15 ವರ್ಷಗಳಿಂದ ಇಲ್ಲಿ ಒಬ್ಬರೇ ಕ್ಷೇತ್ರ ಪ್ರತಿನಿಧಿಸುತ್ತಿದ್ದರೂ ಶಿಕ್ಷಕರ ಸಮಸ್ಯೆಗಳು ಬಗೆಹರಿದಿಲ್ಲ. ನಮ್ಮ ಅಭ್ಯರ್ಥಿ ಪದವೀಧರರ ಕ್ಷೇತ್ರದಲ್ಲಿ ಸೋತಿದ್ದಾರೆ. ಈಗ ಗೆಲ್ಲಿಸಿಕೊಡಿ ಎಂದು ಕಾರ್ಯಕರ್ತರು ಶಿಕ್ಷಕ ಮತದಾರರ ಬಳಿ ಹೋಗಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಕಚೇರಿ ದೇವಸ್ಥಾನ, ಮಸೀದಿಯಂತೆ ಪವಿತ್ರ ಹಾಗೂ ಆಧ್ಯತೆಯಾಗಿರುತ್ತದೆ. ಅದರಂತೆ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿರುವ ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಕಚೇರಿಗೆ ಬಂದು ಕಾರ್ಯಕರ್ತರನ್ನು ಭೇಟಿಯಾಗಿರುವುದು ಸಂತಸ ತಂದಿದೆ ಎಂದರು.
ಇದನ್ನೂ ಓದಿ: ಬ್ಯಾಟರಿ ಗ್ಯಾಂಗ್‍ಗೆ ಖಾಕಿ ಹೆಡೆಮುರಿ, ಸುಳಿವು ನೀಡಿದ ಸಿಸಿ ಕ್ಯಾಮರಾ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಪ್ಪ, ಕಾಂಗ್ರೆಸ್ ಎಸ್ಸಿ ಸೆಲ್ ರಾಜ್ಯ ಉಪಾಧ್ಯಕ್ಷ ರಘು, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಕಾಂಗ್ರೆಸ್ ಪದಾಧಿಕಾರಿಗಳಾದ ಮೈಲಾರಪ್ಪ, ಡಿ.ಟಿ.ವೆಂಕಟೇಶ್, ಎನ್.ಡಿ.ಕುಮಾರ್, ಪ್ರಕಾಶ್ ರಾಮಾನಾಯ್ಕ್, ಮಾಲತೇಶ್ ಅರಸ್, ಲಕ್ಷ್ಮೀಕಾಂತ್, ಅಂಜಿನಪ್ಪ, ಪಾಪಣ್ಣ, ನರಸಿಂಹರಾಜು ಮತ್ತಿತರರಿದ್ದರು.
ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂರು ದಶಕಗಳಿಂದ ಗೆದ್ದಿರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಪ್ರಾಮಾಣಿಕ ಪರಿಶ್ರಮದಿಂದ ಈ ಬಾರಿ ಗೆಲ್ಲಲು ಸಾಧ್ಯವಾಗಿದೆ. ಅದೇ ರೀತಿ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲೂ ಶ್ರೀನಿವಾಸ್ ಅವರನ್ನು ಗೆಲ್ಲಿಸುತ್ತೇವೆ.
| ಕೆ.ಸಿ.ವೀರೇಂದ್ರ(ಪಪ್ಪಿ), ಚಿತ್ರದುರ್ಗ ಶಾಸಕರು.