ತಾಲೂಕು
BREAKING NEWS ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುವುದು ಪಕ್ಕಾ | ಸಿಎಂ, ಡಿಸಿಎಂ ಜೊತೆ ಚರ್ಚಿಸಿ ಸೇರ್ಪಡೆ ದಿನಾಂಕ ನಿಗಧಿ
ಚಿತ್ರದುರ್ಗ ನ್ಯೂಸ್.ಕಾಂ: ಹಿರಿಯೂರು ಮಾಜಿ ಶಾಸಕಿ ಬಿಜೆಪಿ ನಾಯಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುವುರು ಪಕ್ಕಾ ಆಗಿದ್ದು, ಇದಕ್ಕೆ ದಿನಾಂಕ ಕೂಡಾ ಫಿಕ್ಸ್ ಆಗಿದೆ.
ಅ.8 ಭಾನುವಾರ ಖುದ್ದು ಕೆ.ಪೂರ್ಣಿಮಾ ಹಾಗೂ ಅವರ ಪತಿ ಶ್ರೀನಿವಾಸ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಇದೇ ತಿಂಗಳು ಅಂದರೆ ಅಕ್ಟೋಬರ್ 20ಕ್ಕೆ ಕಾಂಗ್ರೆಸ್ ಸೇರಲು ದಿನಾಂಕ ನಿಗಧಿಯಾಗಿದೆ ಎಂದು ಸ್ವತಃ ಮುಖ್ಯಮಂತ್ರಿಗಳ ಕಾರ್ಯಕ್ರಮಗಳ ಮಾಹಿತಿ ವಿನಿಮಯಕ್ಕೆ ಮಾಡಿಕೊಂಡಿರುವ ವಾಟ್ಸಪ್ ಗ್ರೂಪ್‍ನಲ್ಲಿ ಬಹಿರಂಗಪಡಿಸಲಾಗಿದೆ.
ಪೂರ್ಣಿಮಾ ಹಾಗೂ ಶ್ರೀನಿವಾಸ್ ಅವರ ಸಿಎಂ, ಡಿಸಿಎಂ ಜೊತೆ ಚರ್ಚೆ ನಡೆಸುವಾಗ ಶಾಸಕರಾದ ಭೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಕೂಡಾ ಉಪಸ್ಥಿತರಿದ್ದರು.
ಒಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವಾಗಲೇ ಕಾಂಗೆಸ್ ಬಿಜೆಪಿಯ ಮಾಜಿ ಶಾಸಕಿ ಕೆ.ಪೂರ್ಣಿಮಾ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನೆಗೆ ಡಿ.ಕೆ.ಶಿವಕುಮಾರ್ ಭೇಟಿ | ಪೂರ್ಣಿಮಾಗೆ ಕಾಂಗ್ರೆಸ್ ಆಹ್ವಾನ ನೀಡಿತೆ..?
ಪೂರ್ಣಿಮಾ ತಂದೆ ಕೃಷ್ಣಪ್ಪ ಕೂಡಾ ಕಾಂಗ್ರೆಸ್‍ನಲ್ಲಿದ್ದರು:
ಇನ್ನೂ ಕಾಂಗ್ರೆಸ್ ಪಕ್ಷ ಪೂರ್ಣಿಮಾ ಅವರಿಗೆ ಹೊಸದಲ್ಲ. ಈ ಹಿಂದೆ ಸಚಿವರಾಗಿದ್ದ ಕೆ.ಕೃಷ್ಣಪ್ಪ ಕೂಡಾ ಮೂಲ ಕಾಂಗ್ರೆಸ್ಸಿಗರು. ಈ ಹಿನ್ನೆಲೆಯಲ್ಲಿ ತಂದೆಯ ಪಕ್ಷಕ್ಕೆ ಮಗಳು ಮರಳಿದಂತಾಗುತ್ತಿದೆ.
ಪೂರ್ಣಿಮಾ ಅವರು ಕಾಂಗ್ರೆಸ್ ಸೇರುವ ನಿರ್ಧಾರ ಕುರಿತು ಇನ್ನೆರಡು ದಿನಗಳಲ್ಲಿ ಹಿರಿಯೂರಿನಲ್ಲಿ ಬೆಂಬಲಿಗರು, ಅಭಿಮಾನಿಗಳ ಸಭೆ ಕರೆಯಲಿದ್ದಾರೆ ಎನ್ನಲಾಗಿದೆ.
2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಹಿರಿಯೂರು ಶಾಸಕರಾಗಿದ್ದ ಪೂರ್ಣಿಮಾ, 2023 ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ಆದರೆ, 2023ರ ವಿಧಾನಸಭೆ ಚುನಾವಣೆಗೆ ಪೂರ್ಣಿಮಾ ಕಾಂಗ್ರೆಸ್ ಸೇರಿ ಅಲ್ಲಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿಗಳು ದಟ್ಟವಾಗಿದ್ದವು. ಆದರೆ, ಅಂತಿಮ ಹಂತದಲ್ಲಿ ಇದು ಆಗಿರಲಿಲ್ಲ.
ಇದನ್ನೂ ಓದಿ: ಲೇಸರ್ ಲೈಟ್‍ನಲ್ಲಿ ಡಿಜೆ ಸೌಂಡ್: ಸಾಗುತ್ತಿದೆ ಶೋಭಾಯಾತ್ರೆ
ಕೃಷ್ಣ ಜನ್ಮಾಷ್ಠಮಿಗೆ ಪೂರ್ಣಿಮಾ ಮನೆಗೆ ತೆರಳಿದ್ದ ಡಿ.ಕೆ.ಶಿವಕುಮಾರ್:
ಇನ್ನೂ ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುವ ವದಂತಿಗಳು ಕಳೆದ ತಿಂಗಳು ಕೂಡಾ ದಟ್ಟವಾಗಿದ್ದವು. ಆದರೆ, ಅವರು ತಳ್ಳಿ ಹಾಕಿದ್ದರು.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ಪೂರ್ಣಿಮಾ ಶ್ರೀನಿವಾಸ್ ಮನೆಗೆ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮಕ್ಕಾಗಿ ತೆರಳಿ, ಭೋಜನ ಸವಿದಿದ್ದರು.