Connect with us

    ಪಿಡಿಒಗಳಿಗೆ ಕುಡಿಯುವ ನೀರು ಪರೀಕ್ಷೆ ಹೊಣೆ | ಜಿಲ್ಲಾ ಪಂಚಾಯಿತಿಯಲ್ಲಿ ತರಬೇತಿ

    pdo traning

    ಮುಖ್ಯ ಸುದ್ದಿ

    ಪಿಡಿಒಗಳಿಗೆ ಕುಡಿಯುವ ನೀರು ಪರೀಕ್ಷೆ ಹೊಣೆ | ಜಿಲ್ಲಾ ಪಂಚಾಯಿತಿಯಲ್ಲಿ ತರಬೇತಿ

    CHITRADURGA NEWS | 06 JULY 2024
    ಚಿತ್ರದುರ್ಗ: ಕುಡಿಯುವ ನೀರಿನ ಪರೀಕ್ಷೆ ಹೊಣೆಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಫೀಲ್ಡ್‌ ಟೆಸ್ಟ್‌ ಕಿಟ್‌ ಮತ್ತು ಎಚ್‌ 2 ಎಸ್‌ ವೈಲ್ಸ್‌ ಉಪಯೋಗಿಸಿ ನೀರು ಪರೀಕ್ಷೆ ನಡೆಸುವ ತರಬೇತಿ ನೀಡಲಾಗಿದೆ.

    ತರಬೇತಿ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಜೆ.ಸೋಮಶೇಖರ್‌, ‘ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ, ನೀರುಗಂಟಿಗಳಿಗೆ ನೀರಿನ ಪರೀಕ್ಷೆ ಮಾಹಿತಿ ನೀಡಬೇಕು. ಯಾವುದೇ ಗ್ರಾಮಗಳಲ್ಲಿ ಕಲುಷಿತ ನೀರಿನ ಪ್ರಕರಣಗಳು ಉಂಟಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

    ‘ಜಿಲ್ಲೆಯ 6 ತಾಲ್ಲೂಕುಗಳ 189 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀರು ಪರೀಕ್ಷೆ ಕಿಟ್‌ ಮತ್ತು ವೈಲ್ಸ್‌ ಉಪಯೋಗಿಸಿ ನೀರಿನ ಪರೀಕ್ಷೆ ಕೈಗೊಳ್ಳಲು ಪರಿಣಾಮಕಾರಿಯಾಗಿ ತರಬೇತಿ ನೀಡಲಾಗಿದೆ’ ಎಂದರು.

    ಯೋಜನಾ ನಿರ್ದೇಶಕ ಡಾ. ಎಸ್.ರಂಗಸ್ವಾಮಿ ರವರು ಮಾತನಾಡಿ, ‘ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರು ಪರೀಕ್ಷೆ ಕಿಟ್‍ಗಳ ಮೂಲಕ ಕುಡಿಯುವ ನೀರಿನ ಜಲಮೂಲಗಳ ನೀರು ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ಮಾಡಬೇಕು. ನೀರು ಕುಡಿಯಲು ಯೋಗ್ಯವಾಗಿ ಇಲ್ಲದಿದ್ದರೆ ಅಂತಹ ನೀರನ್ನು ತಾಲ್ಲೂಕು ಮಟ್ಟದ ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ತಂದು ನೀರು ಪರೀಕ್ಷೆ ಮಾಡಿಸಿ, ನಂತರ ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

    ಕ್ಲಿಕ್‌ ಮಾಡಿ ಓದಿ: ಸಂಶೋಧನೆ, ವಿಮರ್ಶೆ ಪೂರ್ವಗ್ರಹರಹಿತವಾಗಿರಲಿ | ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ

    ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಮಾತನಾಡಿ, ‘ಫೀಲ್ಡ್‌ ಟೆಸ್ಟ್‌ ಕಿಟ್‌ ಮೂಲಕ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಜಲ ಮೂಲಗಳಿಂದ ನೀರನ್ನು ಸಂಗ್ರಹಿಸಿ ಪ್ರತಿ ತಿಂಗಳು ನೀರಿನ ಮಾದರಿಯನ್ನು ಪರೀಕ್ಷಿಸಿ ವರದಿಯನ್ನು ನಿಗದಿತ ಪೋರ್ಟಲ್ ನಲ್ಲಿ ನಮೂಧಿಕರಿಸಬೇಕು. ಪ್ರತಿ ಗ್ರಾಮದಲ್ಲಿ ನೀರುಗಂಟಿ ಮೂಲಕ ಪೈಪ್‌ಲೈನ್‌ ಹೊಡೆದು ಹೋಗಿದ್ದರೆ ಕೂಡಲೇ ಗುರುತಿಸಿ ಸರಿಪಡಿಸಿ ನೀರು ಸರಬರಾಜು ಮಾಡಬೇಕು. ಗ್ರಾಮಗಳಲ್ಲಿ ಓವರ್‌ ಹೆಡ್‌ಟ್ಯಾಂಕ್‌, ಆರ್‌.ಒ.ಪ್ಲಾಂಟ್‌, ಮಿನಿ ಟ್ಯಾಂಕ್‌ ಮತ್ತು ಜಲ ಮೂಲಗಳನ್ನು ಸ್ವಚ್ಛಗೊಳಿಸಿ ಕಲುಷಿತವಾಗದಂತೆ ಜಾಗೃತ ವಹಿಸಬೇಕು’ ಎಂದರು.

    ‘ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಪುನರ್ ರಚನೆ ಮಾಡಿ ನಮೂನೆಗಳನ್ನು ಕಡ್ಡಾಯವಾಗಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಸಲ್ಲಿಸಬೇಕು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರ ಸಹಕಾರದಿಂದ ಗ್ರಾಮಗಳಲ್ಲಿ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ 3 ತಿಂಗಳಿಗೊಮ್ಮೆ ಚರ್ಚಿಸಿ ಸಭಾ ನಡವಳಿಯನ್ನು ರಿಜಿಸ್ಟರ್‌ ಪುಸ್ತಕದಲ್ಲಿ ನಮೂದಿಸಬೇಕು’ ಎಂದು ತಿಳಿಸಿದರು.

    ಕಾರ್ಯಪಾಲಕ ಎಂಜಿನಿಯರ್‌ ಬಸನಗೌಡ ಪಾಟೀಲ್‌ ಮಾತನಾಡಿ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳ ಜಲ ಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಇಂಜಿನಿಯರ್‌ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಮನ್ವಯದೊಂದಿಗೆ ಗ್ರಾಮಸ್ಥರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸಬೇಕು. ನೀರನ್ನು ಮಿತವಾಗಿ ಬಳಸಲು ಸಾರ್ವಜನಿಕರಿಗೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರ ಮೂಲಕ ಮಾಹಿತಿಯನ್ನು ನೀಡಬೇಕೆಂದು ಸೂಚಿಸಿದರು.

    ಕ್ಲಿಕ್‌ ಮಾಡಿ ಓದಿ: ನನಗೆ ಅಧಿಕಾರ ದೊಡ್ಡದಲ್ಲ | ಶಾಸಕ ಡಾ.ಎಂ.ಚಂದ್ರಪ್ಪ

    ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಕ್ರಮವಹಿಸಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಕ್ಷೇತ್ರ ಪರೀಕ್ಷಾ ಕಿಟ್‌ಗಳನ್ನು ಬಳಸಿಕೊಳ್ಳಲು ತಿಳಿಸಿದರು.

    ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ನೀರು ಪರೀಕ್ಷೆ ಪ್ರಯೋಗಾಲಯದ ಸಿಬ್ಬಂದಿ ನೀರು ಪರೀಕ್ಷೆ ಮಾಡಿಸಿ ಮಾಹಿತಿ ನೀಡಿದರು. ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್‌ ಎಸ್‌.ನಾಡರ್‌, ಜಿಲ್ಲಾ ಎಂಐಎಸ್‌ ಸಮಾಲೋಚಕ ಸ್ನೇಹನ್‌, ಜಿಲ್ಲಾ ಸಮಾಲೋಚಕ ಬಿ.ಸಿ.ನಾಗರಾಜು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top