ಮುಖ್ಯ ಸುದ್ದಿ
ಹಿರಿಯೂರಿನಲ್ಲಿ ಸಾವಯವ ಸಿರಿಧಾನ್ಯ ಮಳಿಗೆ | ರೈತರಿಗೆ ವಿಶೇಷ ಪ್ರೋತ್ಸಾಹ
CHITRADURGA NEWS | 23 JUNE 2024
ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನಿಂದ ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿ ಸಾವಯವ ಸಿರಿಧಾನ್ಯ ಮಳಿಗೆ ಪ್ರಾರಂಭಿಸಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನೊಂದಿಗೆ ನಗರದ ಹುಳಿಯಾರು ರಸ್ತೆಯಲ್ಲಿ ಕಾರ್ಯಾರಂಭ ಮಾಡಿರುವ ವಾಣಿವಿಲಾಸ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆಯು ಬೆಳೆಗಾರರು ಹಾಗೂ ಗ್ರಾಹಕರ ನಡುವಿನ ಸೇತುವೆಯಾಗಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸಿರಿಧಾನ್ಯ ಮಳಿಗೆ ಆರಂಭಿಸಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಎಚ್.ಪಿ. ಗಣೇಶ್ ಹೇಳಿದರು.
‘ಕೃಷಿ ಸಂಬಂಧಿತ ಉಪಕರಣಗಳನ್ನು ರೈತರಿಗೆ ವಿತರಿಸಲು ₹25 ಲಕ್ಷ ಮೊತ್ತ ಬಂದಿದೆ. ಎಪಿಎಂಸಿ ಆವರಣದಲ್ಲಿ ಎರಡು ನಿವೇಶನ ಖರೀದಿಸಿದ್ದು, ಒಂದನ್ನು ಅಡಿಕೆ ಗೋದಾಮನ್ನಾಗಿ ಮಾಡಿ ಅಡಿಕೆ ಸುಲಿಯುವ ಯಂತ್ರ ಅಳವಡಿಸಿದ್ದೇವೆ. ಅಡಿಕೆ ಸುಲಿಯಲು ಪ್ರತಿ ಗಂಟೆಗೆ ₹1,000 ದರವಿದ್ದರೆ ನಾವು ₹500 ಪಡೆಯುತ್ತೇವೆ’ ಎಂದರು.
‘ಇನ್ನೊಂದು ನಿವೇಶನದಲ್ಲಿ 200 ಟನ್ ಸಾಮರ್ಥ್ಯದ ಶೀತಲಘಟಕ ಆರಂಭಿಸಲು ಸಿದ್ಧತೆ ನಡೆದಿದೆ. ರೈತರು ನಮ್ಮ ಸಂಸ್ಥೆ ಮೂಲಕ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಿದಲ್ಲಿ ಉತ್ತಮ ದರ ಕೊಡಿಸುತ್ತೇವೆ. ಈಗಾಗಲೇ ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಖರೀದಿಸಿದ್ದೇವೆ. ಕೋವಿಡ್ ಸಮಯದಲ್ಲಿ ರೈತರಿಂದ ನೇರವಾಗಿ ತರಕಾರಿ ಖರೀದಿಸಿದ್ದೆವು’ ಎಂದು ಮಾಹಿತಿ ನೀಡಿದರು.
ಕ್ಲಿಕ್ ಮಾಡಿ ಓದಿ: ಸಂಸದರಿಗೆ ಜಿಲ್ಲೆಯ ಅಭಿವೃದ್ಧಿ ಚಿಂತೆ ಬೇಡ | ಶಾಸಕ ಬಿ.ಜಿ.ಗೋವಿಂದಪ್ಪ
‘ಮೈರಾಡ ಸಂಸ್ಥೆಯ ಸಹಯೋಗದೊಂದಿಗೆ ರೈತ ಉತ್ಪಾದಕಾ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ. 2015ರಲ್ಲಿ ಕೇಂದ್ರ ಸರ್ಕಾರ ರೈತರನ್ನು ಉತ್ಪಾದಕರನ್ನಾಗಿಸಲು ಯೋಜನೆಯೊಂದನ್ನು ಆರಂಭಿಸಿದ್ದರ ಫಲವಿದು. ಮೈರಾಡ ಸಂಸ್ಥೆಯ ಮೂಲಕ ಮೊದಲ 3 ವರ್ಷಗಳ ನಿರ್ವಹಣೆಗೆ ಕೇಂದ್ರದಿಂದ ₹37 ಲಕ್ಷ ಅನುದಾನ ಬಂದಿದೆ. ತಾಲ್ಲೂಕಿನ 27 ಹಳ್ಳಿಗಳಲ್ಲಿ ಸಂಸ್ಥೆಗೆ 1,000 ಷೇರುದಾರರನ್ನು ಆಯ್ಕೆ ಮಾಡಿಕೊಂಡು ₹10 ಲಕ್ಷ ಷೇರು ಮೊತ್ತ ಸಂಗ್ರಹಿಸಲಾಗಿದೆ. ವ್ಯವಹಾರಕ್ಕೆಂದು ಕೇಂದ್ರದಿಂದ ₹10 ಲಕ್ಷ ಹಣ ಬಂದಿದೆ. ಅದರಲ್ಲಿ ವೇತನ, ಬಾಡಿಗೆ, ಧಾನ್ಯ ಖರೀದಿ ಆರಂಭಿಸಿದ್ದೇವೆ’ ಎಂದು ವಿವರಿಸಿದರು.
ಕ್ಲಿಕ್ ಮಾಡಿ ಓದಿ: ವಿದ್ಯಾನಗರದ ಬೋಟ್‍ಹೌಸ್‍ನಲ್ಲಿ ಯೋಗ ದಿನಾಚರಣೆ
ಸಂಸ್ಥೆ ಅಧ್ಯಕ್ಷ ಜಿ. ಕರಿಯಣ್ಣ, ನಿರ್ದೇಶಕರಾದ ವಿ.ಕಲ್ಪನಾ, ಜಿ.ವಿ.ಸುರೇಶ್, ಎನ್.ಲಕ್ಷ್ಮೀಕಾಂತ್, ಮೈರಾಡ ಸಂಸ್ಥೆ ಕಾರ್ಯಕ್ರಮಾಧಿಕಾರಿ ಸಿ.ಎಸ್.ಗೌಡರ್, ಸಿಇಒ ಆರ್.ಚಿದಾನಂದ್ , ಸಂಪನ್ಮೂಲ ವ್ಯಕ್ತಿ ರವಿಕುಮಾರ್, ಸದಸ್ಯರಾದ ವಿ.ಬಾಲಸುಂದರ್, ಕೆ.ಅಮೃತರಾಜ್ ಇದ್ದರು.