ಮುಖ್ಯ ಸುದ್ದಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ನಡೆಸಿದ್ದ ಭಾರತ್ ಜೋಡೋ ಯಾತ್ರೆಗೆ ಜನ ಕಳಿಸಿದ್ದ ಬಿಜೆಪಿ ಶಾಸಕ..!
ಚಿತ್ರದುರ್ಗ ನ್ಯೂಸ್.ಕಾಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಪಾದಯಾತ್ರೆ ಯಶಸ್ಸಿಗೆ ಇಡೀ ಕಾಂಗ್ರೆಸ್ ಪಾಳೆಯ ದೇಶಾದ್ಯಂತ ಟೊಂಕ ಕಟ್ಟಿ ನಿಂತಿತ್ತು. ಪರಿಣಾಮವಾಗಿ ಇಡೀ ಯಾತ್ರೆ ಯಶಸ್ವಿಯಾಗಿ ಸಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ, ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ ಪೂರ್ಣಗೊಂಡ ಸಂಭ್ರಮಾಚರಣೆ ಸಂದರ್ಭದಲ್ಲಿ ಬಿಜೆಪಿಯಲ್ಲಿದ್ದ ಶಾಸಕರೂ ಭಾರತ್ ಜೋಡೋ ಯಾತ್ರೆಗೆ ಬೆಂಬಲ ನೀಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಹೌದು, ಈ ಹಿಂದೆ ಬಿಜೆಪಿಯಿಂದ ಸ್ಪರ್ಧೆ ಮಾಡಿ ಕೂಡ್ಲಿಗಿ ಶಾಸಕರಾಗಿದ್ದ ಸದ್ಯ ಕಾಂಗ್ರೆಸ್‍ನಿಂದ ಮೊಳಕಾಲ್ಮೂರು ಶಾಸಕರಾಗಿ ಆಯ್ಕೆಯಾಗಿರುವ ಎನ್.ವೈ.ಗೋಪಾಲಕೃಷ್ಣ ಈ ವಿಷಯ ಬಹಿರಂಗಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ನಡೆಯುವಾಗ ನಾನು ಕಾಂಗ್ರೆಸ್‍ನಲ್ಲಿರಲಿಲ್ಲ. ಬಿಜೆಪಿಯಲ್ಲಿದ್ದೆ. ಹಾಗಂತ ನಾನು ಕೂಡ್ಲಿಗೆಯಲ್ಲಿರಲಿಲ್ಲ. ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ಕುಳಿತುಕೊಂಡು ಬಂದವರನ್ನೆಲ್ಲಾ ಭಾರತ್ ಜೋಡೋ ಯಾತ್ರೆಗೆ ಕಳಿಸುತ್ತಿದ್ದೆ. ಈ ವಿಚಾರವನ್ನು ಅಲ್ಲಿನ ಸ್ಥಳೀಯ ಕಾಂಗ್ರೆಸ್ ಮುಖಂಡರು ನೋಡಿ ಡಿ.ಸುಧಾಕರ್ ಗಮನಕ್ಕೂ ತಂದಿದ್ದರು ಎಂದು ಹೇಳಿದರು.
ಇದನ್ನೂ ಓದಿ: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನೆಗೆ ಡಿ.ಕೆ.ಶಿವಕುಮಾರ್ ಭೇಟಿ | ಪೂರ್ಣಿಮಾಗೆ ಕಾಂಗ್ರೆಸ್ ಆಹ್ವಾನ ನೀಡಿತೇ..?
ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸಿದಾಗ ನಮ್ಮ ಅಣ್ಣ ಮಾಜಿ ಸಂಸದ ಎನ್.ವೈ.ಹನುಮಂತಪ್ಪ ಅವರಿಗೆ ಬಿಜೆಪಿಗೆ ಮತ ಹಾಕಲು ಹೇಳಿದಾಗ ಇಲ್ಲಪ್ಪ ಆಗಲ್ಲ. ನಾನು ನೆಹರು-ಇಂದಿರಾಗಾಂಧಿ ಅವರ ಅನುಯಾಯಿ. ಬಡವರ ಜೊತೆಗೆ ಇರುತ್ತೇನೆ. ಶ್ರೀಮಂತರ ಪಕ್ಷಕ್ಕೆ ಮತ ಹಾಕಲ್ಲ ಅಂದಿದ್ದರು. ನಾನು ಬಿಜೆಪಿಗೆ ಹೋಗಿದ್ದಕ್ಕೂ ಬೈದು ತಪ್ಪು ಮಾಡಿಬಿಟ್ಟೆ ನೀನು ಎಂದಿದ್ದರು. ಆಗ ನಾನು ಬಿಜೆಪಿ ಸೇರಿದ್ದರು ದೇಹ ಅಲ್ಲಿತ್ತು. ಹೃದಯ ಮಾತ್ರ ಇಲ್ಲೇ ಇತ್ತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸುವಾಗ ಇದು ಸಾಧ್ಯವೇ ಎಂಬ ಅನುಮಾನ ಮೂಡಿತ್ತು. ಆದರೆ, ಭಗವಂತನೇ ಮುಂದೆ ನಿಂತು ಇಷ್ಟೂ ಸುಧೀರ್ಘ ಪಾದಯಾತ್ರೆ ನಡೆಸಿದ್ದಾನೆ. ಪಾದಯಾತ್ರೆಯ ಮೂಲಕ ದೇಶದಲ್ಲಿ ಒಡೆದ ಮನಸ್ಸುಗಳನ್ನು ಒಂದಾಗಿಸುವ ಪ್ರಯತ್ನ ನಡೆಯಿತು. ಸಂವಿಧಾನಕ್ಕೆ ಶಕ್ತಿ ತುಂಬುವ ಕೆಲಸ ನಡೆಯಿತು ಎಂದರು.
ಭಾರತ್ ಜೋಡೋ ಯಾತ್ರೆಯಿಂಧ 134 ಜನ ಕಾಂಗ್ರೆಸ್ ಶಾಸಕರು ಗೆಲ್ಲಲು ಅನುಕೂಲ ಆಗಿದೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ನಾನೂ ಕೂಡಾ ಯಾತ್ರೆಯ ಪ್ರಭಾವದಿಂದ ಗೆದ್ದಿದ್ದೇನೆ. ಪಾದಯಾತ್ರೆಯಿಂದ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಂದಿದ್ದೇವೆ ಎಂದು ಹೇಳಿದರು.
2012ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿ ಪಾದಯಾತ್ರೆ ನಡೆದಿತ್ತು. ಪರಿಣಾಮ 120 ಸ್ಥಾನಗಳು ಬಂದಿದ್ದವು ಎಂದು ಎನ್‍ವೈಜಿ ತಿಳಿಸಿದರು.
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/J6cH6HirXqYERmT1X09kSk)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)