ಮುಖ್ಯ ಸುದ್ದಿ
ಸ್ಟೇಡಿಯಂನಲ್ಲಿ ಎಲ್‍ಇಡಿ ಅಳವಡಿಸಲು ಮೀನಾಮೇಷ ಎಣಿಸಿದ ಅಧಿಕಾರಿಗಳು
ಚಿತ್ರದುರ್ಗ ನ್ಯೂಸ್.ಕಾಂ: ಇದಕ್ಕೆ ದೇವರು ಕೊಟ್ರು ಪೂಜಾರಿ ಕೊಡಲಿಲ್ಲ ಅನ್ನೋದು. ಜಿಲ್ಲೆಗಳ ಕ್ರೀಡಾಂಗಣದಲ್ಲಿ ಎಲ್‍ಇಡಿ ಪರದೆ ಅಳವಡಿಸಲು ಸರ್ಕಾರ ಆದೇಶ ಮಾಡಿದ್ದರೂ ಚಿತ್ರದುರ್ಗದಲ್ಲಿ ಸಂಜೆವರೆಗೆ ಅಳವಡಿಸದ ಕ್ರಮ ಖಂಡಿಸಿ ಕ್ರೀಡಾ ಪ್ರೇಮಿಗಳು ಪ್ರತಿಭಟಿಸಿದ ಘಟನೆ ನಡೆದಿದೆ.
ಜಗತ್ತಿನಾದ್ಯಂತ ಹೈ-ವೋಲ್ಟೇಜ್ ಸೃಷ್ಟಿಸಿರುವ ಭಾರತ – ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಕ್ರಿಕೇಟ್ ಪಂದ್ಯಾವಳಿ ವೀಕ್ಷಣೆಗೆ ಸ್ಟೇಡಿಯಂಗಳಲ್ಲಿ ದೊಡ್ಡ ಎಲ್‍ಇಡಿ ಪರದೆ ಅಳವಡಿಸಿ ಕ್ರೀಡಾ ಪ್ರೇಮಿಗಳಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಆದರೆ, ಚಿತ್ರದುರ್ಗದಲ್ಲಿ ಮಾತ್ರ ಅಧಿಕಾರಿಗಳ ನಿರಾಸಕ್ತಿ ಕಾರಣಕ್ಕೆ ಕ್ರೀಡಾಪ್ರೇಮಿಗಳು, ಹೋರಾಟಗಾರರು ಪ್ರತಿಭಟನೆ ನಡೆಸಿ ಎಲ್‍ಇಡಿ ಪರದೆ ಅಳವಡಿಸಿಕೊಳ್ಳುವಂತಾಯಿತು.
ಸರ್ಕಾರ ಶನಿವಾರ ತಡರಾತ್ರಿ ಆದೇಶ ಹೊರಡಿಸಿದ ಕಾರಣಕ್ಕೆ ಎಲ್‍ಇಡಿ ಸ್ಕ್ರೀನ್‍ಗಳನ್ನು ಹುಡುಕಿ ಅಳವಡಿಸುವುದು ಸಮಸ್ಯೆಯಾಗಿದೆ ಎನ್ನುವ ವಾದವೂ ಇದೆ.
ಇದನ್ನೂ ಓದಿ: ಮುರುಘಾ ಶರಣರ ಬಿಡುಗಡೆ ಪ್ರಕ್ರಿಯೆ ತನಿಖೆಗೆ ಸೂಚನೆ
ಆದರೆ, ಭಾನುವಾರ ಮಧ್ಯಾಹ್ನ 2 ಗಂಟೆಗೆ ವಿಶ್ವಕಪ್ ಪಂದ್ಯಾವಳಿಗಳು ಪ್ರಾರಂಭವಾದವು. ಆದರೆ, ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಯಾವ ವ್ಯವಸ್ಥೆಯೂ ಆಗಿರಲಿಲ್ಲ. ಪ್ರತಿಭಟನೆಯಾಗಿ, ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ ನಂತರ ಎಚ್ಚೆತ್ತ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಪಕ್ಕದ ಪ್ರೀಡಾ ಭವನದಲ್ಲಿ ದೊಡ್ಡ ಟಿವಿ ಇಟ್ಟು ಮ್ಯಾಚ್ ಲೈವ್ ತೊರಿಸಲು ಮುಂದಾದರು.
ಆದರೆ, ಇಂಟರ್‍ನೆಟ್ ಸಮಸ್ಯೆ ಕಾರಣಕ್ಕೆ ನಿರಂತರವಾಗಿ ಬಫರಿಂಗ್ ಆಗುತ್ತಿದ್ದರಿಂದ ಕ್ರಿಕೇಟ್ ನೋಡಲು ಬಂದವರು ನಿರಾಸೆಗೊಂಡು ಮೊಬೈಲ್ ಆನ್ ಮಾಡಿಕೊಂಡು ನೋಡುವಂತಾಯಿತು.ಸಂಜೆ 5 ಗಂಟೆ ವೇಳೆಗೆ ಎಲ್‍ಇಡಿ ಸ್ಕ್ರೀನ್ ತರಿಸಿದ ಅಧಿಕಾರಿಗಳು, ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅಳವಡಿಸಿ ಕೊನೆಗೂ ಅವಕಾಶ ಕಲ್ಪಿಸಿದರು. ಆದರೆ, ಸರ್ಕಾರ ಆದೇಶ ಮಾಡಿದರೂ, ಅಧಿಕಾರಿಗಳು ವ್ಯವಸ್ಥೆ ಮಾಡಲು ಇಷ್ಟೆಲ್ಲಾ ಕಸರತ್ತು ನಡೆದಿದ್ದು ಕ್ರೀಡಾ ಪ್ರೇಮಿಗಳಿಗೆ ಬೇಸರ ತರಿಸಿತು.
ಚಿತ್ರದುರ್ಗ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಎಲ್‍ಇಡಿ ಸ್ಕ್ರೀನ್ ಅಳವಡಿಸಿ ಎಂದರೆ ನಮ್ಮನ್ನೇ ಸ್ಕ್ರೀನ್ ತರುತ್ತೀರಾ ಎನ್ನುತ್ತಾರೆ. ನಾವು ಹಾಕುವುದಿಲ್ಲ ಎಂದು ದಾಷ್ರ್ಯದ ಉತ್ತರ ಕೊಡುತ್ತಾರೆ. ಅಸಮರ್ಥ ಅಧಿಕಾರಿಗಳಿಂದಾಗಿ ಚಿತ್ರದುರ್ಗ ಜಿಲ್ಲೆಗೆ ಅವಮಾನ ಆಗುತ್ತಿದೆ. ಸರ್ಕಾರ ಆದೇಶ ಮಾಡಿದ್ದರೂ ಪಾಲನೆ ಮಾಡದ ಇಂತಹ ಅಧಿಕಾರಿಗಳನು ಅಮಾನತು ಮಾಡಬೇಕು.
| ಕೆ.ಟಿ.ಶಿವಕುಮಾರ್, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ.