Connect with us

    ಮುರುಘಾ ಶರಣರ ಬಿಡುಗಡೆ ಪ್ರಕ್ರಿಯೆ ಕುರಿತು ತನಿಖೆಗೆ ಸೂಚನೆ

    ಕಾರಾಗೃಹ

    ಮುಖ್ಯ ಸುದ್ದಿ

    ಮುರುಘಾ ಶರಣರ ಬಿಡುಗಡೆ ಪ್ರಕ್ರಿಯೆ ಕುರಿತು ತನಿಖೆಗೆ ಸೂಚನೆ

    ಚಿತ್ರದುರ್ಗ ನ್ಯೂಸ್.ಕಾಂ: ಹೈಕೋರ್ಟ್ ಜಾಮೀನಿನ ಅನುಸಾರ ಜಿಲ್ಲಾ ಕಾರಾಗೃಹದಿಂದ ನ.16 ಗುರುವಾರ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಬಿಡಗಡೆಯಾಗಿದ್ದಾರೆ. ಆದರೆ, ಈ ಬಿಡುಗಡೆ ಪ್ರಕ್ರಿಯೆ ಕುರಿತು ತನಿಖೆ ನಡೆಸುವಂತೆ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬಂಧಿಖಾನೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ.

    ಇಂದು (ನ.18 ಶನಿವಾರ) ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣದ ಬಾಡಿ ವಾರೆಂಟ್ ಕುರಿತ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶೆ ಬಿ.ಕೆ.ಕೋಮಲಾ, 2ನೇ ಪ್ರಕರಣದ ವಿಚಾರಣೆ ವೇಳೆಯೇ ಬಿಡುಗಡೆ ಮಾಡಿರುವುದಕ್ಕೆ ಸಂಬಂದಿಸಿದಂತೆ ತನಿಖೆಗೆ ಸೂಚನೆ ನೀಡಿದ್ದಾರೆ ಎಂದು ವಿಶೇಷ ಸರ್ಕಾರಿ ವಕೀಲರಾದ ಎಚ್.ಆರ್.ಜಗದೀಶ್ ತಿಳಿಸಿದ್ದಾರೆ.

    ಶರಣರ ವಿರುದ್ಧ ದಾಖಲಾಗಿದ್ದ ಮೊದಲನೇ ಪ್ರಕರಣದ ಜಾಮೀನು ಹಾಗೂ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ಪ್ರಾಸಿಕ್ಯೂಷನ್ ಸರ್ಕಾರಿ ವಕೀಲರ ಮೂಲಕ, ಎರಡನೇ ಪ್ರಕರಣದಲ್ಲಿ ಶ್ರೀಗಳ ವಿರುದ್ಧ ಹೊರಡಿಸಿದ್ದ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯುತ್ತಿತ್ತು.

    ಮುರುಘಾ ಶರಣರು ಕಾರಾಗೃಹದಿಂದ ಬಿಡುಗಡೆ

    ಮುರುಘಾ ಶರಣರು ಕಾರಾಗೃಹದಿಂದ ಬಿಡುಗಡೆ

    ಇದನ್ನೂ ಓದಿ: ಜೈಲಿನಿಂದ ಹೊರಗೆ ಬಂದ ಮುರುಘಾ ಶರಣರು

    ನ.16 ರಂದು ಬೆಳಗ್ಗೆ 11ಕ್ಕೆ ಸದರಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿತ್ತು. ಪ್ರಕರಣದ ಆರೋಪಿಗಳಾದ ಶಿವಮೂರ್ತಿ ಮುರುಘಾ ಶರಣರು ಹಾಗೂ ಹಾಸ್ಟೆಲ್ ವಾರ್ಡನ್ ರಶ್ಮಿ ಜಿಲ್ಲಾ ಕಾರಾಗೃಹದಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಆನಂತರ ವಿಚಾರಣೆಯನ್ನು ಪಾಸ್ ಓವರ್ ಮಾಡಿ ಮಧ್ಯಾಹ್ನ 1 ಗಂಟೆಗೆ ಮತ್ತೆ ವಿಚಾರಣೆ ಆರಂಭಿಸಿದಾಗ ಮುರುಘಾ ಶರಣರು ಕಾರಾಗೃಹದಿಂದ ಬಿಡುಗಡೆಯಾಗಿದ್ದರು.

    ಮಧ್ಯಾಹ್ನ ವಿಚಾರಣೆ ಆರಂಭವಾದಾಗ ಪ್ರಕರಣದ 2ನೇ ಆರೋಪಿ ರಶ್ಮಿ ಮಾತ್ರ ಕಾರಾಗೃಹದಿಂದ ವೀಡಿಯೋ ಕಾನ್ಪ್‍ರೆನ್ಸ್ ಮೂಲಕ ಹಾಜರಾಗಿದ್ದರು. ಇತ್ತ ಶರಣರನ್ನು ಹೈಕೋರ್ಟ್ ನೀಡಿರುವ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಿರುವುದಾಗಿ ಕಾರಾಗೃಹದ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

    ಈ ಹಿನ್ನೆಲೆಯಲ್ಲಿ ಬಿಡುಗಡೆ ಪ್ರಕ್ರಿಯೆ ಕುರಿತು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಇಂದು ನಡೆದ ಕಲಾಪದಲ್ಲಿ ಬಂಧಿಖಾನೆ ಎಡಿಜಿಪಿ ಅವರಿಗೆ ಪತ್ರ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

    ನ.20 ಸೋಮವಾರಕ್ಕೆ 2ನೇ ಪ್ರಕರಣದ ವಿಚಾರಣೆ:

    ಮುರುಘಾ ಶರಣರ ವಿರುದ್ಧ ದಾಖಲಾಗಿರುವ 2ನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನ.20 ಸೋಮವಾರಕ್ಕೆ ಮುಂದೂಡಲಾಯಿತು.

    2ನೇ ಪ್ರಕರಣದಲ್ಲಿ ಮುರುಘಾ ಶರಣರು ವಿಚಾರಣೆಗೆ ಹಾಜರಾಗಿಲ್ಲ. ಹಾಗಾಗಿ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಬೇಕು ಎಂದು ಸರ್ಕಾರಿ ವಕೀಲ ಎಚ್.ಆರ್.ಜಗದೀಶ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

    ಶಿವಮೂರ್ತಿ ಮುರುಘಾ ಶರಣರು

    ಶಿವಮೂರ್ತಿ ಮುರುಘಾ ಶರಣರು

    ಇದನ್ನೂ ಓದಿ: ಡೀಪ್‍ಫೇಕ್ ಬಗ್ಗೆ ನಿರ್ಲಕ್ಷ್ಯ ಬೇಡ | ಡಾ.ಜಿ.ಪರಮೇಶ್ವರ್

    ಈ ವೇಳೆ ಶ್ರೀಗಳ ಪರ ವಕೀಲರಾದ ಎಂ.ಉಮೇಶ್, ಶ್ರೀಗಳನ್ನು ವೀಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ಲಿಖಿತವಾಗಿ ಮನವಿ ಮಾಡಿದರು.

    ಜೊತೆಗೆ ಶ್ರೀಗಳಿಗೆ ಹೈಕೋರ್ಟ್ ಮೊದಲನೇ ಪ್ರಕರಣದಲ್ಲಿ ಜಾಮೀನು ನೀಡಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಬಾರದು ಎಂದು ಷರತ್ತು ವಿಧಿಸಿದೆ. ಇಲ್ಲಿಗೆ ಬಂದರೆ ಅದನ್ನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ವಿಸಿ ಮೂಲಕ ಹಾಜರಾಗಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

    ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಬಿ.ಕೆ.ಕೋಮಲಾ ನ.20 ಸೋಮವಾರಕ್ಕೆ ವಿಚಾರಣೆ ನಿಗಧಿ ಮಾಡಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top