ಮುಖ್ಯ ಸುದ್ದಿ
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲೆ ಹೊಸ ಮೆಡಿಕಲ್ ಕಾಲೇಜು | 24 ಹಳೆಯ ಕಟ್ಟಡ ನೆಲಸಮಕ್ಕೆ ಸಭೆಯಲ್ಲಿ ನಿರ್ಧಾರ

ಚಿತ್ರದುರ್ಗ ನ್ಯೂಸ್: ಕಳೆದೊಂದು ದಶಕದ ಹೋರಾಟದ ಫಲವಾಗಿ ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, ಕಾಲೇಜು ಕಟ್ಟಡ ನಿರ್ಮಾಣ ವಿಚಾರದಲ್ಲಿ ಹಲವು ಗೊಂದಲ ಮನೆ ಮಾಡಿದ್ದವು. ಅಂತಿಮವಾಗಿ ಆ.26 ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲೇ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಿಸಲು ಎಲ್ಲ ಶಾಸಕರು ಒಮ್ಮತ ವ್ಯಕ್ತಪಡಿಸಿದರು.
ಮೆಡಿಕಲ್ ಕಾಲೇಜು ಪ್ರಗತಿ ಕುರಿತು ವಿಶೇಷಾಧಿಕಾರಿ ಡಾ.ಯುವರಾಜ್ ವಿವರಣೆ ನೀಡುವ ವೇಳೆ ಮಧ್ಯದಲ್ಲಿ ಚಿಕ್ಕಪುರ ಬಳಿ ಜಾಗ ಇರುವುದನ್ನು ಪ್ರಸ್ತಾಪಿಸುತ್ತಿದ್ದಂತೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅಧಿಕಾರಿಯ ವಿರುದ್ಧ ಗರಂ ಆದರು.
ಈಗಾಗಲೇ ಎಲ್ಲವೂ ಅಂತಿಮವಾಗಿ ನಗರದ ಹೃದಯ ಭಾಗದಲ್ಲೇ ಮೆಡಿಕಲ್ ಕಾಲೇಜು ನಿರ್ಮಿಸಲು ಚಿಂತನೆ ನಡೆದಿರುವಾಗ ಯಾಕೆ ದಾರಿ ತಪ್ಪಿಸುತ್ತಿದ್ದೀರಿ, ನಿಮ್ಮ ಉದ್ದೇಶವೇನಿ ಎಂದು ಎಂದು ಪ್ರಶ್ನಿಸಿದರು.
ಈ ವೇಳೆ ಎಲ್ಲ ಶಾಸಕರೂ ಈಗ ಮಂಜೂರಾತಿ ದೊರೆತಿರುವ ಜಿಲ್ಲಾ ಆಸ್ಪತ್ರೆ ಆವರಣದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿ, ಅಲ್ಲಿರುವ ಅನುಪಯುಕ್ತ ಹಾಗೂ ಹಳೆಯ ಕಟ್ಟಡಗಳನ್ನು ನೆಲಸಮ ಮಾಡಿ ಕಾಮಗಾರಿ ಆರಂಭಿಸಲು ಇಂಜಿನಿಯರ್‍ಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಶಾಸಕರ ತೀರ್ಮಾನದಂತೆ ಜಿಲ್ಲಾಸ್ಪತ್ರೆಯ ಆವರಣದಲ್ಲಿಯೇ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ಮಾಣ ಮಾಡಲಾಗುವುದು. 2023ರ ಸೆಪ್ಟೆಂಬರ್ 15ರಂದು ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು.
| ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು.
ಇದೇ ವೇಳೆ ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ನರ್ಸಿಂಗ್ ಕಾಲೇಜು ಹಾಗೂ ಹಾಸ್ಟೆಲ್‍ಗಳನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಕೌನ್ಸಿಲಿಂಗ್ ಮೂಲಕ ಚಿತ್ರದುರ್ಗ ಮೆಡಿಕಲ್ ಕಾಲೇಜು ಆಯ್ಕೆ ಮಾಡಿಕೊಂಡ 26 ವಿದ್ಯಾರ್ಥಿಗಳು:
ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಹೆಸರಿನಲ್ಲಿ ನೊಂದಣಿಯಾಗಿರುವ ಮೆಡಿಕಲ್ ಕಾಲೇಜಿಗೆ ಎನ್‍ಎಂಸಿ 150 ಸೀಟುಗಳನ್ನು ಮಂಜೂರು ಮಡಿದೆ. ಇದರಲ್ಲಿ ಈಗಾಗಲೇ ಕೌನ್ಸಿಲಿಂಗ್ ಮೂಲಕ 26 ವಿದ್ಯಾರ್ಥಿಗಳು ಚಿತ್ರದುರ್ಗ ಮೆಡಿಕಲ್ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿಶೇಷಾಧಿಕಾರಿ ಡಾ.ಯುವರಾಜ್ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಈ ವರ್ಷದ 150 ಸೀಟುಗಳು ಭರ್ತಿಯಾಗುವುದರಲ್ಲಿ ಅನುಮಾನವಿಲ್ಲ. ತಕ್ಷಣ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.
ಜಿ.ಆರ್.ಹಳ್ಳಿ ಬಳಿಯಿರುವ ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಥಮ ವರ್ಷದ ತರಗತಿಗಳನ್ನು ಆರಂಭಿಸಲಾಗುವುದು ಎಂದರು.
ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕಳೆದ ಸರ್ಕಾರದ ಅವಧಿಯಲ್ಲಿ ಟೆಂಡರ್ ಕರೆಯಲಾಗಿದೆ. ಸದ್ಯ ನಿರ್ಮಾಣದ ಕೆಲಸ ಆರಂಭವಾಗಬೇಕಿದೆ. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಬಹುದು ಎಂದರು.
ಪ್ರಸ್ತುತ ಜಿಲ್ಲಾ ಆಸ್ಪತ್ರೆ 450 ಬೆಡ್ ಹೊಂದಿದೆ. ಇದರ ಜೊತೆಗೆ ನೂತನ ವೈದ್ಯಕೀಯ ಕಾಲೇಜು ನಿರ್ಮಾಣದ ಯೋಜನೆಯಲ್ಲಿ 150 ಬೆಡ್ ಆಸ್ಪತ್ರೆ ನಿರ್ಮಾಣ, ನರ್ಸಿಂಗ್ ಕಾಲೇಜು, ಬೊಧನೆ ಹಾಗೂ ವಸತಿ ನಿಲಯಗಳನ್ನು ಸಹ ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸರ್ಕಾರ ವೈದ್ಯಕೀಯ ಕಾಲೇಜಿಗೆ ಅಗತ್ಯ ಇರುವ 79 ಹುದ್ದೆಗಳನ್ನು ಸೃಜಿಸಿರುವ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಆರ್ಥಿಕ ಇಲಾಖೆಯು ಅನುಮತಿ ನೀಡಿದೆ. ಸದ್ಯ 17 ವೈದ್ಯಕೀಯ ಬೋಧಕರು, 5 ಕ್ಲರ್ಕ್,20 ಗ್ರೂಪ್ ‘ಡಿ’ ಸಿಬ್ಬಂದಿ ಸೇರಿದಂತೆ, ಅಗತ್ಯ ಪರಿಕರಗಳು ಖರೀದಿಸಲು ಅನುಮತಿ ನೀಡುವಂತೆ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಿಶೇಷ ಅಧಿಕಾರಿ ಡಾ.ಯುವರಾಜ್ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಿಎಚ್‍ಒ ಡಾ.ಆರ್.ರಂಗನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೇವರಾಜ್ ಇತರರಿದ್ದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)
