ಮುಖ್ಯ ಸುದ್ದಿ
ಚಿತ್ರದುರ್ಗದಲ್ಲಿ ಮೇ.4ರಂದು NEET ಪರೀಕ್ಷೆ | ಸಕಲ ಸಿದ್ದತೆಗೆ ಡಿಸಿ ಟಿ.ವೆಂಕಟೇಶ್ ಸೂಚನೆ

CHITRADURGA NEWS | 27 MARCH 2025
ಚಿತ್ರದುರ್ಗ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮುಂಬರುವ ಮೇ.4ರಂದು ನೀಟ್ ಪರೀಕ್ಷೆ ನಡೆಸಲಿದ್ದು, ಜಿಲ್ಲೆಯಲ್ಲಿ ಸುಗಮವಾಗಿ ಪರೀಕ್ಷೆ ನಡೆಸುವ ದೃಷ್ಟಿಯಿಂದ ಅಧಿಕಾರಿಗಳು ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
Also Read: ಕೊಳಾಳು ಗ್ರಾಮದಲ್ಲಿ 2 ಚಿರತೆ ಮರಿ ಪತ್ತೆ | ಆಡುಮಲ್ಲೇಶ್ವರ ಮೃಗಾಯಲಕ್ಕೆ ಹಸ್ತಾಂತರ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೀಟ್ ಪರೀಕ್ಷೆ ಪೂರ್ವ ಸಿದ್ದತೆ ಕುರಿತು ನಡೆದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗವಹಿಸಿ ನಂತರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮಹಾನಿರ್ದೇಶಕರಾದ ಪ್ರದೀಪ್ ಸಿಂಗ್ ಖರೋಲಾ ಅವರ ಸೂಚನೆಯಂತೆ ನೀಟ್ ಪರೀಕ್ಷೆಯನ್ನು ಪ್ರಥಮಾಧ್ಯತೆಯಾಗಿ ಸರ್ಕಾರಿ ಕಾಲೇಜುಗಳಲ್ಲಿ ನಡೆಸಬೇಕು. ನಂತರದಲ್ಲಿ ಅನುದಾನಕ್ಕೆ ಒಳಪಟ್ಟ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮಕೈಗೊಳ್ಳಬೇಕು.
ಜಿಲ್ಲೆಯಲ್ಲಿ ಒಟ್ಟು 3013 ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದು, ಪ್ರತಿ ಕೊಠಡಿಗೆ 24 ರಂತೆ 125 ಕೊಠಡಿಗಳನ್ನು ಸಿದ್ದಗೊಳಿಸಿ ಸರ್ಕಾರಕ್ಕೆ ವರದಿ ನೀಡಬೇಕು. ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಮತ್ತು ವಿದ್ಯಾರ್ಥಿಗಳ ಚಲನವಲನ, ಮತ್ತು ಸಿಸಿಟಿವಿ ಡಿವಿಆರ್ ಮತ್ತು ರೆಕಾರ್ಡಿಂಗ್ ಆಗುತ್ತಿರುವ ಬಗ್ಗೆ ಖುದ್ದು ಪರಿಶೀಲನೆ ನಡೆಸಬೇಕು. ಪರೀಕ್ಷಾ ದಿನ ಸಿಸಿಟಿವಿ ರೆಕಾರ್ಡಿಂಗ್ ವಿಡಿಯೋ ಕಾಪಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ನೀಟ್ ಪರೀಕ್ಷೆ ನೋಡಲ್ ಅಧಿಕಾರಿಗಳು ಪರೀಕ್ಷಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಪರೀಕ್ಷೆ ವಿಷಯದಲ್ಲಿ ಯಾವುದೇ ತೊಂದರೆ ಉಂಟಾದಲ್ಲಿ ತಕ್ಷಣವೇ ಜಿಲ್ಲಾಡಳಿತಕ್ಕೆ ಸಂಪರ್ಕಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
