ಮುಖ್ಯ ಸುದ್ದಿ
ಜೀವನಶೈಲಿ ಬದಲಾಗದಿದ್ದರೆ ಬದುಕು ಕಷ್ಟ | ಎಂ.ಸಿ.ರಘುಚಂದನ್
ಚಿತ್ರದುರ್ಗ ನ್ಯೂಸ್.ಕಾಂ: ನಮ್ಮ ದೇಹ, ಮನಸ್ಸು ಶುದ್ಧವಾಗಿರಬೇಕಾದರೆ ಇಂದಿನಿಂದಲೇ ನಮ್ಮ ಒತ್ತಡದಿಂದ ನಡೆಯುತ್ತಿರುವ ಜೀವನ ಪದ್ಧತಿಯನ್ನು ಸರಿಪಡಿಸಿಕೊಳ್ಳಬೇಕು ಎಂದು ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ.ರಘುಚಂದನ್ ಹೇಳಿದರು.
ಚಳ್ಳಕೆರೆ ಗೇಟ್ ಸಮೀಪದಲ್ಲಿ ಇಂಡಿಯನ್ ಇಂಟರ್‍ನ್ಯಾಷನಲ್ ಶಾಲೆ ಆವರಣದಲ್ಲಿರುವ ಪ್ರಕೃತಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಮಾತನಾಡಿದರು.
ಜೀವನಶೈಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಭವಿಷ್ಯದ ದಿನಗಳು ಕಠೋರವಾಗಿರುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಬದುಕಿನ ಅನಿವಾರ್ಯತೆ ಹಾಗೂ ಒತ್ತಡದ ಕಾರಣಕ್ಕೆ ಮನುಷ್ಯ ಪ್ರತಿ ಕ್ಷಣವೂ ಒಂದಲ್ಲ ಒಂದು ಸಮಸ್ಯೆಗೆ ತುತ್ತಾಗುತ್ತಿದ್ದಾನೆ. ಎಲ್ಲರನ್ನೂ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಮನುಷ್ಯ ಉತ್ತಮ ಆರೋಗ್ಯ ಹೊಂದಬೇಕಾದರೆ, ಶಿಸ್ತಿನ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸು ಶುದ್ಧವಾಗಬೇಕು. ನಮ್ಮ ದೃಷ್ಠಿಕೋನವೂ ಸರಿಯಾಗಿರಬೇಕು. ನಾವು ಬದುಕುತ್ತಿರುವ ಪರಿಸರ, ಸಮಾಜವನ್ನು ನಾವು ಸೂಕ್ಷ್ಮವಾಗಿ ಗ್ರಹಿಸಿಕೊಂಡು ಜೀವನ ನಡೆಸಬೇಕಿದೆ. ಇದು ಸಾದ್ಯವಾಗಬೇಕು ಎನ್ನುವುದಾದರೆ ಆರ್ಯುವೇದ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಮುರುಘಾ ಶರಣರ ಪ್ರಕರಣ | ಮೂರ್ನಾಲ್ಕು ದಿನಗಳಲ್ಲೇ ಬಿಡುಗಡೆ ಸಾಧ್ಯತೆ
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕಿ ಡಾ.ಎಸ್.ಕೆ.ಪೃಥ್ವಿ ಮಾತನಾಡಿ, ಆರ್ಯುವೇದ ಇಂದು-ನಿನ್ನೆಯದಲ್ಲ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಮೊದಲು ಮನುಷ್ಯ ಆರ್ಯುವೇದವನ್ನೇ ಅನುಸರಿಸುತ್ತಿದ್ದ. ಕಾಲ ಬದಲಾದಂತೆ ಈ ಪದ್ದತಿಯೂ ಬದಲಾಗುತ್ತಿದೆ ಎಂದರು.
ಆರ್ಯುವೇದ ಚಿಕಿತ್ಸಾ ಪದ್ದತಿ ಪುರಾತನ ಕಾಲದಿಂದಲೂ ಬಂದಿದೆ. ನಮ್ಮ ಪೂರ್ವಿಕರು ಸಹ ಅದನ್ನು ಅನುಸರಿಸಿದ್ದಾರೆ. ಉತ್ತಮ ಆರೊಗ್ಯಕ್ಕಾಗಿ ಈ ಪದ್ದತಿಯನ್ನು ನಾವು ಅನುಸರಿಸಬೇಕಾದ ಅನಿವಾರ್ಯತೆ ಈಗ ಹೆಚ್ಚಿದೆ. ನಮ್ಮ ದೈನಂದಿನ ಚಟುವಟಿಕೆಯಲ್ಲಿ ನಾವು ಬದಲಾವಣೆ ತಂದುಕೊಳ್ಳಬೇಕಿದೆ. ಆಹಾರ ಪದ್ದತಿ, ಜೀವನ ಶೈಲಿಯಲ್ಲಿಯೂ ನಾವು ಕೆಲವು ಬದಲಾವಣೆ ಮಾಡಿಕೊಳ್ಳದಿದ್ದರೆ ಅಪಾಯ ಎಂದು ಎಚ್ಚರಿಸಿದರು.
ಪ್ರಕೃತಿ ಆರ್ಯುವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯ ಡಾ.ನವಾಜ್ ಅಹಮ್ಮದ್ ಮಾತನಾಡಿ, ಆರ್ಯುವೇದವನ್ನು ಈಗ ಇಡೀ ದೇಶದಲ್ಲಿ ಜನಪ್ರಿಯಗೊಳಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬರನ್ನೂ ಇದು ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶವೂ ಆಗಿದೆ ಎಂದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಹೆಚ್.ಚಂದ್ರಕಲಾ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ವಿವಿಧ ವಿಭಾಗಗಳ ಪ್ರಾಚಾರ್ಯರಾದ ಕೋಟ್ರೇಶ್, ಜಿ.ಇ.ಭೈರಸಿದ್ದಪ್ಪ, ಡಾ.ಶಿವಕುಮಾರ್, ಮಹಂತೇಶ್, ಮುಖ್ಯ ಶಿಕ್ಷಕ ಪಾಪಣ್ಣ, ಎಸ್‍ಎಲ್‍ವಿ ಪಿಯು ಕಾಲೇಜು ಪ್ರಾಚಾರ್ಯ ಕೋಟ್ರೇಶ್, ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.