ಹೊಳಲ್ಕೆರೆ
ಮುರುಘಾ ಮಠಕ್ಕೂ ಈ ಊರಿಗೂ ಅವಿನಾಭವ ಸಂಬಂಧವೆಂದ ಬಸವಪ್ರಭು ಶ್ರೀ | ನಂದನಹೊಸೂರು ಶ್ರೀ ಕರಿಯಮ್ಮ ದೇಗುಲ ಲೋಕಾರ್ಪಣೆ

CHITRADURGA NEWS | 13 FEBRUARY 2024
ಹೊಳಲ್ಕೆರೆ: ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ಮಂಗಳವಾರ ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಪ್ರಾರಂಭೋತ್ಸವ, ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣಾ ಪ್ರತಿಷ್ಠಾಪನೆ ಕಾರ್ಯಗಳು ವಿಜೃಂಭಣೆಯಿಂದ ಜರುಗಿದವು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಮುರುಘಾ ಮಠಕ್ಕೂ ನಂದನಹೊಸೂರಿಗೂ ಅವಿನಾಭವ ಸಂಬಂಧವಿದೆ ಎಂದು ಹೇಳಿದರು.
ಇದನ್ನೂ ಓದಿ: ನಿಗಮಗಳ ಅಧಿಕಾರ ಸ್ವೀಕರಿಸಿದ ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ
ಮುರುಘಾ ಮಠದ ಭಕ್ತರು ಎಲ್ಲಿ ಸಿಗುತ್ತಾರೆಂದರೆ, ಅದು ನಂದನಹೊಸೂರಿನಲ್ಲಿ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಮುರುಘಾ ಮಠದ ಕಾರ್ಯಕ್ರಮ ನಡೆಸಿಕೊಟ್ಟ ಕೀರ್ತಿ ನಂದನಹೊಸೂರಿಗೆ ಸಲ್ಲುತ್ತದೆ.ಮುರುಗೇಶನ ಭಕ್ತರು ಈ ಗ್ರಾಮದಲ್ಲಿದ್ದಾರೆ. ಭಕ್ತಿಯ ಸಾಮ್ರಾಜ್ಯವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಊರಿಗೊಂದು ದೇವಸ್ಥಾನವಿರಬೇಕು. ಆದರೆ ಕೇರಿಗೊಂದು, ಓಣಿಗೊಂದು, ಜಾತಿಗೊಂದು ಬೇಕಿಲ್ಲ. ದೇವಸ್ಥಾನಕ್ಕೆ ಕೊಟ್ಟ ಸಂಭ್ರಮ ಆಸಕ್ತಿಯನ್ನು ಮಕ್ಕಳ ಶಿಕ್ಷಣಕ್ಕೆ ಕೊಡದಿರುವುದು ದುರಂತ ಎಂದರು.
ಇದನ್ನೂ ಓದಿ: ನಂದನಹೊಸೂರಿನಲ್ಲಿಂದು ದೇಗುಲ ಪ್ರಾರಂಭೋತ್ಸವ
ನಮ್ಮ ದೇಶದ ಆಚಾರ, ವಿಚಾರ, ಸಂಸ್ಕøತಿಯನ್ನು ಬಿಟ್ಟುಕೊಡಬಾರದು. ನಾಗರೀಕ ಪ್ರಪಂಚದ ನಾಗಾಲೋಟದಲ್ಲಿ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಯಾವುದೇ ಮನೆಗೆ ಬಂದ ಹೆಣ್ಣನ್ನು ಮಗಳಂತೆ ಕಂಡಾಗ ಯಾವ ಮನೆಯಲ್ಲಿಯೂ ಜಗಳವಿರುವುದಿಲ್ಲ. ಅತ್ತೆ ಸೊಸೆ ಹೊಂದಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಸ್ನಾನ ಮಾಡಿದಾಗ ಮನಸ್ಸಿಗೆ ಹೇಗೆ ಉಲ್ಲಾಸವಾಗುತ್ತದೋ ಅದೇ ರೀತಿ ದುಶ್ಚಟ, ದುರಾಲೋಚನೆಗಳನ್ನು ತ್ಯಜಿಸಿದಾಗ ಮನಸ್ಸು, ಆರೋಗ್ಯ ಚೆನ್ನಾಗಿರುತ್ತದೆ. ಡಚ್ಚರು, ಪೋರ್ಚುಗೀಸರು, ಮಹಮದ್ ಘಜ್ನಿ ಇವರುಗಳೆಲ್ಲಾ ಭಾರತದ ಮೇಲೆ ದಂಡೆತ್ತಿ ಬಂದು ಸಂಪತ್ತನ್ನೆಲ್ಲಾ ದೋಚಿದ್ದಾರೆ. ನಮ್ಮ ದೇಶದ ಸಂಸ್ಕøತಿ, ಆಚಾರ, ವಿಚಾರಗಳನ್ನು ಲೂಟಿ ಹೊಡೆಯಲು ಅವರಿಂದ ಆಗಲಿಲ್ಲ. ಅದಕ್ಕಾಗಿ ಭಾರತದ ಸಂಸ್ಕøತಿ ಉಳಿಯಬೇಕಾದರೆ ಗುರು-ಹಿರಿಯರನ್ನು ಗೌರವಿಸುವುದನ್ನು ಮಕ್ಕಳಿಗೆ ಚಿಕ್ಕಂದಿನಿಂದಲೆ ಹೇಳಿಕೊಡಬೇಕು ಎಂದರು.
ಇದನ್ನೂ ಓದಿ: ಬಾಲ ರಾಮನಿಗೆ ಭಾವ ತುಂಬಿದ ಭಾವನಾ
ಬಿಜೆಪಿ ಯುವ ಮುಖಂಡ ಎಂ.ಸಿ.ರಘುಚಂದನ್ ಮಾತನಾಡಿ, ನಮ್ಮ ತಂದೆ ಹೊಳಲ್ಕೆರೆ ಶಾಸಕರಾದ ಡಾ.ಎಂ.ಚಂದ್ರಪ್ಪನವರು ಕ್ಷೇತ್ರಾದ್ಯಂತ 174 ದೇವಸ್ಥಾನಗಳಿಗೆ ಅನುದಾನ ನೀಡಿದ್ದಾರೆ. ಅವರ ಬಳಿ ಮಾತನಾಡಿ ಶ್ರೀ ಕರಿಯಮ್ಮ ದೇವಸ್ಥಾನಕ್ಕೆ ಕಮಾನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚು ಮತ ನೀಡಿರುವುದು ನಂದನಹೊಸೂರು ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಬಿಜೆಪಿ ಭಾವುಟವೇ ಹಾರದ ಕಾಲದಲ್ಲಿ ಇಲ್ಲಿ ಪಕ್ಷದ ಭಾವುಟವನ್ನು ಹಾರಿಸಿದ್ದೀರಿ. ಕಾಂಗ್ರೆಸ್ ಅಲೆಯಲ್ಲಿ ಬಿಜೆಪಿ ಗೆದ್ದಿದೆ ಎಂದರೆ ಅದಕ್ಕೆ ದೈವಬಲ, ಮತದಾರರು, ಕಾರ್ಯಕರ್ತರ ಪರಿಶ್ರಮವಿದೆ ಎಂದು ಶ್ಲಾಘಿಸಿದರು.
ವಕೀಲರಾದ ಜಿ.ಹೆಚ್.ಶಿವಕುಮಾರ್, ತಾಪಂ ಮಾಜಿ ಸದಸ್ಯ ಮೂಡಲಗಿರಿಯಪ್ಪ, ಎನ್.ಎಸ್.ರಮೇಶ್, ಎಂ.ಪ್ರವೀಣ್ ಮತ್ತಿತರರು ಮಾತನಾಡಿದರು.
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
