ಮುಖ್ಯ ಸುದ್ದಿ
ದೂರದೃಷ್ಟಿಯಿಂದ ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೆಗೌಡರು | ಡಿಸಿ ವೆಂಕಟೇಶ್ ಶ್ಲಾಘನೆ
CHITRADURGA NEWS | 28 JUNE 2024
ಚಿತ್ರದುರ್ಗ: ರಾಜ್ಯ ರಾಜಧಾನಿ ಬೆಂಗಳೂರು ಕಟ್ಟಿದ ಕೀರ್ತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಬೆಳವಣಿಗೆಗೆ ಕಾರಣೀಭೂತರಾದವರು ನಾಡಪ್ರಭು ಕೆಂಪೇಗೌಡರು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಬಣ್ಣಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸರ್ಕಾರದ ವತಿಯಿಂದ 2017ರ ಜೂನ್ 27ರಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ನಾಡಿನಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಜ್ಯದ ರಾಜಧಾನಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು. ಇವರ ಪ್ರಭುತ್ವ ಹಾಗೂ ದೂರದೃಷ್ಟಿಯ ಯೋಜನೆಗಳಿಂದಾಗಿ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಇಂದು ದೊಡ್ಡಮಟ್ಟದಲ್ಲಿ ಬೆಳೆದಿದೆ ಎಂದು ಹೇಳಿದರು.
ರಾಜ್ಯದಲ್ಲಿ ತುಂಬಾ ಶ್ರೀಮಂತವಾಗಿ ಆಳ್ವಿಕೆ ಮಾಡಿದ ರಾಜಮನೆತನಗಳಲ್ಲಿ ಮೈಸೂರು ಒಡೆಯರು ಹಾಗೂ ವಿಜಯನಗರ ಸಂಸ್ಥಾನದವರು ಪ್ರಮುಖರು. ವಿಜಯನಗರ ಕೃಷ್ಣದೇವರಾಯರ ನಂತರ ಅವರ ಸಹೋದರ ಅಚ್ಯುತರಾಯ ಆಳ್ವಿಕೆಗೆ ಬಂದಾಗ ಸ್ಥಳೀಯ ಆಡಳಿತ ಸುಧಾರಣೆಗಾಗಿ ಅಚ್ಯುತರಾಯರು, 12 ಹೋಬಳಿಗಳಿಗಳನ್ನು ಒಳಗೊಂಡ ಹಳೆಯ ಬೆಂಗಳೂರನ್ನು 50 ಸಾವಿರ ವರಹಗಳಿಗೆ ಹಿರಿಯ ಕೆಂಪೇಗೌಡರಿಗೆ ಕೊಡುತ್ತಾರೆ.
ಇದನ್ನೂ ಓದಿ: ರೈತರಿಗೆ ಹಾಲಿನ ಪ್ರೋತ್ಸಾಹ ಧನ ಯಾವಾಗ ಕೊಡ್ತಿರಾ | ಬಿಜೆಪಿ ಮುಖಂಡ ವೆಂಕಟೇಶ್ ಯಾದವ್
ಅಂದಿನ ಆಡಳಿತ ವ್ಯವಸ್ಥೆಯಲ್ಲಿ ಕೇವಲ 30 ಪಗೋಡಗಳು ಆದಾಯ ಲಭಿಸುತ್ತಿತ್ತು. ಅಂತಹ ಸಂದರ್ಭದಲ್ಲಿ ಹಳೆಯ ಬೆಂಗಳೂರನ್ನು ಆಡಳಿತದ ವಶಕ್ಕೆ ಪಡೆದು ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣವಾಗಿ ಕಾವಲು ಗೋಪುರ ನಿರ್ಮಾಣ ಮಾಡಿ, ಕೋಟೆ ಕೊತ್ತಲುಗಳು, ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಬೃಹತ್ ಬೆಂಗಳೂರು ಬೆಳವಣಿಗೆಗೆ ನಾಡಪ್ರಭು ಕೆಂಪೇಗೌಡರು ಕಾರಣರಾಗಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಮೀರಸಾಬಿಹಳ್ಳಿ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, 16ನೇ ಶತಮಾನದ ಅತ್ಯುನ್ನತ ಮಾದರಿಯ ಯೋಜನಾಬದ್ಧ ಶೈಲಿ ನಗರವಾಗಿ ವಿಸ್ತರಣೆ ಮಾಡಿದ ಬೆಂಗಳೂರು ನಗರ ಸಂಸ್ಥಾಪಕ ಕೆಂಪೇಗೌಡರು. ನಾಡು ಮತ್ತು ಜನರ ಹಿತರಕ್ಷಣೆಗಾಗಿ ಕೋಟೆ ಮತ್ತು ಗುಡಿಗೋಪುರಗಳ ನಿರ್ಮಾಣದ ಜೊತೆಗೆ ನಗರ ಹಾಗೂ ಕೃಷಿ ನೀರಿನ ಸಂಪನ್ಮೂಲ ವ್ಯವಸ್ಥೆ ಮತ್ತು ವಾಣಿಜ್ಯ ನಗರವಾಗಿ ಅಭಿವೃದ್ಧಿ ಮಾಡುತ್ತಾ, ರಕ್ಷಣೆ ಮತ್ತು ಆಡಳಿತ ವ್ಯವಸ್ಥೆಯಿಂದ ಇಡೀ ನಾಡು ಶಾಂತಿ ಮತ್ತು ಸುಭೀಕ್ಷವಾಗಿರುವಂತೆ ಆಳ್ವಿಕೆ ಮಾಡಿ, ಜನಹಿತ ಕಾರ್ಯಗಳಿಂದ ಲೋಕ ಪ್ರಸಿದ್ದಿಯಾದ ಮಾನವತಾವಾದಿ ನಾಡಪ್ರಭು ಕೆಂಪೇಗೌಡ ಅಜರಾಮರವಾಗಿದ್ದಾರೆ.
ಇದನ್ನೂ ಓದಿ: ಸುರಕ್ಷತಾ ನಿಯಮ ಪಾಲಿಸಿ ಗೃಹ ಬಳಕೆ ವಿದ್ಯುತ್ ಅವಘಡ ತಪ್ಪಿಸಿ
ಕೆಂಪೇಗೌಡರ ಶೌರ್ಯ, ತ್ಯಾಗ, ಅಭಿವೃದ್ಧಿ ಮತ್ತು ಜೀವನ-ಜೀವನಕ್ಕಿಂತ ನಾಡು ಮತ್ತು ಜನರ ರಕ್ಷಣೆ ಶ್ರೇಷ್ಠ ಕಾರ್ಯ ಎಂದು ಸಾರಿದ ಇಂತಹ ದಾರ್ಶನಿಕರ ಆಶಯ ಪ್ರತಿಯೊಬ್ಬರು ಪಾಲಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಡಾ.ವೀರಣ್ಣ ಮಾತನಾಡಿ, ಮಹನೀಯರ ಜಯಂತಿಗಳು ಕೇವಲ ಜಯಂತಿಗಳಿಗೆ ಸೀಮಿತವಾಗದೆ, ಅವರ ದೂರದೃಷ್ಠಿಯ ಕನಸುಗಳು ನಮ್ಮೆಲ್ಲರಿಗೂ ಅನುಕರಣೀಯವಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆಂಪೇಗೌಡ ಜಯಂತಿ ಪ್ರಯುಕ್ತ ಕೆಂಪೇಗೌಡರ ಜೀವನ, ಸಾಧನೆ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಆರೋಗ್ಯ ಇಲಾಖೆ | ಲಾರ್ವಾ ಸಮೀಕ್ಷೆಗೆ ಸ್ವಯಂಸೇವಕರ ಆಯ್ಕೆಗೆ ಅರ್ಜಿ ಆಹ್ವಾನ
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ತಹಶೀಲ್ದಾರ್ ಡಾ.ನಾಗವೇಣಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್, ಕಾರ್ಯದರ್ಶಿ ಎಸ್.ಜಗನ್ನಾಥ್, ಗೌರವಾಧ್ಯಕ್ಷ ಪ್ರೊ.ಎನ್.ಈರಣ್ಣ, ನಿರ್ದೇಶಕರಾದ ಹನುಮಂತಪ್ಪ, ದ್ಯಾಮಪ್ಪ, ಪರಮೇಶ್ವರ್, ವಿನಯ್, ಲೋಕೇಶ್, ಚಿದಾನಂದ, ನಗರಸಭೆ ವ್ಯವಸ್ಥಾಪಕಿ ಮಂಜುಳಾ ಸೇರಿದಂತೆ ಮತ್ತಿತರರು ಇದ್ದರು.