Connect with us

    ಸಾಹಿತಿ ಬಿ.ಎಲ್‌.ವೇಣು ಅವರಿಗೆ ಸಂದ ಮದಕರಿ ನಾಯಕ ಪ್ರಶಸ್ತಿ ಗೌರವ | ರಾಜನಹಳ್ಳಿ ವಾಲ್ಮೀಕಿ ಜಾತ್ರೆಗೆ ಅಂತಿಮ ಸಿದ್ಧತೆ

    ಮುಖ್ಯ ಸುದ್ದಿ

    ಸಾಹಿತಿ ಬಿ.ಎಲ್‌.ವೇಣು ಅವರಿಗೆ ಸಂದ ಮದಕರಿ ನಾಯಕ ಪ್ರಶಸ್ತಿ ಗೌರವ | ರಾಜನಹಳ್ಳಿ ವಾಲ್ಮೀಕಿ ಜಾತ್ರೆಗೆ ಅಂತಿಮ ಸಿದ್ಧತೆ

    CHITRADURGA NEWS | 07 FEBRUARY 2024
    ಚಿತ್ರದುರ್ಗ: ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠ ನೀಡುವ ಮದಕರಿ ನಾಯಕ ಪ್ರಶಸ್ತಿಗೆ ಕತೆಗಾರರಾಗಿ ಮತ್ತು ಚಲನಚಿತ್ರ ಸಂಭಾಷಣಕಾರರಾಗಿ ಪ್ರಸಿದ್ಧಿ ಪಡೆದ ಸಾಹಿತಿ ಬಿ.ಎಲ್.ವೇಣು ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿಗೆ ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟಿಮನಿ ಆಯ್ಮೆಯಾಗಿದ್ದಾರೆ.

    ಪ್ರಶಸ್ತಿಗಳು ತಲಾ ₹ 1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿವೆ. ಫೆ.9 ರಂದು ಮಧ್ಯಾಹ್ನ 12.30ಕ್ಕೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ ಜನ ಜಾಗೃತಿ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದ್ದಾರೆ.

    ಇದನ್ನೂ ಓದಿ: ಚಲನಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಬಿ.ಎಲ್‌.ವೇಣು | ಅಭಿಮಾನಿಗಳ ಮನದಲ್ಲಿ ಸಂತಸ

    ಫೆ. 8 ಮತ್ತು 9ರಂದು ನಡೆಯುವ 6ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣ ಸಿದ್ಧಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಹಲವು ಸಚಿವರು, ಮಾಜಿ ಮುಖ್ಯಮಂತ್ರಿಗಳು, ಶಾಸಕರು, ನಾಡಿನ ವಿವಿಧ ಮಠಾಧೀಶರು, ಚಿಂತಕರು, ಸಾಹಿತಿಗಳು, ಲೇಖಕರು, ನಟರು ಎರಡು ದಿನಗಳ ಮಹೋತ್ಸವದಲ್ಲಿ ಭಾಗವಹಿಸುವರು.

    ಫೆ.8ರಂದು ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಿಗ್ಗೆ 7ಕ್ಕೆ ರಾಜನಹಳ್ಳಿ ಗ್ರಾಮದಿಂದ ಶ್ರೀಮಠದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ನಂತರ ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಮ್ಮ ಯಲ್ಲಪ್ಪ, ಸದಸ್ಯರು, ಗ್ರಾಮದ ಹಿರಿಯರು ಧ್ವಜಾರೋಹಣ ನೆರೆವೇರಿಸುವರು. ಸಚಿವ, ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ, ಸಮಿತಿ ಸಂಚಾಲಕ ಬಿ.ಶಿವಪ್ಪ, ಗುರುಪೀಠದ ಆಡಳಿತಾಧಿಕಾರಿ ಟಿ.ಓಬಳಪ್ಪ ಉಪಸ್ಥಿತರಿರುವರು.

    ಇದನ್ನೂ ಓದಿ: ಸಂಸದರ ಕಚೇರಿಗೆ ತಲೆಯಿಟ್ಟು ಮಲಗಿದ ರೈತರು

    8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ, 9.30ಕ್ಕೆ ಉದ್ಯೋಗ ಮೇಳ, 10.30ಕ್ಕೆ ಕೃಷಿ ವಸ್ತು ಪ್ರದರ್ಶನ ಉದ್ಘಾಟನೆ ನಡೆಯಲಿದೆ. ನಂತರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30ರ ವರೆಗೆ ಮಹಿಳಾ ಗೋಷ್ಠಿ, ಸಾಧಕ ಮಹಿಳೆಯರಿಗೆ ಗೌರವ ಸಮರ್ಪಣೆ, ಮಧ್ಯಾಹ್ನ 2.30ರಿಂದ ಸಂಜೆ 5.30ರ ವರೆಗೆ ನೌಕರರ ಗೋಷ್ಠಿ, ಸಂಜೆ 6ರಿಂದ 8.30ರ ವರೆಗೆ ‘ಎಸ್‌ಸಿ ಮತ್ತು ಎಸ್‌ಟಿ ಒಂದಾಗಬೇಕು ಏಕೆ’? ಕುರಿತು ಸಂಘಟನಾ ಗೋಷ್ಠಿ, ರಾತ್ರಿ 8.30ರಿಂದ ಕರಪಾಲ ಮೇಳ ಜಾನಪದ ನೃತ್ಯ, ರಾತ್ರಿ 10.30ರಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ನಡೆಯಲಿದೆ. ಫೆ.9ರಂದು ಬೆಳಿಗ್ಗೆ 6ರಿಂದ 7ರ ವರೆಗೆ ಸ್ವಚ್ಛತಾ ಕಾರ್ಯದ ನಂತರ ಬೆಳಿಗ್ಗೆ 9ಕ್ಕೆ 63 ಅಡಿ ಎತ್ತರದ ಭವ್ಯ ತೇರಿನ ರಥೋತ್ಸವ, ಬೆಳಿಗ್ಗೆ 9.30ರಿಂದ ನಡೆಯುವ ಧರ್ಮ ಸಭೆಯಲ್ಲಿ ನಾಡಿನ ವಿವಿಧ ಮಠಾಧೀಶರು ಭಾಗವಹಿಸುವರು. ನಂತರ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದೆ.

    ಮಧ್ಯಾಹ್ನ 12.30ರಿಂದ ನಡೆಯುವ ಜನ ಜಾಗೃತಿ ಜಾತ್ರಾ ಮಹೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಾಲಿ, ಮಾಜಿ ಸಚಿವರು, ಸಂಸದರು, ಶಾಸಕರು, ಮುಖಂಡರು ಭಾಗವಹಿಸುವರು.

    ಅನ್ನ ದಾಸೋಹಕ್ಕಾಗಿ 500 ಜನ ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. 100ಕ್ಕೂ ಹೆಚ್ಚು ಊಟದ ಕೌಂಟರ್ ಸ್ಥಾಪಿಸಲಾಗುತ್ತಿದೆ. ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಭಾಗಗಳಿಂದ ಜನರು ಜಾತ್ರೆಗೆ ಆಗಮಿಸುತ್ತಿದ್ದಾರೆ.

    ಬಿ.ಎಲ್. ವೇಣು ಕಿರು ಪರಿಚಯ: ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ.

    ವೇಣು ಚಿತ್ರದುರ್ಗದಲ್ಲಿ 1945ರ ಮೇ 27ರಂದು ಜನಿಸಿದರು. ತಂದೆ ವೃತ್ತಿ ರಂಗಭೂಮಿ ನಟರಾಗಿದ್ದ ಲಕ್ಷ್ಮಯ್ಯ. ತಾಯಿ ಸುಶೀಲಮ್ಮ ಹಾರ್ಮೋನಿಯಂ ವಾದಕಿಯಾಗಿದ್ದರು. ವೇಣು ಅವರಿಗೆ ಪ್ರೈಮರಿ ಶಾಲೆಯಲ್ಲಿದ್ದಾಗಲೇ ನಾಟಕದ ಬಗ್ಗೆ ಆಸ್ಥೆ ಮೂಡಿತು. ದುರ್ಗಕ್ಕೆ ಬಂದ ದ ಕಂಪನಿ ನಾಟಕಗಳನ್ನು ನೋಡಿ ಗೆಳೆಯರ ಜೊತೆಗೂಡಿ ತಾವೂ ನಾಟಕ ಆಡುತ್ತಿದ್ದರು. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಮಾಸ್ಟರ್ ಹಿರಣ್ಣಯ್ಯನವರ ಕಂಪನಿ ನಾಟಕದಲ್ಲಿ ಬಾಲ ಕಲಾವಿದನ ಪಾತ್ರ ವಹಿಸಿದ್ದರು.

    ಎಸ್‌.ಎಸ್‌.ಎಲ್‌.ಸಿ ಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿವೇತನದಿಂದ ಬಿ.ಎಸ್ಸಿ. ಮುಗಿಸಿ ನಂತರ ಪಿಡಬ್ಲ್ಯೂಡಿ ಗುತ್ತಿಗೆದಾರರ ಕೈ ಕೆಳಗೆ ಮೇಸ್ತ್ರಿಯಾಗಿ, ಚಿತ್ರದುರ್ಗ ಕಾನೂನು ಕಾಲೇಜಿನಲ್ಲಿ ಗುಮಾಸ್ತರಾಗಿ, ಕಾಲೇಜು ಹುಡುಗ ಹುಡುಗಿಯರಲ್ಲಿ ಹಾಡು ಬರುವವರ ದಂಡುಕಟ್ಟಿ ಉಮಾವಾದ್ಯಗೋಷ್ಠಿ ನಿರ್ವಾಹಕರಾಗಿ ಹೀಗೆ ಹಲವು ವೃತ್ತಿ ಮಾಡಿದರು. ಕೆ.ಪಿ.ಎಸ್‌.ಸಿ. ಪರೀಕ್ಷೆಗೆ ಕುಳಿತು ಗುಲಬರ್ಗಾ ಜಿಲ್ಲಾ ಆಸ್ಪತ್ರೆಯಲ್ಲಿ ಎರಡನೆಯ ದರ್ಜೆಯ ಗುಮಾಸ್ತನ ಕೆಲಸ ಗಳಿಸಿದರು.

    ವೇಣು ತಾವು ಸಾಹಿತ್ಯ ಓದಿ ಪ್ರೇರಿತರಾಗಿ ಬರೆದ ಕಥೆಗಳು ಜನಪ್ರಗತಿ ಪತ್ರಿಕೆಯಲ್ಲಿ ಪ್ರಕಟಗೊಂಡವು. ಮುಂದೆ ಸುಧಾ, ಮಯೂರ, ಪ್ರಜಾವಾಣಿ, ಕನ್ನಡಪ್ರಭ, ಪತ್ರಿಕೆಗಳಿಗೆ ಸಣ್ಣ ಕತೆಗಳನ್ನು ಬರೆದರು. ‘ಪ್ರೇಮ ಮದುವೆ ಮತ್ತು ಶೀಲ’ ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡು ವಿಶೇಷ ಚರ್ಚೆಗೆ ನಾಂದಿ ಹಾಡಿತು. ಬಂಡಾಯದ ಎಳೆಯ ‘ಲಿಂಗನೆಟ್ಟ ಪ್ರಸಂಗ’ (1978), ‘ಬೆತ್ತಲೆ ಸೇವೆ’ ಕಾದಂಬರಿ (1979)‘ಸುಡುಗಾಡು ಸಿದ್ಧನ ಪ್ರಸಂಗ’ ಕಥೆಗಳು.

    ಪ್ರಜಾಮತ, ಪ್ರಜಾವಾಣಿಗಳಲ್ಲಿ ಬಹುಮಾನ ಪಡೆದವು. ಬೆಲ್ಚಿಯ ನಾರಾಯಣ ಪುರದಲ್ಲಿ ಸವರ್ಣೀಯರು ದಲಿತರನ್ನು ಜೀವಂತವಾಗಿ ಸುಟ್ಟ ವರದಿಯನ್ನಾಧರಿಸಿ ಬರೆದ ‘ಅತಂತ್ರರು’ ಕಾದಂಬರಿಗೆ ಸುಧಾ ಪತ್ರಿಕೆಯ ಮೊದಲ ಬಹುಮಾನ (1982) ಸಂದಿದ್ದಲ್ಲದೆ ಧಾರಾವಾಹಿಯಾಗಿ ಪ್ರಕಟಗೊಂಡಾಗ ವೇಣುರವರ ಸಾಹಿತ್ಯ ಸೃಷ್ಟಿಯ ಬಗ್ಗೆ ಸಾಹಿತ್ಯಾಸಕ್ತರು ಗಮನಹರಿಸಿದರು.

    ಕನ್ನಡ ಪ್ರಭದಲ್ಲಿ ಪ್ರಕಟಗೊಂಡ ‘ದೊಡ್ಡಮನೆ’ ಕಥೆಯಾಧರಿಸಿ ‘ದೊಡ್ಡಮನೆ ಎಸ್ಟೇಟ್‌’ ಚಲನಚಿತ್ರವಾಯಿತು. ಸಿದ್ಧಲಿಂಗಯ್ಯನವರ ನಿರ್ದೇಶನದಲ್ಲಿ ‘ಪರಾಜಿತ’ ಕಾದಂಬರಿ ಚಲನಚಿತ್ರವಾಗಿ ಬಿಡುಗಡೆಯಾಗಿ ಶತದಿನೋತ್ಸವ ಆಚರಿಸಿತು. ಈ ಮಧ್ಯೆ ಚಿತ್ರದುರ್ಗದ ಇತಿಹಾಸದ ಮದಕರಿನಾಯಕ ಕಾದಂಬರಿ ಬರೆದು ವಾದವಿವಾದಗಳಾದರೂ ಸಮರ್ಥವಾಗಿ ಉತ್ತರಿಸಿದರು. ‘ಪ್ರೇಮಪರ್ವ’ ಕಾದಂಬರಿಯು ಚಲನಚಿತ್ರವಾಗಿ ಲವ್‌ಸ್ಟೋರಿಗಳ ಟ್ರೆಂಡ್‌ಗೆ ನಾಂದಿ ಹಾಡಿತು. ಇದೇ ಚಲನಚಿತ್ರವು ತಮಿಳಿನಲ್ಲಿ ‘ಪೂವಿಳಂಗು’ ತೆಲುಗಿನಲ್ಲಿ ‘ವಾಲಕ್ಕೋಸಿ’ ಮತ್ತು ಹಿಂದಿಯಲ್ಲಿ ‘ಜೀನಾ ಮರ್ನಾ ತೇರೇಸಂಗ್‌’ ಆಗಿ ಜಯಭೇರಿ ಬಾರಿಸಿತು. ‘ಅಮೃತಘಳಿಗೆ’ ಚಲನಚಿತ್ರಕ್ಕೆ ಸಂಭಾಷಣೆ ಬರೆಯಲು ಪುಟ್ಟಣ್ಣ ಕಣಗಾಲರು ಆಹ್ವಾನಿಸಿದರು. ಹೀಗೆ ಚಲನಚಿತ್ರಗಳಿಗೆ ಸಂಭಾಷಣೆ, ಕಾದಂಬರಿಗಳ ರಚನೆಯಲ್ಲಿ ತೊಡಗಿದರು.

    ತರಂಗ ವಾರಪತ್ರಿಕೆಯಲ್ಲಿ ‘ಪ್ರೀತಿವಾತ್ಸಲ್ಯ’ ಎಂಬ ಕಾದಂಬರಿ ಧಾರಾವಾಹಿಯಾಗಿ ಮೂಡಿಬಂತು. ಚಲನಚಿತ್ರಗಳಿಗೆ ಸಂಭಾಷಣೆ, ಚಿತ್ರಕತೆ ಬರೆದಂತೆಲ್ಲ ಅಲ್ಲಿನ ಬಾಂಧವ್ಯ ವೃದ್ಧಿಸುತ್ತಾ ಬಂತು. ಭಾರ್ಗವ ನಿರ್ದೇಶಿಸಿದ, ವಿಷ್ಣುವರ್ಧನ್‌ ನಾಯಕ ನಟರಾಗಿ ಅಭಿನಯಿಸಿದ ಜನನಾಯಕ, ಕೃಷ್ಣರುಕ್ಮಿಣಿ ಚಿತ್ರಗಳಿಗೂ ಸಂಭಾಷಣೆ ಬರೆದು ಅವು ಯಶಸ್ವಿ ಚಿತ್ರಗಳೆನಿಸಿದವು. ವೇಣು ಅವರು ಸುಮಾರು 70 ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.

    ವೇಣು ಅವರು ಸಾಹಿತ್ಯ ಕ್ಷೇತ್ರದಲ್ಲಿ, ಚಲನಚಿತ್ರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಿದ್ದಂತೆ ಒಮ್ಮೆ ಅಪಘಾತಕ್ಕೀಡಾಗಿ ಬಲಗೈ ಮುರಿದುಕೊಂಡು ಬರವಣಿಗೆಯೇ ಸಂಪೂರ್ಣ ನಿಂತೇ ಹೋಯಿತೇನೋ ಎಂಬ ಅಧೀರತೆ ಮನಸ್ಸಿಗೆ ಬಂದರೂ ಧೃತಿಗೆಡದೆ ಎಡಗೈಯಲ್ಲೇ ಬರೆಯುವುದನ್ನು ರೂಢಿಸಿಕೊಂಡು ಪತ್ರಿಕೆಗಳಿಗೆ ಬರೆಯತೊಡಗಿದರು. ಚೇತರಿಸಿಕೊಳ್ಳುತ್ತಿರುವಾಗಲೇ ಬೃಹನ್ಮಠದ ಮೂಲಪುರುಷರ ಬಗ್ಗೆ ಬರೆದ ಐತಿಹಾಸಿಕ ಕಾದಂಬರಿ ‘ಕ್ರಾಂತಿಯೋಗಿ ಮರುಳ ಸಿದ್ಧ’. ಕಷ್ಟಗಳು ಎದುರಾದಾಗಲೆಲ್ಲ ಧೃತಿಗೆಡದೆ ಬರೆಯತೊಡಗಿದರು.

    ವೇಣು ಅವರ ಕಥಾಸಂಕಲನಗಳಲ್ಲಿ ಬಣ್ಣಗಳು, ದೊಡ್ಡಮನೆ ಎಸ್ಟೇಟ್‌, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ ಮತ್ತು ಬಣ್ಣದ ಗೊಂಬಿ ಸೇರಿವೆ.‍ ನಾಟಕಗಳಲ್ಲಿ ಯಮಲೋಕದಲ್ಲಿ ಮಾನವ (ನಗೆನಾಟಕ), ಭೂಲೋಕಕ್ಕೆ ಬಂದ ಬಸವಣ್ಣ, ರಾಜಾ ವೀರ ಗಂಡುಗಲಿ ಮದಕರಿನಾಯಕ, ಹೋರಾಟ (ಏಡ್ಸ್‌ ಬಗ್ಗೆ) ಮುಂತಾದವು ಇವೆ. ಮಿನಿಕಾದಂಬರಿಗಳು ಗುಹೆ ಸೇರಿದವರು (ಮಕ್ಕಳಿಗಾಗಿ), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ ಮೊದಲಾದವು.

    ಕಾದಂಬರಿಗಳಲ್ಲಿ ಪರಾಜಿತ, ಪ್ರೇಮಪರ್ವ, ಅಜೇಯ, ಮೋಬಳ್ಳಿಯೋರ ಬೆತ್ತಲೆಸೇವೆ, ಅತಂತ್ರರು ಮುಂತಾದ ಸುಮಾರು 30 ಕೃತಿಗಳಿವೆ. ಇವುಗಳಲ್ಲಿ ಗಂಡುಗಲಿ ಮದಕರಿನಾಯಕ, ರಾಜಾಬಿಚ್ಚುಕತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ಧ, ಹೆಬ್ಬುಲಿ ಹಿರೇಮದಕರಿನಾಯಕ ಮುಂತಾದ 5 ಐತಿಹಾಸಿಕ ಕಾದಂಬರಿಗಳೂ ಸೇರಿ 50 ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.

    ವೇಣು ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿಗಳಾದ ರನ್ನ ಸಾಹಿತ್ಯ ಪ್ರಶಸ್ತಿ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಚಿತ್ರದುರ್ಗದ ಬೃಹನ್ಮಠದಿಂದ, ಸಿರಿಗೆರೆ ಶ್ರೀ ಗಳಿಂದ ಸನ್ಮಾನ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಸಂದಿವೆ.

    ಅಪರಂಜಿ ಚಿತ್ರದ ಸಂಭಾಷಣೆಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ, ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಮತ್ತು ಅನೇಕ ಚಿತ್ರಗಳಿಗೆ ಚಿತ್ರಮಾಧ್ಯಮ ಲೋಕದ ಹಲವು ಪುರಸ್ಕಾರಗಳು ಸಂದಿವೆ. ವೇಣು ಅವರಿಗೆ 2009ರಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ‘ಚಿನ್ಮೂಲಾದ್ರಿಸಿರಿ’. ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top