ಮುಖ್ಯ ಸುದ್ದಿ
ಲೋಕಸಭೆಗೆ ಮೊದಲೇ ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆ: ಸಚಿವ ಮಧು ಬಂಗಾರಪ್ಪ
ಚಿತ್ರದುರ್ಗ ನ್ಯೂಸ್.ಕಾಂ: ಲೋಕಸಭಾ ಚುನಾವಣೆಗೆ ಮೊದಲೇ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಎದುರಾಗುವ ಸಾಧ್ಯತೆ ಇದ್ದು, ಕಾರ್ಯಕರ್ತರು ಸಜ್ಜಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ವೇಳೆ, ಕಾರ್ಯಕರ್ತರು-ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿದೆ ಎಂದರು.
ಮುಂದಿನ ದಿನಗಳಲಿ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಗಳಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಿದ್ಧರಾಗಬೇಕು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಬಳಿ ರೈತರಿಗಾಗಿ ಅಂಬಿ ಪುತ್ರನ ಪ್ರಾರ್ಥನೆ ಏನು ಗೊತ್ತಾ..
ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನೆ ಬಹಳ ಮುಖ್ಯ. ಬರೀ ಹೋರಾಟಕ್ಕೆ ಸೀಮಿತವಾದರೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಮ್ಮ ಸರ್ಕಾರ ಸಾಧನೆಗಳನ್ನು ಮನೆ ಮನೆಗಳಿಗೆ ಮುಟ್ಟಿಸಬೇಕು. ಅಲ್ಪಾವಧಿಯಲ್ಲೇ ಗ್ಯಾರೆಂಟಿಗಳನ್ನು ಜಾರಿ ಮಾಡುವ ಮೂಲಕ ನಮ್ಮ ಸರ್ಕಾರ ಜನಪರ ಹೆಜ್ಜೆ ಇಟ್ಟಿದೆ ಎಂದರು.
43 ಸಾವಿರ ಅತಿಥಿ ಶಿಕ್ಷಕರ ನೇಮಕ:
ರಾಜ್ಯದಲ್ಲಿ ಶಿಕ್ಷಕರ ಕೊರತೆ ಇರುವುದನ್ನು ಗಮನಿಸಿ ಖಾಯಾಂ ಶಿಕ್ಷಕರ ಬದಲು 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. 10.500 ಶಿಕ್ಷಕರು ಆದೇಶಕ್ಕಾಗಿ ಕಾಯುತ್ತಿದ್ದಾರೆ. ಇದಕ್ಕೆ ಕಾನೂನು ತೊಡಕು ಇರುವುದರಿಂದ ನ್ಯಾಯಾಲಯದ ಆದೇಶ ಕಾಯುತ್ತಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದು 125 ದಿನಗಳಲ್ಲಿ ಶಿಕ್ಷಣ ಇಲಾಖೆಗೆ ಸಂಬಂದಿಸಿದಂತೆ ಸಾಕಷ್ಟು ಬದಲಾವಣೆ ತರಲಾಗಿದೆ. ಪಠ್ಯ ಪರಿಷ್ಕರಣೆ, ಮಕ್ಕಳಿಗೆ ಮೂರು ಸಲ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿರುವುದನ್ನು ರಾಜ್ಯದ ಜನತೆ ಸ್ವಾಗತಿಸಿದ್ದಾರೆ ಎಂದರು.
ಕಾವೇರಿ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು:
ಕಾವೇರಿ ನೀರಿನ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ವಾಸ್ತವ ಸ್ಥಿತಿಯನ್ನು ಅರಿತು ಸಮಸ್ಯೆ ಬಗೆಹರಿಸಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಪರಿಸ್ಥಿತಿ ಬೇರೆ, ಇಂದಿನ ಪರಿಸ್ಥಿತಿಯೇ ಬೇರೆಯಾಗಿದೆ. ಆಗ ಯಾವುದೇ ನ್ಯಾಯ ಮಂಡಳಿಗಳು ಇರಲಿಲ್ಲ. ನ್ಯಾಯಾಲಯಕ್ಕೆ ಹೋಗುವವರು ಇರಲಿಲ್ಲ. ಆದರೆ ಈಗ ಮಂಡಳಿ ಇದೆ ಸ್ವಲ್ಪ ವ್ಯತ್ಯಾಸವಾದರೂ ನ್ಯಾಯಾಲಯದ ಮೊರೆ ಹೋಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ವಾಹನ ಮಾಲಿಕರೇ ಈ ಸುದ್ದಿ ತಪ್ಪದೇ ಓದಿ: ನಿರ್ಲಕ್ಷಿಸಿದರೆ ದಂಡ ಖಚಿತ
ಎಲ್ಲ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಗೆ ಬೆಂಬಲ ನೀಡಿದ್ದೇವೆ. ಅವರು ಸಮಸ್ಯೆಯನ್ನು ಪರಿಹಾರ ಮಾಡುತ್ತಾರೆ ಎಂಬ ನಂಬಿಕೆ ಇದೆ. ಎಲ್ಲದಕ್ಕಿಂತ ಮುಖ್ಯವಾಗಿ ಜಲಾಶಯದಲ್ಲಿ ನೀರೇ ಇಲ್ಲದಿದ್ದಾಗ ನೀರು ಬಿಡಿ ಎನ್ನುವುದು ನ್ಯಾಯವಲ್ಲ. ಈ ವಿವಾದಕ್ಕೆ ಸಂಬಂದಿಸಿದಂತೆ ಎರಡೂ ರಾಜ್ಯಗಳ ನಡುವೆ ಕೇಂದ್ರ ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಮಾಜಿ ಸಚಿವ ಎಚ್.ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮತ್ತಿತರರಿದ್ದರು.