ಮುಖ್ಯ ಸುದ್ದಿ
ಲೋಕಸಭೆ ಚುನಾವಣೆ ಮತ ಎಣಿಕೆ | ಅಧಿಕ ಸಿಬ್ಬಂದಿ ನಿಯೋಜನೆಗೆ ಕಡಿವಾಣ
CHITRADURGA NEWS | 22 MAY 2024
ಚಿತ್ರದುರ್ಗ: ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯ ಜೂನ್ 4 ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದೆ. ಈ ವೇಳೆ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಭಂದಿ ನಿಯೋಜನೆಗೆ ಕಡಿವಾಣ ಹಾಕಲಾಗಿದೆ.
‘ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಭಂದಿಗಳು ಜಬಾಬ್ದಾರಿ ಅರಿತು ಪ್ರಜ್ಞಾಪೂರ್ವಕವಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ತಹಶೀಲ್ದಾರರು ತಮ್ಮ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳ ಮತಎಣಿಕೆ ಕಾರ್ಯಕ್ಕೆ ಅಗತ್ಯವಿರುವ ಸಿಬ್ಬಂದಿ ಮಾತ್ರ ಬಳಸಿಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚಿನ ಸಿಬ್ಭಂದಿ ನಿಯೋಜಿಸುವುದು ಸರಿಯಲ್ಲ’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಸಹಾಯಕ ಚುನಾವಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಎಲ್ಲಾ ನಿಯೋಜಿತ ಅಧಿಕಾರಿ, ಸಿಬ್ಬಂದಿ ಮತ ಎಣಿಕೆ ದಿನದಂದು ಸಕಾಲಕ್ಕೆ ಮತಎಣಿಕೆ ಕೇಂದ್ರಕ್ಕೆ ಆಗಮಿಸಬೇಕು. ತಮಗೆ ಸೂಚಿಸಿದ ಸ್ಥಳದಲ್ಲಿ ಹಾಜರಿದ್ದು ಅನವಶ್ಯಕ ಚರ್ಚೆಗಳಿಗೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಮಳೆ ಬಂದಾಗ ಈ ಆಸ್ಪತ್ರೆಯಲ್ಲಿ ಉಂಟು..ಕ್ಯಾಂಡಲ್ ಲೈಟ್ ಟ್ರೀಟ್‌ಮೆಂಟ್…!
‘ಪ್ರತಿ ತಾಲೂಕುವಾರು ಪ್ರತ್ಯೇಕವಾಗಿ ಮತಎಣಿಕೆ ನಡೆಯಲಿದೆ. ಪ್ರತಿ ಸುತ್ತಿನ ಮತಎಣಿಕೆ ದಾಖಲೆಗಳನ್ನು ನಿರ್ವಹಿಸಿ, ಸಕ್ಷಮ ಅಧಿಕಾರಿಗಳಿಗೆ ನೀಡಿ ಸಹಿ ಪಡೆದುಕೊಳ್ಳಬೇಕು. ಅದರ ಸಂಪೂರ್ಣ ಜವಾಬ್ದಾರಿಯನ್ನು ಆಯಾ ತಾಲೂಕುಗಳ ತಹಶೀಲ್ದಾರರು ನೋಡಿಕೊಳ್ಳಬೇಕು. ಈ ಎಲ್ಲಾ ಚುನಾವಣಾ ಕಾರ್ಯದ ಉಸ್ತುವಾರಿ ಹಾಗೂ ಅಗತ್ಯತೆಗಳನ್ನು ಚುನಾವಣಾ ವೀಕ್ಷಕರ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಗಮನಿಸಲಿದ್ದಾರೆ’ ಎಂದರು.
‘ಚುನಾವಣಾ ಕಾರ್ಯದ ವ್ಯವಸ್ಥಿತ ನಿರ್ವಹಣೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲು ಈಗಾಗಲೇ ದಿನಾಂಕ ನಿಗಧಿಪಡಿಸಲಾಗಿದೆ. ಮತ ಎಣಿಕೆ ಕಾರ್ಯವು ಯಾವುದೇ ಅಡತಡೆಗಳಿಲ್ಲದೆ ಸುಗಮವಾಗಿ ನಡೆಸಬೇಕು. ಎಲ್ಲಾ ವಿದ್ಯಾಮಾನಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸುವುದರ ಜೊತೆಗೆ ವ್ಯವಸ್ಥಿತವಾಗಿ ದಾಖಲೆಗಳನ್ನು ನಿರ್ವಹಿಸಲು ಗಣಕಯಂತ್ರ, ಮುದ್ರಣಯಂತ್ರ, ಝೆರಾಕ್ಸ್, ಇಂಟರ್‌ನೆಟ್ ಸಂಪರ್ಕ ಮತ್ತಿತರ ಎಲ್ಲಾ ಸೌಲಭ್ಯ ಕಲ್ಪಿಸಲು ಜವಾಬ್ದಾರಿಯುತ ಅಧಿಕಾರಿಗಳಿಗೆ ಹೊಣೆಗಾರಿಕೆ ವಹಿಸಲಾಗಿದೆ’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ತೆರೆದಿದೆ ಉದ್ಯೋಗಾವಕಾಶದ ಬಾಗಿಲು | 22ರಂದು ನೇರ ನೇಮಕಾತಿ ಸಂದರ್ಶನ
‘ಮತಎಣಿಕೆ ಕಾರ್ಯವನ್ನು ಸಕಾಲದಲ್ಲಿ ಆರಂಭಿಸಿ, ತ್ವರಿತವಾಗಿ ಫಲಿತಾಂಶ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡಲು ಅಗತ್ಯ ರಕ್ಷಣಾ ಸಿಬ್ಬಂದಿ ಸೇವೆಯನ್ನು ಬಳಸಿಕೊಳ್ಳಲಾಗುವುದು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತೀಕ್ ಇದ್ದರು.