Connect with us

    ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದ 18 ಜೋಡಿಗಳನ್ನು ಒಂದಾಗಿಸಿದ ಲೋಕ ಅದಾಲತ್

    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್

    ಮುಖ್ಯ ಸುದ್ದಿ

    ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದ 18 ಜೋಡಿಗಳನ್ನು ಒಂದಾಗಿಸಿದ ಲೋಕ ಅದಾಲತ್

    CHITRADURGA NEWS | 31 JANUARY 2024

    ಚಿತ್ರದುರ್ಗ: ಕಳೆದ ವರ್ಷ ಅಂದರೆ 2023ರಲ್ಲಿ ಜಿಲ್ಲೆಯಲ್ಲಿ ಒಟ್ಟು 4 ಮೆಗಾ ಲೋಕ ಅದಾಲತ್ ನಡೆದಿದ್ದು, ಇದರಲ್ಲಿ 3,44,852 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ.

    ವಿಶೇಷವಾಗಿ ವಿವಾಹ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದ 18 ಜೋಡಿಗಳನ್ನು ಲೋಕ ಅದಾಲತ್‍ನಲ್ಲಿ ಮತ್ತೆ ಒಂದು ಮಾಡಿರುವ ಅಪರೂಪದ ಪ್ರಸಂಗಗಳು ಜಿಲ್ಲೆಯ ನ್ಯಾಯಾಲಯದಲ್ಲಿ ನಡೆದಿವೆ.

    ಕಾನೂನು ಸೇವಾ ಪ್ರಾಧಿಕಾರದಿಂದ ನಡೆಯುತ್ತಿರುವ ಮೆಗಾ ಲೋಕ ಅದಾಲತ್‍ಗಳಿಂದಾಗಿ ಎಷ್ಟು ಜನರಿಗೆ ಉಪಯೋಗವಾಗಿದೆ ಎನ್ನುವುದನ್ನು ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಅಂಕಿ ಅಂಶ ಸಹಿತ ವಿವರಿಸಿದ್ದಾರೆ.

    ಇದನ್ನೂ ಓದಿ: ರಂಗೇರಿದ ಎಂಎಲ್ಸಿ ಚುನಾವಣಾ ಕಣ | ಕಚೇರಿ ತೆರೆದ ವೈ.ಎ.ನಾರಾಯಣಸ್ವಾಮಿ

    ಕಳೆದ ವರ್ಷ 2023ರಲ್ಲಿ ಒಟ್ಟು 4 ಮೆಗಾ ಲೋಕ್ ಅದಾಲತ್ ಮಾಡಿದ್ದು, ಅವುಗಳಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ಇದ್ದಂತಹ ಒಟ್ಟು 10,601 ಪ್ರಕರಣಗಳನ್ನು ಹಾಗೂ ವ್ಯಾಜ್ಯಪೂರ್ವ 3,34,251 ಪ್ರಕರಣಗಳನ್ನು ಸೇರಿಸಿ ಒಟ್ಟು 3,44,852 ಪ್ರಕರಣಗಳನ್ನು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಿರುತ್ತೇವೆ ಎಂದು ತಿಳಿಸಿದರು.

    ಚಿತ್ರದುರ್ಗ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ವಿಚ್ಛೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದ ಒಟ್ಟು 18 ಜೋಡಿಗಳನ್ನು ಪುನಃ ಒಂದು ಮಾಡಲಾಗಿದೆ.

    ಈ ವರ್ಷವೂ ಸಹ ಒಟ್ಟು 04 ಮೆಗಾ ಲೋಕ್ ಅದಾಲತ್‍ನ್ನು ಹಮ್ಮಿಕೊಂಡಿದ್ದು, ಮೊದಲನೆಯ ಲೋಕ ಅದಾಲತ್ 2024ರ ಮಾರ್ಚ್ 9 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿಯೂ ನಡೆಯಲಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದಾರೆ.

    ಇದನ್ನೂ ಓದಿ: ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ

    ಸದ್ಯ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ 21,687 ಸಿವಿಲ್ ಪ್ರಕರಣಗಳು, 18,376 ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಒಟ್ಟು 40,063 ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ ಸುಮಾರು 10 ಸಾವಿರ ಪ್ರಕರಣಗಳನ್ನು ರಾಜೀ ಮಾಡುವ ಗುರಿ ಹೊಂದಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಮಾಹಿತಿ ನೀಡಿದರು.

    ಲೋಕ್ ಅದಾಲತ್ ಅಥವಾ ಜನತಾ ನ್ಯಾಯಾಲಯದ ಮೂಲ ಉದ್ದೇಶವೇನೆಂದರೆ ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಸೌಹಾರ್ದಯುತ ಜೀವನವನ್ನು ನಡೆಸಲು ಸಾಧ್ಯವಾಗಬೇಕು. ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇ ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು. ಜನತಾ ನ್ಯಾಯಾಲಯದಲ್ಲಿ ಒಬ್ಬರು ಹಾಲಿ ನ್ಯಾಯಾಧೀಶರು ಹಾಗೂ ನುರಿತ ವಕೀಲರು ಸಂಧಾನಕಾರರಾಗಿ ಇರುತ್ತಾರೆ ಎಂದು ವಿವರಿಸಿದರು.

    ಈ ಜನತಾ ನ್ಯಾಯಾಲಯದಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಚೆಕ್ ಅಮಾನ್ಯ ಪ್ರಕರಣಗಳು ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗ ಪುನಃ ಸ್ಥಾಪಿಸಲ್ಪಡಬೇಕಾದ ಪ್ರಕರಣಗಳು, ಇತರೆ ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಪಟ್ಟಂತಹ ಪ್ರಕರಣಗಳು, ವಿದ್ಯುತ್ ನೀರಿನ ಶುಲ್ಕದ ಪ್ರಕರಣಗಳು ಹಾಗೂ ನಾನ್ ಕಾಂಪೌಂಡಬಲ್ ಸೇರಿದಂತೆ ಎಲ್ಲಾ ರೀತಿಯ ರಾಜಿ ಮಾಡಿಕೊಳ್ಳಬಹುದು ಎಂದರು.

    2024ರ ಮಾರ್ಚ್ 09 ರಂದು ನಡೆಯುತ್ತಿರುವ ಈ ಮೆಗಾ ಲೋಕ್ ಅದಾಲತ್‍ನಲ್ಲಿ ಸಾರ್ವಜನಿಕರು ಕಕ್ಷಿದಾರರು ಭಾಗವಹಿಸಿ ತಮ್ಮ ಅನೇಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಈ ಜನತಾ ನ್ಯಾಯಾಲಯದ ಉದ್ದೇಶವನ್ನು ಸಫಲಗೊಳಿಸಲಿ ಮತ್ತು ಇದು ಎಲ್ಲಾ ಜನರನ್ನು ತಲುಪಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಅಯೋಜಿಸಲಾಗಿದೆ.

    ಇದನ್ನೂ ಓದಿ: ವಸತಿ ಯೋಜನೆಗೆ 129 ಫಲಾನುಭವಿಗಳ ಆಯ್ಕೆ

    ಲೋಕ್ ಅದಾಲತ್‍ಗೆ ಸಂಬಂಧಿಸಿದಂತೆ ನಮ್ಮ ಇಮೇಲ್ dlsachitradurga1@gmail.com ಗೆ ಸಂಪರ್ಕಿಸಬಹುದು.

    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಕಚೇರಿ ದೂರವಾಣಿ ಸಂಖ್ಯೆ 08194-222322 ಕ್ಕೂ ಸಂಪರ್ಕಿಸಬಹುದು ಹಾಗೂ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ಇರುವ ಸದಸ್ಯ ಕಾರ್ಯದರ್ಶಿಗಳ ಕಚೇರಿಗೆ ಖುದ್ದಾಗಿ ಭೇಟಿ ಮಾಡಿ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

    ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top