ತಾಲೂಕು
ಎಮ್ಮೆಕರು ಮೇಲೆ ಚಿರತೆ ದಾಳಿ | ಮರಿಗಳೊಂದಿಗೆ ಅಡ್ಡಾಡುವ ಚಿರತೆ ಕಂಡು ಆತಂಕದಲ್ಲಿ ಗ್ರಾಮಸ್ಥರು
ಚಿತ್ರದುರ್ಗ ನ್ಯೂಸ್.ಕಾಂ:
ಸಂಜೆ ಮಬ್ಬುಗತ್ತಲಾಗುತ್ತಿದ್ದಂತೆ ಚಿರತೆಯೊಂದು ಎಮ್ಮೆ ಕರುವಿನ ಮೇಲೆ ದಾಳಿ ಮಾಡಿದೆ. ಎಮ್ಮೆಯ ಕಿರುಚಾಟ ಕೇಳಿ ಓಡಿ ಬಂದ ಜನರ ಗುಂಪು ಕಂಡು ಪರಾರಿಯಾಗಿದೆ.
ಹೊಸದುರ್ಗ ತಾಲೂಕಿನ ನಾಗರಕಟ್ಟೆ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಕಳೆದ ಹಲವು ದಿನಗಳಿಂದ ನಾಲ್ಕೈದು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇಂದು ಎಮ್ಮೆ ಕರುವಿನ ಮೇಲೆ ದಾಳಿ ನಡೆಸಿದೆ.
ಕಳೆದ 15 ದಿನಗಳಿಂದ ಈ ಭಾಗದಲ್ಲಿ ಆಗಾಗ್ಗೇ ಚಿರತೆ ಜನರ ಕಣ್ಣಿಗೆ ಬೀಳುತ್ತಲೇ ಇದೆ. ಇದರಿಂದ ಜನರು ಒಬ್ಬಂಟಿಯಾಗಿ ಹೊಲ, ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ.
ಇದನ್ನೂ ಓದಿ: ಬಸ್ಸಲ್ಲಿ ಬಂದಿಳಿದು, ಆಟೋ ಹತ್ತಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ
ಇಂದು ಒಂದು ಹೆಜ್ಜೆ ಮುಂದೆ ಬಂದು ಗ್ರಾಮದ ಸಮೀಪದಲ್ಲೇ ಎಮ್ಮೆಕರುವಿನ ಮೇಲೆ ದಾಳಿ ಮಾಡಿರುವುದು ಆತಂಕ ಹೆಚ್ಚಿಸಿದೆ.
ರಾತ್ರಿ ವೇಳೆ ವಿದ್ಯುತ್ ಕೊಟ್ಟಾಗ ನೀರು ಹಾಯಿಸಲು ರೈತರು ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಊರಿನಿಂದ ಹೊರಗೆ ಅಥವಾ ಅಂಚಿನಲ್ಲಿರುವ ಮನೆಗಳಲ್ಲಿ ಸಂಜೆಯಾಗುತ್ತಲೇ ಮನೆ ಸೇರಿ ಬಾಗಿಲು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಕ್ಷಣ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಈ ಬಗ್ಗೆ ಗಮನಹರಿಸಿ ಮರಿಯೊಂದಿಗೆ ಅಡ್ಡಾಡುತ್ತಿರುವ ಚಿರತೆಯನ್ನು ಹಿಡಿದು ಬೇರೆಡೆಗೆ ಸಾಗಿಸಲು ರೈತರು ಒತ್ತಾಯಿಸಿದ್ದಾರೆ.