ಮುಖ್ಯ ಸುದ್ದಿ
ಕಾಡುಗೊಲ್ಲರನ್ನು ಎಸ್ಟಿಗೆ ಸೇರ್ಪಡೆಗೊಳಿಸಿ; ಬಿ.ವೈ.ವಿಜಯೇಂದ್ರ ಅವರಿಗೆ ಮನವಿ
ಚಿತ್ರದುರ್ಗ ನ್ಯೂಸ್.ಕಾಂ
ಬುಡಕಟ್ಟು ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಕಾಡುಗೊಲ್ಲರ ನಿಯೋಗದ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬೆಂಗಳೂರಿನ ಬಿಜೆಪಿ ಪಕ್ಷದ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ ಮುಖಂಡರು, ಹಿಂದುಳಿದಿರುವ ಕಾಡುಗೊಲ್ಲ ಸಮುದಾಯ ಪರವಾಗಿ ಧ್ವನಿ ಎತ್ತುವಂತೆ ಮನವಿ ಮಾಡಿದರು.
ಈ ಹಿಂದೆ ಇದ್ದ ಸರ್ಕಾರ ಕಾಡುಗೊಲ್ಲರ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿತ್ತು. ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಸರ್ಕಾರದಿಂದ ಕಡತವನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ಕಾಡುಗೊಲ್ಲರ ಮೀಸಲಾತಿ ಪ್ರಸ್ತಾವನೆ ಕೇಂದ್ರ ಸರ್ಕಾರದಲ್ಲಿದ್ದು ಸಮುದಾಯದ ಅಭಿವೃದ್ಧಿಗೆ ಎಸ್ಟಿ ಮೀಸಲಾತಿ ನೀಡುವಂತೆ ತಿಳಿಸಿದರು.
ಮುಖಂಡರ ಮನವಿಯನ್ನು ಸ್ವೀಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿ, ‘ಕಾಡುಗೊಲ್ಲರ ಬಗ್ಗೆ ಪಕ್ಷದಲ್ಲಿ ಗಂಭೀರವಾಗಿ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.
ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಮುಖಂಡರಾದ ಶಂಕ್ರಪ್ಪ, ಬಸವರಾಜ್, ಸಣ್ಣ ಬಾಲಪ್ಪ, ಆರ್.ಕೆ ಶ್ರೀನಿವಾಸ್, ಆದರ್ಶ ಇದ್ದರು.