ಹಿರಿಯೂರು
PDO Suspended: ಜವನಗೊಂಡನಹಳ್ಳಿ ಪಿಡಿಓ ಸಿ.ಈಶ್ವರ್ ಅಮಾನತು | ಜಿಪಂ ಸಿಇಓ ಎಸ್.ಜೆ.ಸೋಮಶೇಖರ್ ಆದೇಶ
CHITRADURGA NEWS | 02 AUGUST 2024
ಹಿರಿಯೂರು: ತಾಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಸಿ.ಈಶ್ವರ್ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
2018-19 ರಿಂದ 2022-23ನೇ ಸಾಲಿನವರೆಗೆ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಎಲ್ಲ ಹಣಕಾಸು ಕಾಮಗಾರಿ, ಕಂದಾಯ ಲೆಕ್ಕ ಶೀರ್ಷಿಕಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಕೆ.ಎಚ್.ಶಶಿಕಾಂತ್ ಹಾಗೂ ಎಚ್.ಎಂ.ಭರತ್ ದೂರು ನೀಡಿದ್ದರು.
ಇದನ್ನೂ ಓದಿ: ಕರ್ತವ್ಯ ಲೋಪ | ಭರಮಸಾಗರ ಪಿಡಿಓ ಶ್ರೀದೇವಿ ಅಮಾನತು
ದೂರು ಆಧರಿಸಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಖುದ್ದು ಭೇಟಿ ನೀಡಿ ಪಂಚಾಯಿತಿಯ 5 ವರ್ಷಗಳ ಹಣಕಾಸು ಯೋಜನೆ, ಕಾಮಗಾರಿ ವಿವರಗಳನ್ನು ಹಾಜರುಪಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಈಶ್ವರ್ ಅವರಿಗೆ ಹಾಜರುಪಡಿಸಲು ಸೂಚಿಸಿದರೂ, ಸಲ್ಲಿಸಲು ವಿಫಲರಾಗಿದ್ದಾರೆ.
5 ವರ್ಷಗಳ ಅವಧಿಯಲ್ಲಿ ಬಿಡುಗಡೆಯಾದ ಹಣಕಾಸು, ಕಾಮಗಾರಿ, ಕಂದಾಯ ಲೆಕ್ಕ ಶೀರ್ಷಿಕೆ ಹಾಗೂ ಇತರೆ ಯೋಜನೆಗಳಡಿ ಬಿಡುಗಡೆಯಾದ ಅನುದಾನಕ್ಕೆ ಸಂಬ0ಧಿಸಿದ0ತೆ ಯಾವುದೇ ಲೆಕ್ಕಪತ್ರಗಳನ್ನು ತನಿಖೆಗೆ ಒದಗಿಸಿಲ್ಲ. ಈ ಬಗ್ಗೆ ಲಿಖಿತ ಹಾಗೂ ಮೌಕಿಕವಾಗಿ ಸೂಚಿಸಿದರೂ ಪ್ರಯೋಜನವಾಗಿಲ್ಲ. ಶೋಕಾಸ್ ನೊಟೀಸ್ ಕೂಡಾ ನೀಡಲಾಗಿದೆ.
ಇದನ್ನೂ ಓದಿ: ಕರ್ತೃ ಗದ್ದುಗೆಗೆ ಆ್ಯಕ್ಷನ್ ಪ್ರಿನ್ಸ್ ನಮನ | ಮುರುಘಾ ಮಠದಲ್ಲಿ ಅಭಿಮಾನಿಗಳ ದಂಡು
ಪಿಡಿಓ ಸಿ.ಈಶ್ವರ್ ಸೂಕ್ತ ಸಮಜಾಯಿಷಿ ನೀಡದ ಕಾರಣ ಮೇಲ್ಕಂಡ ದೂರುಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳಬೇಕಾದ ಅಗತ್ಯ ಇರುವುದರಿಂದ ಜಿಪಂ ಸಿಇಓ ಎಸ್.ಜೆ.ಸೋಮಶೇಖರ್ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
ಸದರಿಯವರು ಅಮಾನತು ಅವಧಿಯಲ್ಲಿ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ಅನ್ಯ ಉದ್ಯೋಗದಲ್ಲಿ ತೊಡಗುವಂತಿಲ್ಲ ಹಾಗೂ ನಿಯಮಾನುಸಾರ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಅಭಿಮಾನಿಗೆ ಸಮಾಧಾನ ಮಾಡಿದ ಧ್ರುವ ಸರ್ಜಾ | ಸೆಲ್ಫಿ ಕ್ಲಿಕ್..ಕ್ಲಿಕ್