ಮುಖ್ಯ ಸುದ್ದಿ
ಅಕ್ಷಯ ಫುಡ್‌ಪಾರ್ಕ್ ಉದ್ದಿಮೆದಾರರಿಗೆ ಲೀಸ್ ಅವಧಿ 10 ವರ್ಷ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿ: ಜಿಲ್ಲಾಧಿಕಾರಿ ದಿವ್ಯಪ್ರಭು
ಚಿತ್ರದುರ್ಗ ನ್ಯೂಸ್: ಹಿರಿಯೂರು ತಾಲೂಕಿನ ಹುಚ್ಚವ್ವನಹಳ್ಳಿ ಬಳಿಯಿರುವ ಅಕ್ಷಯ ಫುಡ್‌ಪಾರ್ಕ್ನಲ್ಲಿ ನಿವೇಶನಗಳನ್ನು ಸಬ್‌ಲೀಸ್ ಪಡೆದು ಈವರೆಗೆ ಉದ್ದಿಮೆ ಆರಂಭಿಸಲು ಸಾಧ್ಯವಾಗದಿರುವ ಗ್ರಾಹಕರಿಗೆ ಅನುಕೂಲವಾಗುವಂತೆ ಲೀಸ್ ಅವಧಿಯನ್ನು 10 ವರ್ಷಕ್ಕೆ ವಿಸ್ತರಣೆ ಮಾಡಿ ಕೆಐಎಡಿಬಿ ನಿಯಮಗಳಲ್ಲಿ ತಿದ್ದುಪಡಿ ಮಾಡಿಕೊಡುವಂತೆ ಮನವಿ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಸಿಂಗಲ್ ವಿಂಡೋ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫುಡ್‌ಪಾರ್ಕ್ನವರು ಮಾತ್ರ ತಮ್ಮ ಲೀಸ್ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿಕೊಂಡು, ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡದಿದ್ದರೆ ಜಿಲ್ಲೆಯಲ್ಲಿ ಉದ್ದಿಮೆಗಳು ಬೆಳೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಈ ಹಿನ್ನೆಲೆಯಲ್ಲಿ ಹತ್ತು ವರ್ಷಗಳಿಗೆ ಲೀಸ್ ಅವಧಿಯನ್ನು ವಿಸ್ತರಣೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಬಿ.ಆನಂದ್ ಮಾತನಾಡಿ, ಪಿಪಿಪಿ ಮಾದರಿಯಲ್ಲಿ ನಿರ್ಮಾಣವಾಗಿರುವ ಅಕ್ಷಯ ಫುಡ್ ಪಾರ್ಕ್ನಲ್ಲಿ 96 ನಿವೇಶನಗಳನ್ನು ಮಾಡಲಾಗಿದೆ. ಇದರಲ್ಲಿ ಈಗಾಗಲೇ 89 ನಿವೇಶನ ಹಂಚಿಕೆಯಾಗಿದ್ದು, ಇನ್ನೂ 06 ನಿವೇಶನಗಳ ಹಂಚಿಕೆ ಬಾಕಿಯಿದೆ. ಈಗಾಗಲೇ 14 ಉದ್ಯಮಗಳು ಪ್ರಾರಂಭವಾಗಿವೆ. ಹಂಚಿಕೆ ಆಗಿರುವ ನಿವೇಶನಗಳಲ್ಲಿ ಕೆಲವು ಉದ್ದಿಮೆದಾರರು, ಸಾಲ, ಬಂಡವಾಳ ಹೂಡಿಕೆ ಮತ್ತಿತರ ಕಾರಣಗಳಿಂದಾಗಿ ಇನ್ನೂ ಉದ್ಯಮ ಪ್ರಾರಂಭಿಸಿಲ್ಲ.
ಅಕ್ಷಯ ಫುಡ್‌ಪಾರ್ಕ್ ಅಧಿಕಾರಿಗಳಿಗೆ ನೀಡಲಾಗಿದ್ದ ಲೀಸ್ ಅವಧಿಯನ್ನು ಸರ್ಕಾರ ಈಗಾಗಲೆ 10 ವರ್ಷಗಳಿಗೆ ವಿಸ್ತರಿಸಿದೆ. ಆದರೆ ಉದ್ದಿಮೆದಾರರಿಗೆ ನಿಯಮಾನುಸಾರ 03 ವರ್ಷಗಳ ಅವಧಿಗೆ ಸಬ್‌ಲೀಸ್ ನೀಡಿರುವ ಅಕ್ಷಯ ಫುಡ್‌ಪಾರ್ಕ್ನವರು, ಇದನ್ನು ವಿಸ್ತರಿಸುತ್ತಿಲ್ಲ. ಸಾಲ ಪಡೆಯಲು ಎನ್‌ಒಸಿ ನೀಡುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ಹಣ ನೀಡಿ ಸಬ್‌ಲೀಸ್ ಪಡೆದಿರುವ ಉದ್ದಿಮೆದಾರರಿಗೆ ತೊಂದರೆಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆಐಎಡಿಬಿ ಅಧಿಕಾರಿ ಲಕ್ಷಿö್ಮÃಶ, ಈಗಾಗಲೆ ಲೀಸ್ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸಿ, ಸರ್ಕಾರದ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ, ಆದರೆ ಅಕ್ಷಯ ಫುಡ್ ಪಾರ್ಕ್ನವರು ಸ್ಪಂದಿಸುತ್ತಿಲ್ಲ ಎಂದರು.
ಅಕ್ಷಯ ಫುಡ್ ಪಾರ್ಕ್ನ ವ್ಯವಸ್ಥಾಪಕ ನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, ಕೆಐಎಡಿಬಿ ನಿಯಮಗಳನ್ವಯ 03 ವರ್ಷದೊಳಗೆ ಉದ್ಯಮ ಪ್ರಾರಂಭಿಸದ ಉದ್ದಿಮೆದಾರರಿಗೆ ಸಬ್‌ಲೀಸ್ ಅನ್ನು ಹೆಚ್ಚುವರಿಯಾಗಿ 01 ವರ್ಷ ಮಾತ್ರ ನೀಡಲು ಅವಕಾಶವಿದೆ. ಈ ಬಗ್ಗೆ ಕೆಐಎಡಿಬಿ ಸ್ಪಷ್ಟ ಆದೇಶ ಹೊರಡಿಸಿದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಭಾರತೀಯ ಮಹಿಳಾ ಅಂಧರ ಕ್ರಿಕೇಟ್ ತಂಡಕ್ಕೆ ನಾಯಕಿಯಾದಳು ಹಿರಿಯೂರಿನ ಮಗಳು ವರ್ಷಾ
ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರತಿಕ್ರಿಯಿಸಿ, ಅಕ್ಷಯ ಫುಡ್‌ಪಾರ್ಕ್ನವರು, ಒಡಂಬಡಿಕೆಗೆ ಅನುಗುಣವಾಗಿ ನಡೆದುಕೊಳ್ಳದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಗತ್ಯ ಮೂಲ ಸೌಕರ್ಯ ಒದಗಿಸದಿರುವುದು ಕೂಡ ಷರತ್ತುಗಳ ಉಲ್ಲಂಘನೆಯಾಗುತ್ತದೆ. ನೀವು ಮಾತ್ರ 1 ವರ್ಷಗಳಿಗೆ ಲೀಸ್ ಅವಧಿಯನ್ನು ವಿಸ್ತರಿಸಿಕೊಂಡಿದ್ದೀರಿ, ಅದೇ ರೀತಿ ಉದ್ದಿಮೆದಾರರಿಗೂ ಕೂಡ ಅನುಕೂಲ ಆಗಬೇಕಲ್ಲವೆ ಎಂದು ಪ್ರಶ್ನಿಸಿದರು.
ಒತ್ತುವರಿ ತೆರವು ಮಾಡಿಕೊಡಲು ತಾಕೀತು
ಅಕ್ಷಯ ಫುಡ್ ಪಾರ್ಕ್ನಲ್ಲಿ ತಮಗೆ ಹಂಚಿಕೆಯಾಗಿರುವ ನಿವೇಶನದಲ್ಲಿ ಇತರೆ ವ್ಯಕ್ತಿಗಳು ಶೆಡ್ ಮನೆ ಹಾಕಿಕೊಂಡಿದ್ದು, ಇದನ್ನು ತೆರವುಗೊಳಿಸಿಕೊಡುವಂತೆ ಹಲವು ಬಾರಿ ಕೋರಿದರೂ, ಫುಡ್ ಪಾರ್ಕ್ನ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಇದರಿಂದಾಗಿ ತಮಗೆ ಇಲ್ಲಿ ಉದ್ದಿಮೆ ಪ್ರಾರಂಭಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸಾಲ ಮಾಡಿ 12 ಲಕ್ಷ ರೂ. ಬಂಡವಾಳ ಹಾಕಿ, ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಉದ್ಯಮಿ ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಫುಡ್ ಪಾರ್ಕ್ನಲ್ಲಿನ ಯಾವುದೇ ಒತ್ತುವರಿ ತೆರವು ಕಾರ್ಯ ಅಕ್ಷಯ ಫುಡ್ ಪಾರ್ಕ್ಗೆ ಸಂಬAಧಿಸಿದ್ದಾಗಿದೆ. ಹೀಗಾಗಿ ಕೂಡಲೆ ತೆರವುಗೊಳಿಸಿಕೊಡುವಂತೆ ಸೂಚನೆ ನೀಡಿದರು.
ಚಳ್ಳಕೆರೆಯ ಬೊಮ್ಮಸಂದ್ರ ಕೈಗಾರಿಕಾ ವಸಾಹತುವಿನಲ್ಲಿ ಶ್ರೀ ಮಾರುತಿ ಎಕ್ಸ್ಪೋರ್ಟ್ ರೆಡಿಮೇಡ್ ಗಾರ್ಮೆಂಟ್ಸ್ ಕೈಗಾರಿಕಾ ಘಟಕದವರು ಉದ್ದಿಮೆ ಪ್ರಾರಂಭಿಸಲು ವಿದ್ಯುತ್ ಮತ್ತು ನೀರಿನ ಬೇಡಿಕೆ, ಪರಿಸರ ಮಾಲಿನ್ಯ ಇಲಾಖೆಯ ಸಮ್ಮತಿ ಇತ್ಯಾದಿಗಳ ಸೂಕ್ತತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿ ಯೋಜನೆ ಪ್ರಾರಂಭಕ್ಕೆ ಸಮಿತಿಯು ಒಪ್ಪಿಗೆ ಸೂಚಿಸಿತು.
ಮೊಳಕಾಲ್ಮೂರಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಸಮೀಕ್ಷೆ
ಮೊಳಕಾಲ್ಮೂರು ಪಟ್ಟಣದಲ್ಲಿ 15 ಸಾವಿರ ಜನಸಂಖ್ಯೆಯಿದ್ದು, ಸಾಕಷ್ಟು ಕೈಗಾರಿಕೆಗಳು ಇರುವುದರಿಂದ ಮೊಳಕಾಲ್ಮುರು ಪಟ್ಟಣದಲ್ಲಿ ಒಂದು ಕೈಗಾರಿಕಾ ಪ್ರದೇಶ ಸ್ಥಾಪಿಸುವಂತೆ ಮೊಳಕಾಲ್ಮುರು ನಾಗರಿಕ ಹಿತ ರಕ್ಷಣಾ ಸಮಿತಿ ಮನವಿ ಸಲ್ಲಿಸಿದ್ದು, ಮೊಳಕಾಲ್ಮುರು ಪಟ್ಟಣದಲ್ಲಿ ಕೈಗಾರಿಕೆ ಪ್ರದೇಶ ಸ್ಥಾಪಿಸಲು ನೀರು, ವಿದ್ಯುತ್, ಜಮೀನು, ಬೇಡಿಕೆ ಕುರಿತು ಜಂಟಿ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)