ಮುಖ್ಯ ಸುದ್ದಿ
ಮಾಡದಕೆರೆ-ಎಚ್.ಡಿ.ಪುರ ಭಾಗದಲ್ಲಿ ಹದ ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ವರದಿ ನೋಡಿ
ಚಿತ್ರದುರ್ಗ ನ್ಯೂಸ್.ಕಾಂ: ಈ ವರ್ಷ ಸರಿಯಾದ ಮಳೆಯಿಲ್ಲದೆ ಬರಗಾಲಕ್ಕೆ ಸಿಲುಕಿರುವ ರೈತರು ಆಗಾಗ ಅಕಾಲಿಕವಾಗಿ ಸುರಿಯುವ ಮಳೆಯನ್ನು ಜೀವ ಉಳಿಸುವ ಜೀವಧಾರೆಯಾಗಿ ನೋಡುತ್ತಿದ್ದಾರೆ.
ಕಳೆದ ವರ್ಷ ಹದವಾಗಿ ಸುರಿದು ಕೆರೆ, ಕಟ್ಟೆ ಭರ್ತಿ ಮಾಡಿದ್ದ ಮಳೆರಾಯ ಈ ವರ್ಷ ಎಲ್ಲವೂ ಬತ್ತಿ ಹೋದರೂ ಇತ್ತ ತಿರುಗಿ ನೋಡುತ್ತಿಲ್ಲ ಎನ್ನುತ್ತಿರುವ ರೈತರು, ಅಕಾಲಿಕವಾಗಿಯಾದರೂ ಆಗಾಗ ಸುರಿದು ಇಳೆ ತಂಪು ಮಾಡು, ದನ ಕರುಗಳಿಗೆ ಮೇವು, ನೀರಿಗಾದರೂ ಆಸರೆಯಾಗಲಿ ಎಂದು ಬೇಡುತ್ತಿದ್ದಾರೆ.
ಇದನ್ನೂ ಓದಿ: ರೈತರಿಗೆ ಶುಭಸುದ್ದಿ | 2 ತಿಂಗಳಲ್ಲಿ 6640 ಕೃಷಿ ಪಂಪ್‍ಸೆಟ್‍ಗಳ ಸಕ್ರಮ
ಬಹುತೇಕ ಎಲ್ಲ ಮಳೆಗಳು ಮುಗಿದು ಹೋಗಿದ್ದು, ಜನವರಿಯಲ್ಲಿ ಅಕಾಲಿಕವಾಗಿ ಸುರಿದ ಮಳೆ ಹೊಸದುರ್ಗ ತಾಲೂಕಿನ ಮಾಡದಕೆರೆಯಲ್ಲಿ ಹದವಾಗಿ ಸುರಿದಿದೆ.
ಹೊಸದುರ್ಗ ತಾಲೂಕಿನ ಮಾಡದಕೆರೆಯಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ 54 ಮಿ.ಮೀ ಮಳೆ ಸುರಿದಿದೆ.
ಈ ಭಾಗದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ 10-15 ದಿನಗಳ ಕಾಲ ನೀರಾವರಿ ರೈತರು ಬೋರ್‍ವೆಲ್ ಚಾಲು ಮಾಡದೇ ಅಂತರ್ಜಲವನ್ನು ಮುಂದಿನ ಬೇಸಿಗೆಗೆ ಕಾಪಿಟ್ಟುಕೊಳ್ಳಬಹುದು ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ.
ಉಳಿದಂತೆ ಜಿಲ್ಲೆಯ ಯಾವ ಊರಿನಲ್ಲಿ ಎಷ್ಟು ಮಳೆಯಾಗಿದೆ ಎಂದು ನೋಡುವುದಾದರೆ, ಹೊಸದುರ್ಗ ಪಟ್ಟಣದಲ್ಲಿ 17.6 ಮಿ.ಮೀ, ಬಾಗೂರಿನಲ್ಲಿ 8 ಮಿ.ಮೀ, ಶ್ರೀರಾಂಪುರದಲ್ಲಿ 23 ಮಿ.ಮೀ ಮಳೆಯಾಗಿದೆ. ಮತ್ತೋಡು ಭಾಗದಲ್ಲಿ ಮಳೆ ಆಗಿಲ್ಲ.
ಇನ್ನೂ ಹೊಳಲ್ಕೆರೆ ತಾಲೂಕಿನ ಹೊರಕೆರೆದೇವರಪುರದಲ್ಲಿ 34 ಮಿ.ಮೀ. ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಎರಡನೇ ಅತೀ ಹೆಚ್ಚು ಮಳೆಯಾಗಿದೆ.
ಇದನ್ನೂ ಓದಿ: ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ರೈಲ್ವೇ-ಹೆದ್ದಾರಿ ಪ್ರಗತಿ ಕುರಿತ ಸಭೆ
ಹೊಳಲ್ಕೆರೆ ಪಟ್ಟಣದಲ್ಲಿ 5.8 ಮಿ.ಮೀ, ಬಿ.ದುರ್ಗದಲ್ಲಿ 2 ಮಿ.ಮೀ, ತಾಳ್ಯದಲ್ಲಿ 2.4 ಮಿ.ಮೀ ಮಳೆಯಾದರೆ, ಚಿಕ್ಕಜಾಜೂರು ಭಾಗದಲ್ಲಿ ಮಳೆಯಾಗಿಲ್ಲ.
ಚಿತ್ರದುರ್ಗ ನಗರ ವ್ಯಾಪ್ತಿಯ 1ನೇ ಮಾಪನ ಕೇಂದ್ರದಲ್ಲಿ 4.6 ಮಿ.ಮೀ ಮಳೆಯಾದರೆ, ಎರಡನೇ ಮಾಪನ ಕೇಂದ್ರದಲ್ಲಿ 2.4 ಮಿ.ಮೀ ಮಳೆ ಸುರಿದಿದೆ. ಉಳಿದಂತೆ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ಭಾಗದಲ್ಲಿ ಮಳೆಯಾಗಿಲ್ಲ.
ಇನ್ನೂ ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.